Breaking News

ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ (ವಿಶೇಷ ಲೇಖನ)

Let’s celebrate Ganesh festival in an eco-friendly manner (Special Article)

ಜಾಹೀರಾತು
815c24df 7ec5 43ff 839c e1a41831de82

ಪ್ರತಿವರ್ಷದಂತೆ ಈ ವರ್ಷವು ಶ್ರದ್ಧೆ ಮತ್ತು ಭಕ್ತಿಯಿಂದ ಭಾದ್ರಪದ ಮಾಸಾ ಶುಕ್ಲಪಕ್ಷ ಚತುರ್ಥಿ ಎಂದು ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದ್ದು, ವಿದ್ಯೆ ಮತ್ತು ಜ್ಞಾನದ ಅಧಿಪತಿ ಸಂಪತ್ತು ಮತ್ತು ಅದೃಷ್ಠದ ಅಧಿನಾಯಕನಾದ ಮೋದಕ ಪ್ರಿಯ ಗಣೇಶನ ಜನನವನ್ನು ಸಾರುವ ಈ ಹಬ್ಬ ಹಿಂದುಗಳು ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ, ಪೂಜಿಸುತ್ತಾ ವಿನಾಯಕನ ಆರಾಧನೆ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು ವಿಶೇಷ ರೀತಿಯಲ್ಲಿ ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಿವ ಪಾರ್ವತಿಯರ ಮಗನಾದ ಗಣೇಶನಿಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಏಕದಂತ, ಮಂಗಲಮೂರ್ತಿ, ವಿಘ್ನೇಶ್ವರ, ಲಂಭೋದರ, ವಿನಾಯಕ, ಗಜಮುಖ, ಮುಷಿಕ ವಾಹನ ಸೇರಿದಂತೆ ಇತರೆ ಹಲವಾರು ಹೆಸರುಗಳಿವೆ.

82652ee0 9bc4 4dd9 b16a 209098be54d5

 ಗಣೇಶ ಹಬ್ಬವನ್ನು ಮರಾಠರು ತಮ್ಮ ಆಳ್ವಿಕೆಯಲ್ಲಿ ಉತ್ತುಂಗದ ಪ್ರಚಾರಕ್ಕೆ ತಂದರು. ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜ ಈ ಹಬ್ಬವನ್ನು ಆಚರಣೆಗೆ ತಂದ ಎಂದು ಇತಿಹಾಸಗಳು ಹೇಳುತ್ತವೆ. ಸ್ವಾತಂತ್ರ್ಯ ಪೂರ್ವದಲ್ಲಿ ಮನೆ ಮನೆಗಳ ಹಬ್ಬವಾಗಿದ್ದ ಗಣೇಶ ಚತುರ್ಥಿಯನ್ನು ಬಾಲ ಗಂಗಾಧರ ತಿಲಕರು ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡುವ ಸಲುವಾಗಿ ಈ ಹಬ್ಬವನ್ನು ಪ್ರಚುರಗೊಳಿಸಿದರು. 1892 ರಲ್ಲಿ ಮಹಾರಾಷ್ಟ್ರದಲ್ಲಿ ಬಾವ ಸಾಹೇಬ್ ಲಕ್ಷ್ಮಣ ಜವೇಲ್ ಅವರು ಪ್ರಥಮವಾಗಿ ಸಾರ್ವಜನಿಕ ಗಣೇಶ ಉತ್ಸವವನ್ನು ಆಚರಣೆ ಮಾಡಿದರು.
 ಈ ಬಾರಿಯೂ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಒ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಇದರಿಂದಾಗಿ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ದುಷ್ಟರಿಣಾಮ ಉಂಟಾಗುವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಅಲ್ಲದೇ ಸಾರ್ವಜನಿಕರ ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ 2016ರ ಜುಲೈ 20ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ಮುಂದೆ ರಾಜ್ಯದ ಯಾವುದೇ ಕೆರೆ ಮತ್ತು ಇತರೇ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಬೇಕಿದೆ.
 ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿ.ಒ.ಪಿ ಯಿಂದ ಗಣೇಶ ಮೂರ್ತಿ ತಯಾರಿಸಿ, ಮಾರಾಟ ಹಾಗೂ ವಿಸರ್ಜನೆಗೆ ಸಂಬಂಧಿಸಿದಂತೆ ದಿನಾಂಕ: 12.05.2020 ರಂದು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿ, ನೀರಿನ ಮೂಲಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಪಿಒಪಿ ಮೂರ್ತಿಗಳ ತಯಾರಿಸಿ, ಮಾರಾಟ ಹಾಗೂ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
 ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣಾ) ಕಾಯ್ದೆ, 1974ರ ಕಲಂ 33(ಎ) ಅಡಿಯಲ್ಲಿ ಈ ರೀತಿಯ ವಿಗ್ರಹಗಳ ಉತ್ಪಾದನಾ ಘಟಕವನ್ನು ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇರುತ್ತದೆ. ಈ ವಿಗ್ರಹಗಳನ್ನು ಯಾವುದೇ ನೀರಿನ ಮೂಲಗಳಿಗೆ ವಿಸರ್ಜನೆ ಮಾಡುವುದು ಕಾಯ್ದೆಯ ಕಲಂ 24ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಈ ಕಾಯ್ದೆಯ ಕಲಂ 41 ಹಾಗೂ 43ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಅಪರಾಧಕ್ಕೆ ದಂಡದೊಂದಿಗೆ ಕನಿಷ್ಠ ಒಂದೂವರೆ ವರ್ಷ ಹಾಗೂ ಗರಿಷ್ಠ ಆರು ವರ್ಷಗಳ ಕಾರಾಗೃಹವಾಸದ ಜೊತೆಗೆ ಈ ಉಲ್ಲಂಘನೆಗೆ ಪರಿಸರ (ಸಂರಕ್ಷಣಾ) ಕಾಯ್ದೆ 1986 ರಡಿಯಲ್ಲಿಯೂ ಸಹ ಕ್ರಮ ಜರುಗಿಸಬಹುದಾಗಿರುತ್ತದೆ. ಅಂತಹ ಉದ್ದಿಮೆ ಅಥವಾ ಉತ್ಪಾದನಾ ಘಟಕವನ್ನು ಪರಿಸರ (ಸಂರಕ್ಷಣಾ) ಕಾಯ್ದೆ, 1986 ಕಲಂ 5 ರಡಿಯಲ್ಲಿ ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಈ ಕಾಯ್ದೆಯ ಉಲ್ಲಂಘನೆ ಕಲಂ 15ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಅದಕ್ಕೆ ಗರಿಷ್ಠ ಒಂದು ಲಕ್ಷ ರೂಪಾಯಿಗಳ ದಂಡದೊಂದಿಗೆ ಗರಿಷ್ಠ 5 ವರ್ಷದ ಕಾರಾಗೃಹವಾಸದ ಶಿಕ್ಷೆಗೆ ಒಳಪಡಬೇಕಾಗುತ್ತದೆ.

b41da8a6 51f4 40bd bf8d 5c557d49c58a

ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಣ್ಣಿನಿಂದ ತೈಯಾರಿಸಿದ ಗಣಪತಿಗಳನ್ನು ನಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿ ಆಚರಿಸೋಣ. ರಾಸಾಯನಿಕ ಬಣ್ಣಗಳಿಂದ ತೈಯಾರಿಸಿದ ಗಣಪತಿಗಳನ್ನು ಬಳಸಿದರೆ ಅವುಗಳನ್ನು ನದಿ, ಭಾವಿ, ಹಳ್ಳ ಮತ್ತು ಕೆರೆ ಇತ್ಯಾದಿಗಳಲ್ಲಿ ವಿಸರ್ಜಿಸಿದಾಗ ಈ ವಿಗ್ರಹಗಳ ಮೂಲವಸ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಇದರ ರಾಸಾಯನಿಕ ಮೂಲ ಹೆಸರು “ಕ್ಯಾಲ್ಸಿಯಮ್ ಸಲ್ಪೇಟ್ ಹೆಮಿಹೈಡ್ರೇಟ್” ಇದರಿಂದ ತೈಯಾರಿಸಿದ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ, ಅವುಗಳು ನೀರಿನಲ್ಲಿ ನಿಧಾನವಾಗಿ ಕರಗುವುದರಿಂದ ನೀರಿನಲ್ಲಿನ ಕರಗಿದ ಆಮ್ಲಜನಕದ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗುತ್ತೆ ಹಾಗೂ ಅದರಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ನೀರಿನ ಶಾಶ್ವತ ಗಡಸುತನ ಸಹ ಹೆಚ್ಚಾಗುತ್ತದೆ. ವಿಗ್ರಹಗಳಲ್ಲಿ ಉಪಯೋಗಿಸಲಾದ ರಾಸಾಯನಿಕ ಯುಕ್ತ ಬಣ್ಣಗಳಲ್ಲಿರುವ ಭಾರಲೋಹಗಳಾದ ಮರ್ಕ್ಯುರಿ, ಆರ್ಸೆನಿಕ್, ಲೆಡ್, ಕ್ರೋಮಿಯಂ, ತಾಮ್ರ, ಕ್ಯಾಡ್ಯಿಯಂ, ಕೋಬಾಲ್ಟ್, ಸತು ಇತ್ಯಾದಿ ಹಾನಿಕಾರಕ ವಸ್ತುಗಳು ಕ್ರಮೇಣ ನೀರಿನಲ್ಲಿ ಬೆರೆತು ನೀರಿನ ಮೂಲಗಳು ಕುಲುಷಿತವಾಗುತ್ತವೆ. ಅಲ್ಲದೆ, ನೀರಿನಲ್ಲಿನ ವಿವಿಧ ಜೀವಿಗಳಾದ ಮೀನುಗಳು ಹಾಗು ಇತರೆ ಜಲಚರಗಳು ಸಾವನ್ನಪ್ಪುವ ಸಂಭವವಿರುತ್ತದೆ. ಈ ನೀರನ್ನು ಬಳಸುವಂತಹ ಸುತ್ತಮುತ್ತಲಿನ ಜನರು ಹಾಗು ಜಾನುವಾರುಗಳಿಗೆ ವಿವಿಧ ರೀತಿಯ ಕಾಯಿಲೆಗಳು ಮತ್ತು ಕ್ಯಾನ್ಸರ್‌ಕಾರಕವಾಗುವಂತಹ ಇತರೆ ರೋಗರುಜಿನಗಳು ಬರುವ ಸಾಧ್ಯತೆಯಿರುತ್ತವೆ ಎಂದು ಹಲವಾರು ವಿಶ್ಲೇಷಣೆ ಮತ್ತು ಅಧ್ಯಯನಗಳು ಹೇಳುತ್ತವೆ.
 ಗಣೇಶ ಆಚರಣೆ ಸಂದರ್ಭದಲ್ಲಿ ಹೆಚ್ಚಿನ ಪಟಾಕಿಗಳನ್ನು ಸಿಡಿಸದಂತೆ ನೋಡಿಕೊಳ್ಳಿ. ಇದರಿಂದ ಅಲ್ಲಿ ಸೇರಿರುವ ಜನರ ಕಣ್ಣಿಗೆ ಹಾನಿಯುಂಟಾಗುವ ಸಂಭವವಿರುತ್ತದೆ ಮತ್ತು ಶಬ್ಧ ಮಾಲಿನ್ಯದ ಜೊತೆಗೆ ಹೆಚ್ಚಿನ ಹೊಗೆ ಹರಡಿ ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತದೆ. ಗಣೇಶ ಪ್ರತಿಷ್ಠಾಪನೆ ಸ್ಥಳ ಹಾಗೂ ವಿಸರ್ಜನೆ ಮಾಹಿತಿಯನ್ನು ಗಣೇಶ ಮಂಡಳಿಯ ಸದಸ್ಯರು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ನೀಡಬೇಕು. ಇದರಿಂದ ಗಣೇಶ ವಿಸರ್ಜನೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಪೊಲೀಸರು ಮತ್ತು ಗೃಹ ರಕ್ಷಕ ದಳದವರು ಮುಂಜಾಗ್ರತೆ ವಹಿಸುತ್ತಾರೆ. ಗಣೇಶ ಹಬ್ಬದ ಆಚರಣೆ ಕುರಿತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಡಿಸುವ ಮಾರ್ಗ ಸೂಚಿಗಳನ್ನು ಎಲ್ಲರೂ ಪಾಲನೆ ಮಾಡುತ್ತ ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಶಾಂತಿಯುವಾಗಿ ಈ ವರ್ಷದ ಗಣೇಶ ಹಬ್ಬವನ್ನು ಸಂಭ್ರಮದಿAದ ಆಚರಿಸುವ ಮೂಲಕ ಮೋದಕಪ್ರೀಯ ಗಣೇಶನ ಪ್ರೀತಿಗೆ ನಾವೆಲ್ಲರೂ ಪ್ರಾತ್ರರಾಗೋಣ.

dr. suresh g

 ಲೇಖನ :- ಡಾ. ಸುರೇಶ ಜಿ.
 ಸಹಾಯಕ ನಿರ್ದೇಶಕರು,
 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.