Open to the plantation and horticulture campaign


45 ಲಕ್ಷಕ್ಕೂ ಹೆಚ್ಚಿನ ಸಸಿಗಳ ಹಾಗೂ ವಿವಿಧ ಪರಿಕರಗಳ ಬೇಡಿಕೆಯ ವಹಿವಾಟು
ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಆ.15 ರಿಂದ 20ರ ವರೆಗೆ ಹಮ್ಮಿಕೊಂಡಿದ್ದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2025 ಕ್ಕೆ ಬುಧವಾರದಂದು ತೆರೆ ದೊರೆತಿದ್ದು, 45 ಲಕ್ಷಕ್ಕೂ ಹೆಚ್ಚಿನ ಸಸಿಗಳ ಹಾಗೂ ವಿವಿಧ ಪರಿಕರಗಳ ಬೇಡಿಕೆಯ ವಹಿವಾಟು ಆಗಿದೆ.
ಕೊಪ್ಪಳ ನಗರದ ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಆವರಣದಲ್ಲಿ 6 ದಿನಗಳ ಕಾಲ ನಡೆದ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನದಲ್ಲಿ 25 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸ್ವದೇಶಿ ಮತ್ತು ವಿದೇಶ ಸಸಿಗಳ ಖರೀದಿಗೆ ರೈತರು ಮುಂಗಡವಾಗಿ ನೊಂದಾಯಿಸಿರುತ್ತಾರೆ ಹಾಗೂ 2000 ಎಕರೆಗೂ ಹೆಚ್ಚಿನ ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರು ಮಾವು, ಮೋಸಂಬಿ, ನೇರಳೆ, ಸೇಬು, ನಿಂಬೆ, ಹಲಸು ಹಾಗೂ ವಿದೇಶಿ ಸಸಿಗಳ ಹಾಗೂ ಸಾಂಬಾರ ಪದಾರ್ಥ ಬೆಳೆಯಲು ಮುಂಗಡವಾಗಿ ಸಸಿಗಳನ್ನು ಖರೀದಿಸಲು ನೊಂದಾಯಿಸಿರುತ್ತಾರೆ. ಇದರಿಂದ ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ಅನುಕೂಲವಾಗಲಿದೆ. ಮಾವು, ಪೇರಲ, ತೆಂಗು, ನುಗ್ಗೆ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದಿಸಿದ ತರಕಾರಿ ಸಸಿಗಳು, ಹೂವಿನ ಅಲಂಕಾರಿಕ ಸಸಿಗಳು, ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಎರೆಜಲ ಹಾಗೂ ವಿವಿಧ ಪರಿಕರಗಳನ್ನು ಖರೀದಿಸಲು ರೈತರು ಹಾಗೂ ಸಾರ್ವಜನಿಕರು ಬೇಡಿಕೆಯನ್ನು ಸಲ್ಲಿಸಿದಗದು, 45 ಲಕ್ಷಕ್ಕೂ ಹೆಚ್ಚಿನ ಸಸಿಗಳ ಹಾಗೂ ವಿವಿಧ ಪರಿಕರಗಳ ಬೇಡಿಕೆಯ ವಹಿವಾಟು ಮಾಡುವ ಮೂಲಕ ಸಸ್ಯಸಂತೆಯು ಯಶಸ್ವಿಯಾಗಿ ತೆರೆ ಕಂಡಿತು.
*ಕಾರ್ಯಕ್ರಮದ ಫಲಶೃತಿ:* ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2025 ಕಾರ್ಯಕ್ರಮವನ್ನು “ಕಡಿಮೆ ಖರ್ಚು ಕಡಿಮೆ ನಿರ್ವಹಣೆ ನಿರಂತರ ಆದಾಯ” ಎಂಬ ಪರಿಕಲ್ಪನೆಯೊಂದಿಗೆ ಹಾಗೂ ವಿದೇಶಿ ಹಣ್ಣುಗಳ ಸಸಿಗಳ ಪರಿಚಂದ ಮಾಡುವ ಮೂಲಕ ಉದ್ಘಾಟಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಹೊರ ಜಿಲ್ಲೆಯ ಹಾಗೂ ಸ್ಥಳಿಯ ರೈತರು ಭಾಗವಹಿಸಿ 100 ಕ್ಕೂ ಹೆಚ್ಚಿನ ಸ್ವದೇಶಿ ಹಾಗೂ ವಿದೇಶಿ ಹಣ್ಣಿನ ಸಸಿಗಳನ್ನು ಪರಿಚಯ ಮಾಡಿಕೊಂಡು ತಾವು ಸಹ ತಮ್ಮ ತೋಟದಲ್ಲಿ ಬೆಳೆಯುವ ಬಗ್ಗೆ ಆಸಕ್ತಿ ತೋರಿದ್ದಾರೆ. ಈ ಸಸ್ಯ ಸಂತೆಯಲ್ಲಿ ವಿದೇಶಿ ಸಸಿಗಳಲ್ಲಿ ಮುಖ್ಯವಾಗಿ ಮಿಯಾಜಾಕಿ ಮಾವಿನ ಸಸಿಗೆ ಸಾಕಷ್ಟು ಬೇಡಿಕೆ ಬಂದು ಜನರು ತಮ್ಮ ತೋಟದಲ್ಲಿ ಹಾಗೂ ಮನೆಯ ಹತ್ತಿರ ಬೆಳೆಯಲು 4 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ಖರೀದಿಸಲು ತಮ್ಮ ಹೆಸರು ನೊಂದಾಯಿಸಿದರು ಹಾಗೂ 2 ಸಾವಿರಕ್ಕೂ ಹೆಚ್ಚಿನ ಅವಕಾಡೋ ಹಣ್ಣಿನ ಗಿಡಗಳನ್ನು ಖರೀದಿಸಲು ಸಹ ಹೆಸರು ನೊಂದಾಯಿಸಿದರು. ಮೆಕಡೋಮಿಯಾ, ಮ್ಯಾಂಗೋಸ್ಟಿನ್, ಲಿಚ್ಚಿ, ವಿದೇಶಿ ಹಲಸು, ಚರ್ರಿ ಮುಂತಾದ ವಿದೇಶಿ ಹಣ್ಣಿನ ತಳಿಗಳ ಸಸಿಗಳು ಸೇರಿ 5 ಸಾವಿರಕ್ಕೂ ಹೆಚ್ಚಿನ ವಿದೇಶಿ ಹಣ್ಣಿನ ಸಸಿಗಳನ್ನು ತಮ್ಮ ತೋಟ ಮನೆಯ ಮುಂದೆ ನಾಟಿ ಮಾಡಲು ರೈತರು ಹಾಗೂ ಸಾರ್ವಜನಿಕರು ಸಸಿಗಳನ್ನು ಖರೀದಿಸಲು ನೊಂದಾಯಿಸಿರುತ್ತಾರೆ.

ತೋಟಗಾರಿಕೆ ಇಲಾಖಾ ಸಸ್ಯಾಗಾರದಲ್ಲಿ ಉತ್ಪಾದಿಸಿದ ಹಣ್ಣು- ಹಣ್ಣು ಸಸಿಗಳಾದ ಮಾವು (ಕೇಸರ್) 20 ಸಾವಿರ, ಲಿಂಬೆ 6 ಸಾವಿರ, ತೆಂಗು 15 ಸಾವಿರ, ಪೇರಲ ಎಲ್-49 ಸಸಿಗಳು 5 ಸಾವಿರ, ತೈವಾನ್ ಪಿಂಕ್ 1 ಸಾವಿರ, ತರಕಾರಿ ಸಸಿಗಳು 1 ಲಕ್ಷ, ನುಗ್ಗೆ 9 ಸಾವಿರ, ಕರಿಬೇವು 1 ಸಾವಿರ, ಡಾಗ್ ರಿಡ್ಜ್ 2 ಸಾವಿರ ಸಸಿಗಳು ಮತ್ತು ಅಲಂಕಾರಿಕ ಸಸಿಗಳಾದ ಗುಲಾಬಿ 5 ಸಾವಿರ, ರಾಯಲ್ ಪಾಮ್ 1500 ಸಸಿಗಳು, ಮನಿ ಪ್ಲಾಂಟ್ 600, ಕ್ಯಾಕ್ಟಸ್ ಮತ್ತು ಸೆಕ್ಯುಲೆಂಟ್ಸ್ 700, ಅಕೆಲಿಪಾ 250, ಅರೆಕಾಪಾಮ್ 800 ಸಸಿಗಳು, ಡೈಪನ್ ಬೇಕಿಯಾ 700, ದುರಂತಾ 2500, ನಂದಿಬಟ್ಟಲು 700, ಡೇಸಿನಾ 800, ತುಳಸಿ 400, ದುಂಡು ಮಲ್ಲಿಗೆ 2500 ಮತ್ತು ಇತರೇ 3200 ಸಸಿಗಳು ಸೇರಿ ಒಟ್ಟಾರೆ 3.50 ಲಕ್ಷಕ್ಕೂ ಹೆಚ್ಚಿನ ಸಸಿಗಳು ಮಾರಾಟವಾಗಿರುತ್ತವೆ.
ಕೇಸರ್ ಮಾವು, ಹೈಬ್ರಿಡ್ ಲಿಂಬೆ, ಪೇರಲ ಎಲ್ 49 ಮತ್ತು ತೈವಾನ್ ಪಿಂಕ್ ಮತ್ತು ಅರ್ಕಾ ಕಿರಣ್, ನುಗ್ಗೆ, ತೆಂಗು ಅರಸೀಕೆರೆ ಟಾಲ್ ಮತ್ತು ಹೈಬ್ರಿಡ್ ತಳಿಗಳು, ತರಕಾರಿ ಸಸಿಗಳಾದ ಮೆಣಸಿನಕಾಯಿ, ಟೊಮ್ಯಾಟೋ, ಬದನೆ ಕ್ಯಾಪ್ಟಿಕಮ್, ಹೂ ಕೋಸು ಎಲೆಕೋಸು, ಹೂ ಸಸಿಗಳಾದ ಚೆಂಡು ಹೂ, ಸೇವಂತಿಗೆ ಬೇಡಿಕೆ ಬಂದಿದೆ. ಇವುಗಳಲ್ಲದೇ ಅಲಂಕಾರಿಕ ಸಸಿಗಳಾದ ದಾಸವಾಳ ಹೈಬ್ರಿಡ್, ಡೇಸಿನಾ ರೆಡ್, ಫೈಕಸ್ ಸ್ಟಾರ್ ಲೈಟ್, ದೇವಕಣಗಿಲೆ, ನಂದಿಬಟ್ಟಲು, ಮಿನಿಕ್ರೋಟಾನ್ಸ್, ಕಲ್ಯಾಂಚೊ, ಅರೆಲಿಯಾ, ಮನಿಪ್ಲಾಂಟ್, ಸಿಂಗೋನಿಯಾ, ಪಾರಿಜಾತಾ, ಟೆಕೊಮಾ, ಒಕ್ಕೋರಾ, ಬೆಟ್ಟದ ನೆಲ್ಲಿ ಹಾಗೂ ಔಷಧಿ ಸಸ್ಯಗಳಾದ ಇನ್ಸೂಲಿನ್, ಚಕ್ರಮುನಿ, ಆಲ್ಪಸ್ಸೆಸ್, ರೋಜ್ ಮೇರಿ, ಸಸಿಗಳ ಬೇಡಿಕೆ ಇದ್ದು, ಒಟ್ಟು 4.50 ಲಕ್ಷ ಸಸಿಗಳ ಮುಂಗಡ ಬೇಡಿಕೆ ಕೊಪ್ಪಳ ಮತ್ತು ಇತರೆ ಜಿಲ್ಲೆಗಳ ರೈತರಿಂದ ಪಡೆಯಲಾಗಿರುತ್ತದೆ. ವಿಶೇಷವಾಗಿ 50 ಟನ್ ಎರೆಹುಳು ಗೊಬ್ಬರ, 10 ಸಾವಿರ ಲೀಟರ್ ಎರೆಜಲ ಮತ್ತು 5 ಸಾವಿರ ಕೆ.ಜಿ. ಬೇವಿನ ಪುಡಿಯನ್ನು ಈ ಸಸ್ಯ ಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಅಲ್ಲದೇ 500 ಕೆ.ಜಿ. ಜೈವಿಕ ಪರಿಕರಗಳನ್ನು ಸಹ ಮಾರಾಟ ಮಾಡಲಾಗಿದೆ.
*ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ:* ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಮಾದರಿ ಕೈತೋಟ, ತಾರಸಿ ತೋಟ, ವರ್ಟಿಕಲ್ ಗಾರ್ಡನ್ ಮತ್ತು ಹೈಡೋಫೋನಿಕ್ಸ್ ಪ್ರಾತ್ಯಕ್ಷಿಕೇಗಳನ್ನು ಮಾಡಲಾಗಿತ್ತು, ಇವುಗಳ ವೀಕ್ಷಣೆ ಮೂಲಕ ಸಾವಿರಾರು ರೈತರು ಮಾಹಿತಿ ಪಡೆದುಕೊಂಡರು. ರೈತರಿಗೆ ತಾಳೆಬೆಳೆ ಬೆಳೆಯುವ ಕುರಿತು ಮೆಗಾಡ್ರೈವ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 300 ಕ್ಕೂ ಹೆಚ್ಚಿನ ರೈತರು ತಾಳೆಬೆಳೆ ಬೆಳೆಯುವ ಬಗ್ಗೆ ಆಸಕ್ತಿ ತೋರಿ ತಮ್ಮ ಹೆಸರು ನೊಂದಾಯಿಸಿರುತ್ತಾರೆ.
ರೈತರಿಗಾಗಿ ಗಿಣಗೇರಾ ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣಾ ಪ್ರಯೋಗಾಲಯದ ವತಿಯಿಂದ ರೈತರಿಗೆ ಮಣ್ಣು ಮತ್ತು ನೀರು ಪರೀಕ್ಷೆ ಕುರಿತು ಮಾಹಿತಿ ನೀಡಲಾಯಿತು. ಫ್ಲೋರೆಜನ್ ಆರ್ಗ್ಯಾನಿಕ್ಸ್ ರವರಿಂದ ಹಲಸು ಬೆಳೆಯ ಬಗ್ಗೆ 2500 ರೈತರಿಗೆ ಸಾವಯವ ಕೃಷಿಯಲ್ಲಿ ಪದ್ಧತಿ ಮತ್ತು ದೃಢೀಕರಣ ಪಡೆಯುವ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಬನ್ ಕ್ರೆಡಿಟ್ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಹನಿ ನೀರಾವರಿ ಕಂಪನಿಗಳಾದ ಬಿ.ಎನ್.ಎಸ್. ಇರಿಗೇಷನ್, ಬಿ.ಕೆ. ಇರಿಗೇಷನ್ ರವರು ಹನಿ ನೀರಾವರಿ ಅಳವಡಿಸಲು ಒಟ್ಟು ಒಂದು ಸಾವಿರ ರೈತರಿಗೆ ಮನವರಿಕೆ ಮಾಡಿ ರೈತರಿಂದ ಅರ್ಜಿಗಳನ್ನು ಪಡೆದರು. ಹೊಸದಾಗಿ ತೋಟಗಾರಿಕೆ ಮಾಡುವ 5 ಸಾವಿರಕ್ಕೂ ಹೆಚ್ಚಿನ ರೈತರಿಗೆ ಇಲಾಖೆಯ ಅಧಿಕಾರಿಗಳು ಯೋಜನೆಗಳ ಕುರಿತು ಹಾಗೂ ತಾಂತ್ರಿಕ ಮಾಹಿತಿಯನ್ನು ನೀಡಿದರು.

ಇಲಾಖೆಯ ಯೋಜನೆಗಳು ಹಾಗೂ ವಿವಿಧ ವಿದೇಶಿ ಹಣ್ಣಿನ ಬೆಳೆಗಳ ಬೇಸಾಯ ಕ್ರಮಗಳ ತಾಂತ್ರಿಕ ಮಾಹಿತಿ ಬಗ್ಗೆ ಅಲ್ಲದೇ ರೈತರು ನಿರಂತರವಾಗಿ ಕೃಷಿಯಲ್ಲಿ ಆದಾಯ ಪಡೆಯುವುದರ ಬಗ್ಗೆ ಮತ್ತು ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ 100 ಕ್ಕೂ ಹೆಚ್ಚಿನ ಪ್ಲೇಕ್ಸ್ ಗಳನ್ನು ಅಳವಡಿಸಿ ರೈತರಿಗೆ ಮಾಹಿತಿ ನೀಡಲಾಯಿತು.
ಒಟ್ಟಾರೆ 6 ದಿನಗಳ ಕಾಲ ನಡೆದ ಸಸ್ಯ ಸಂತೆ ಮತ್ತು ತೋಟಗಾರಿಕೆ ಅಭಿಯಾನದಲ್ಲಿ ಅಂದಾಜು 10,000 ಕ್ಕೂ ಹೆಚ್ಚಿನ ಸ್ಥಳೀಯ ಹಾಗೂ ಹೊರ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.