National Librarians Day

ಗಂಗಾವತಿ : ದೇಶದ್ಯಾಂತ ಗ್ರಂಥಾಲಯಗಳು ಕಾರ್ಯನಿರ್ವಹಿಸಲು ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ನೀಡಿದ ಕೊಡುಗೆ ಅಪಾರವಾದದು ಎಂದು ತಾಪಂ ಇಓ ರಾಮರೆಡ್ಡಿ ಪಾಟೀಲ್ ಅವರು ಹೇಳಿದರು.
ನಗರದ ತಾಲೂಕ ಪಂಚಾಯತ್ ಮಂಥನ ಸಭಾಂಗಣದಲ್ಲಿ ಭಾರತದ ಗ್ರಂಥಾಲಯ ಚಳುವಳಿ ಪಿತಾಮಹ ಮತ್ತು ಗ್ರಂಥಾಲಯ ವಿಜ್ಞಾನ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್.ರಂಗನಾಥನರವರ ಜನ್ಮದಿನಾಚರಣೆ ನಿಮಿತ್ತ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಂಥಾಲಯಗಳ ಬೆಳವಣಿಗೆಗೆ ರಂಗನಾಥನ್ ಅವರ ಕೊಡುಗೆ ಸ್ಮರಿಸಬೇಕಿದೆ. ಹಳ್ಳಿಗಳಲ್ಲಿ ಸಾರ್ವಜನಿಕರು ಮಾಹಿತಿ, ಮನರಂಜನೆ, ಶಿಕ್ಷಣ ಜ್ಞಾನರ್ಜನೆ ಪಡೆಯಲು ಗ್ರಂಥಾಲಯಗಳ ಪಾತ್ರ ಬಹು ಮುಖ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಪಂಚಾಯತ್ ಗೊಂದು ಅರಿವು ಮತ್ತು ಮಾಹಿತಿ ಕೇಂದ್ರಗಳು ಕೆಲಸ ಮಾಡುತ್ತಿವೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಗ್ರಂಥಾಲಯಗಳು ಡಿಜಿಟಲ್ ಆಗಿ ಮಾರ್ಪಟ್ಟಿದ್ದು, ಪ್ರತಿಯೊಬ್ಬ ನಾಗರಿಕರು, ವಿದ್ಯಾರ್ಥಿಗಳು, ಯುವಕರು, ವಯೋವೃದ್ಧರು, ಹಿರಿಯ ನಾಗರಿಕರು, ಮಹಿಳೆಯರು, ವಿಶೇಷಚೇತನರು ಗ್ರಂಥಾಲಯ ಸದ್ಬಳಿಕೆ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಕೈಗೊಂಡಿರುವ ಯುವ ಸಮೂಹ ಗ್ರಂಥಾಲಯಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಜೂನಿಯರ್ ಕಾಲೇಜು ಗ್ರಂಥಪಾಲಕರಾದ ರಮೇಶ್ ಗಬ್ಬೂರು ಅವರು ಮಾತನಾಡಿ, ಗ್ರಂಥಾಲಯ ಹುಟ್ಟಿದ ಹಾಗೂ ಅದರ ಬೆಳವಣಿಗೆ, ಗ್ರಂಥಾಲಯದ ಪಂಚಸೂತ್ರಗಳ ವಿವರಣೆ, ರಂಗನಾಥ್ ಅವರು ಬರೆದಿರುವಂತಹ ಪುಸ್ತಕಗಳ ಹಾಗೂ ಅವುಗಳ ಮಹತ್ವದ ಬಗ್ಗೆ ವಿವರಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಡಾ.ವೆಂಕಟೇಶ ಬಾಬು ಅವರು ಮಾತನಾಡಿ, ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು ಗ್ರಂಥಾಲಯಗಳ ಪಾತ್ರ ಬಹುಮುಖ್ಯವಾಗಿದ್ದು, ವಿಭಿನ್ನ ಕಾರ್ಯಕ್ರಮಗಳ ಮೂಲಕ ಓದುಗರನ್ನು ಸೆಳೆಯುವ ಕೆಲಸವಾಗಬೇಕಿದೆ ಎಂದರು.
ಸನ್ಮಾನ : ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಸಹಕಾರದೊಂದಿಗೆ ಮಕ್ಕಳಿಗಾಗಿ ಅತ್ಯುತ್ತಮ ಚಟುವಟಿಕೆಗಳನ್ನು ಏರ್ಪಡಿಸಿದ ಹಾಗೂ ಇತರೆ ಸ್ವಯಂ ಶಿಕ್ಷಕರನ್ನು ಗುರುತಿಸಿ ಬೇಸಿಗೆ ಶಿಬಿರವನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಡೆಸಿದಂತಹ ಆನೆಗೊಂದಿ ಗ್ರಂಥಪಾಲಕರಾದ ವೆಂಕಟೇಶ್ ಆನೆಗುಂದಿ ಅವರನ್ನು ‘ಉತ್ತಮ ಗ್ರಂಥಪಾಲಕರು’ ಎಂದು ಗುರುತಿಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ತಾ.ಪಂ. ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಇಂದಿರಾ, ಗೌಸ್ ಮುಲ್ಲಾ, ತಾಲೂಕು ಪಂಚಾಯತ್ ಸಿಬ್ಬಂದಿ ರವೀಂದ್ರ ಕುಲಕರ್ಣಿ, ಗ್ರಂಥ ಪಾಲಕರ ಸಂಘದ ತಾಲೂಕು ಅಧ್ಯಕ್ಷ ಪರಶುರಾಮ್ ಕಟ್ಟಿಮನಿ. ಉಪಾಧ್ಯಕ್ಷ ವಿರುಪಮ್ಮ, ಟಾಟಾ ಕಲಿಕಾ ಟ್ರಸ್ಟ್ ಸಂಯೋಜಕ ಸತ್ಯ ರಾಜು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಸುಮಿತ್ರಾ , ತಾಲೂಕ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಎಲ್ಲಾ ಗ್ರಂಥಾಲಯಗಳ ಗ್ರಂಥ ಪಾಲಕರು ಉಪಸ್ಥಿತರಿದ್ದರು.