Gangavathi: Huge rally against Waqf Act

ಗಂಗಾವತಿ:ವಕ್ಫ್ ಕಾಯ್ದೆಗೆ ವಿರೋಧವಾಗಿ ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಶ್ರಯದಲ್ಲಿ “ವಕ್ಫ್ ಉಳಿಸಿ – ಸಂವಿಧಾನ ರಕ್ಷಿಸಿ” ಬೃಹತ್ ಸಮಾವೇಶ ನಡೆಯಿತು.
ಈ ಸಂದರ್ಭದಲ್ಲಿ ಹಲವು ಮುಸ್ಲಿಂ ಮುಖಂಡರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ವಕ್ಫ್ ಆಸ್ತಿಗಳನ್ನು ಸಂರಕ್ಷಿಸಲು ಹಾಗೂ ಸಂವಿಧಾನಿಕ ಹಕ್ಕುಗಳನ್ನು ಕಾಪಾಡಲು ಒಗ್ಗೂಡಬೇಕೆಂದು ಕರೆ ನೀಡಿದರು.

ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ವಕ್ಫ್ ಕಾಯ್ದೆಗೆ ವಿರೋಧವಾಗಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಸಂಘಟನೆಯ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಸುಮಾರು 20 ಕೋಟಿಗೂ ಹೆಚ್ಚು ಮುಸ್ಲಿಂ ಜನಸಂಖ್ಯೆ ಇದ್ದರೂ, “ಯಾವೊಬ್ಬರೂ ವಕ್ಫ್ ಆಸ್ತಿಗೆ ಸಂಬಂಧಿತ ಅರ್ಜಿ ಸಲ್ಲಿಸಿಲ್ಲ” ಎಂದು ಹೇಳಿ, ಕೇಂದ್ರ ಸರ್ಕಾರದ ಹೊಸ ವಕ್ಫ್ ಕಾಯ್ದೆಯ ವಿರುದ್ಧ ಎಸ್.ಡಿ.ಪಿ.ಐ ಪಕ್ಷದ ರಾಜ್ಯದ್ಯಕ್ಷ ಅಬ್ದುಲ್ ಮಜೀದ್ ತೀವ್ರ ವಾಗ್ದಾಳಿ ನಡೆಸಿದರು.
1995ರಲ್ಲಿ ಜಾರಿಗೊಂಡಿದ್ದ ವಕ್ಫ್ ಕಾಯ್ದೆಯನ್ನು ಮುಸ್ಲಿಂ ಸಮಾಜ ಸ್ವೀಕರಿಸಿ, ಇಂದಿನವರೆಗೆ ಅದರಂತೆ ನಡೆದುಕೊಂಡಿದ್ದೇವೆ ಎಂದು ಅವರು ನೆನಪಿಸಿದರು. “ವಕ್ಫ್ ಆಸ್ತಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಅವರ ಮಾವನವರು ವರದಕ್ಷಿಣೆಯಾಗಿ ಕೊಟ್ಟಿದ್ದಲ್ಲ. ಇದು ಸರ್ಕಾರದ ಆಸ್ತಿ ಅಲ್ಲ; ಮುಸ್ಲಿಂ ಸಮಾಜದ ಮುಖಂಡರು, ದಾನಿಗಳು, ಅಲ್ಲಾಹನ ಹೆಸರಿನಲ್ಲಿ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ದಾನವಾಗಿ ನೀಡಿದ ಆಸ್ತಿ” ಎಂದು ಸ್ಪಷ್ಟಪಡಿಸಿದರು.
ಹೊಸ ಕಾಯ್ದೆಯಲ್ಲಿ “ವಕ್ಫ್ ಆಸ್ತಿ ದಾನ ಮಾಡಲು ಐದು ವರ್ಷ ಪ್ರಾಕ್ಟಿಸಿಯನ್ ಮುಸ್ಲಿಂ ಆಗಿರಬೇಕು” ಎಂಬ ಶರತ್ತು ಸೇರಿಸಿರುವುದನ್ನು ಅವರು ವಿರೋಧಿಸಿದರು. “ಪ್ರಾಕ್ಟಿಸಿಯನ್ ಮುಸ್ಲಿಂ ಎಂದರೆ ದಿನಕ್ಕೆ ಐದು ಬಾರಿ ನಮಾಜ್ ಮಾಡುವುದು, ರೋಜಾ ಇಡುವುದು, ವಜು ಮಾಡುವುದು, ಧಾರ್ಮಿಕ ಹಾದಿಯಲ್ಲಿ ಸಾಗುವುದು. ಇದನ್ನೆಲ್ಲ ಯಾರು ಅಳೆಯುತ್ತಾರೆ? ಮೋದಿ ಮತ್ತು ಅಮಿತ್ ಶಾ ಮಸೀದಿಯ ಮುಂದೆ ಕೂತು ಅಳೆಯುತ್ತಾರ? ಇದು ಮೂರ್ಖತನದ ಪರಮಾವಧಿ” ಎಂದು ವ್ಯಂಗ್ಯವಾಡಿದರು.
“ನನ್ನ ಜಮೀನು ನನ್ನ ಹಕ್ಕು, ಯಾರಿಗೆ ಬೇಕಾದರೂ ದಾನ ಮಾಡಲು ನನಗೆ ಹಕ್ಕು ಇದೆ. ಅದನ್ನು ತಡೆಯಲು ಮೋದಿ-ಮತ್ತು ಅಮಿತ್ ಶಾ ಅವರಿಗೆ ಯಾವುದೇ ಅಧಿಕಾರವಿಲ್ಲ” ಎಂದು ಎಸ್.ಡಿ.ಪಿ.ಐ ಸಂಘಟನೆಯ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಕಿಡಿಕಾರಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮುಸ್ಲಿಂ ಸಮಾಜದ ಮುಖಂಡರು ಪ್ರತಿನಿಧಿಗಳು ಮಹಿಳೆಯರು ಯುವಕರು ಹಿರಿಯರು ಭಾಗವಹಿಸಿದ್ದರು.