Freedom of expression is the lifeblood of democracy: KV Prabhakar, media advisor to the Chief Minister.

ಬೆಂಗಳೂರು : ರಾಜ್ಯದಲ್ಲಿ ಪತ್ರಕರ್ತರ ಹಿತಕಾಯುವ ದೃಷ್ಟಿಯಿಂದ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಘಟಕವು ಉದ್ಘಾಟನೆಯಾಯಿತು. ಹಲವು ಮಠಾಧೀಶರು ,ಮಂತ್ರಿಗಳು, ಸಮಾಜದ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಸಂಘದ ಉದ್ಘಾಟನೆಗೆ ಸಾಕ್ಷಿಯಾದರು, ಇದೇ ಸಂದರ್ಭದಲ್ಲಿ ಮಠಾಧೀಶರಿಗೆ ಮಾಧ್ಯಮಶ್ರೀ ಪ್ರಶಸ್ತಿ, ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವಲಯದ ಆಯುಕ್ತರದ ಪಿ.ಜಿ.ಆರ್. ಸಿಂಧ್ಯಾ, 25 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೆ ಪುರಸ್ಕಾರ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು. ಸುಮಾರು 350ಕ್ಕೂ ಹೆಚ್ಚು ಪತ್ರಕರ್ತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲ್ಗೊಂಡಿದ್ದರು. ಸಂಘದ ರಾಜ್ಯಾಧ್ಯಕ್ಷರಾದ ಜಿ.ಎಂ.ರಾಜಶೇಖರ್ ಅವರ ಹಲವು ವರ್ಷಗಳ ಪತ್ರಿಕಾ ರಂಗದ ಸಾಧನೆಗೆ ಕಾರ್ಯಕ್ರಮವು ಸಾಕ್ಷಿಯಾಗಿತ್ತು .
ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತಿದ್ದರು ಸಹ ಪತ್ರಿಕೆಗಳು ಸಂವೇದನೆಯನ್ನು ಕಳೆದುಕೊಳ್ಳದೆ ಕೆಲಸ ಮಾಡುತ್ತಿದ್ದು ಸೂಕ್ಷ್ಮ ವಿಚಾರಗಳ ವರದಿಗಾರಿಕೆಯಲ್ಲಿ ಸೂಕ್ಷ್ಮ ಸಂವೇದನೆ ಅಗತ್ಯವಾಗಿದೆ ಎಂಬುದನ್ನು ತೋರಿಸಿಕೊಟ್ಟಿವೆ ಎಂದು ಅರಣ್ಯ ಸಚಿವ
ಈಶ್ವರ ಬಿ.ಖಂಡ್ರೆ ಅಭಿಪ್ರಾಯಪಟ್ಟರು.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ನೂತನ ರಾಜ್ಯ ಸಂಘ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕ ಅಭಿಪ್ರಾಯ ರೂಪಿಸುವ ಶಕ್ತಿ ಮಾಧ್ಯಮಗಳಿಗಿದ್ದು, ಈ ಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೋಮು ಘರ್ಷಣೆ, ಜಾತಿ, ಜನಾಂಗೀಯ ಸಂಘರ್ಷವೇ ಮೊದಲಾದ ಸೂಕ್ಷ್ಮ ವಿಚಾರಗಳ ವರದಿಗಾರಿಕೆಯಲ್ಲಿ ಮಾಧ್ಯಮಗಳು ಸೂಕ್ಷ್ಮ ಸಂವೇದನೆ ಹೊಂದಿರಬೇಕು. ಪ್ರಚೋದನಕಾರಿಯಾದ ವರದಿಗೆ ಕಡಿವಾಣ ಹಾಕಬೇಕು ಎಂದು ಕಿವಿಮಾತು ಹೇಳಿದರು.
ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗವನ್ನು ಒಳಗೊಂಡಿರುವ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಮಾಧ್ಯಮ ರಂಗಕ್ಕೆ ಮಹತ್ವದ ಸ್ಥಾನ ನೀಡಲಾಗಿದ್ದು, ಸಮಾಜದ ನಾಲ್ಕನೇ ಅಂಗ ಎಂದೂ ಪರಿಗಣಿಸಲಾಗಿದೆ ಎಂದರು.
ಅನಕ್ಷರತೆಯ ನಡುವೆಯೂ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಪತ್ರಿಕೆಗಳು ನಿರ್ವಹಿಸಿದ ಪಾತ್ರ ಅತ್ಯಂತ ಮಹತ್ವವಾದುದ್ದು. ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುವಲ್ಲಿ ದೇಶಪ್ರೇಮ ಮೂಡಿಸುವಲ್ಲಿ ಮಹಾತ್ಮಾ ಗಾಂಧೀ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಬಾಲ ಗಂಗಾಧರ ತಿಲಕ್ ಮೊದಲಾದವರು ಹೊರತರುತ್ತಿದ್ದ ಪತ್ರಿಕೆಗಳ ಕೊಡುಗೆ ಅನನ್ಯವಾದುದ್ದು ಎಂದರು.
11 ಕೋಟಿ ಸಸಿ ನೆಟ್ಟ ಸಾಧನೆ:
ಅರಣ್ಯ ಇಲಾಖೆಯ ಜವಾಬ್ದಾರಿಯನ್ನು ತಾವು ವಹಿಸಿಕೊಂಡ ಬಳಿಕ 2.3 ವರ್ಷಗಳಲ್ಲಿ ರಾಜ್ಯದಲ್ಲಿ 11ಕೋಟಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿರುವುದಾಗಿ ಅವರು ತಿಳಿಸಿದರು.
ಪತ್ರಕರ್ತರ ಶ್ರೇಯೋಭಿವೃದ್ಧಿಯೇ ಸಂಘದಧ್ಯೇಯ – ರಾಜಶೇಖರ್
ಕರ್ನಾಟಕ ಮಾಧ್ಯಮ ಪತಕರ್ತ ಸಂಘದ ರಾಜ್ಯದ್ಯಕ್ಷ ಜಿ.ಎಂ. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರ್ಕಾರ ಪತ್ರಕರ್ತರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆಯಾದರೂ, ಹಿರಿಯ ಪತ್ರಕರ್ತರಿಗೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು ಹೆಚ್ಚಳ ಮಾಡಬೇಕು. ವೃತ್ತಿ ಉದ್ದಕ್ಕೂ ಸದಾ ಒತ್ತಡದಲ್ಲಿ ಬದುಕುವ ಸಾಗಿಸಿರುವ ಪತ್ರಕರ್ತರ ಕೊನೆಯ ದಿನಗಳು ನೆಮ್ಮದಿಯಾಗಿರಲು ಪಿಂಚಣಿ ಹೆಚ್ಚಳ ಮಾಡಬೇಕು. ಆರೋಗ್ಯಕ್ಕೆ ರಕ್ಷಣೆ ವಿಚಾರದಲ್ಲಿ ಕನಿಷ್ಠ ಐದು ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಬೇಕು. ಸರ್ಕಾರ ಇದೀಗ ನೀಡುತ್ತಿರುವ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ವಿತರಣೆಗೆ ಇರುವ ನಿಯಮಾವಳಿಗಳನ್ನು ಸಡಿಲಗೊಳಿಸಬೇಕು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಮನವಿ ಮಾಡಿದರು.
ಪತ್ರಕರ್ತರ ಸಮಸ್ಯೆಗಳಿಗೆ ಮತ್ತು ಶ್ರೇಯೋಭಿವೃದ್ಧಿ ಶ್ರಮಿಸುವ ನಿಟ್ಟಿನಲ್ಲಿ ಸಂಘವು ಹಲವು ಕಾರ್ಯಚಟುವಟಿಕೆ ಹಮ್ಮಿಕೊಂಡಿದೆ. ಕೇವಲ ಪತ್ರಿಕಾ ಕ್ಷೇತ್ರಕ್ಕೆ ಸೀಮಿತವಾಗದೆ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕುಗಳಲ್ಲಿ ಕನಿಷ್ಠ ಒಂದು ಸಾವಿರ ಸಸಿ ನೆಟ್ಟು ಅದನ್ನು ಪೋಷಣೆ ಮಾಡುವ ಕಾರ್ಯಕ್ರಮ, ಪತ್ರಕರ್ತರಿಗೆ ಜಿಲ್ಲಾವಾರು ಕಾರ್ಯಾಗಾರ ಆಯೋಜನೆ ಮಾಡುವ ಮೂಲಕ ವೃತ್ತಿ ಕೌಶಲ್ಯವನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ಸಮಾಜದ ವ್ಯವಸ್ಥೆಗೆ ಪತ್ರಕರ್ತರೇ ಕೈಗನ್ನಡಿ : ಪಿಜಿಆರ್ ಸಿಂಧ್ಯಾ
ಭಾರತ್ ಸ್ಕೌಟ್ಸ್ ಅಂಡ್ ಗೈಡ್ ರಾಜ್ಯ ಮುಖ್ಯ ಆಯುಕ್ತರು, ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ನ್ಯಾಯಾಂಗದ ಬಗ್ಗೆ ಸಂಸತ್ತಿನಲ್ಲಿ ಒಡಕು ಮಾತು ಕೇಳಿ ಬರುತ್ತಿರುವುದು ಆತಂಕದ ವಿಚಾರವಾಗಿದೆ. ನ್ಯಾಯಾಂಗ ಸದಾ ಕಾಲ ಪಾವಿತ್ರ್ಯತೆಯಿಂದ ಕೂಡಿರಬೇಕು. ಈ ನಿಟ್ಟಿನಲ್ಲಿ ಶಾಸಕಾಂಗ, ಕಾರ್ಯಾಂಗ ಒಳಗೊಂಡಂತೆ ನಾಲ್ಕು ಅಂಗಗಳು ಬಲಿಷ್ಠವಾಗಿರಬೇಕು. ಇಲ್ಲದಿದ್ದರೆ ವ್ಯವಸ್ಥೆಯು ಮೂರು ಕಾಲಿನ ಖುರ್ಚಿಯಂತಾಗುತ್ತದೆ ಎಂದರು.
ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಅವರು ಜೆ.ಎಚ್. ಪಟೇಲ್ ಮತ್ತಿತರರನ್ನು ಡಾ.ರಾಜ್ ಕುಮಾರ್ ಬಳಿಗೆ ಕರೆದೊಯ್ದರು. ಆಗ ಡಾ. ರಾಜ್ ನಾನು ನಿಮ್ಮೆಲ್ಲರನ್ನೂ ಗೌರವಿಸುತ್ತೇವೆ. ಆದರೆ ಖಾದ್ರಿ ಶಾಮಣ್ಣ ಅವರನ್ನು ಅತಿ ಹೆಚ್ಚು ಗೌರವಿಸುತ್ತೇನೆ ಎಂದಿದ್ದರು.
1975ರ ಜೂನ್ 26 ರ ರಾತ್ರಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಸೇರಿದಂತೆ ಹಲವು ಘಟಾನುಘಟಿ ನಾಯಕರು ಶಾಸಕರ ಭವನದಲ್ಲಿದ್ದರು. ಮರು ದಿನ ಬಂದಾಗ ಶಾಸಕರ ಭವನ ಪೊಲೀಸರಿಂದ ತುಂಬಿತ್ತು. ಅಡ್ವಾಣಿ ಜೋರಾಗಿ ಮಾತನಾಡುತ್ತಿದ್ದರು. ಆಗ ಶಾಂತಚಿತ್ತರಾಗಿದ್ದ ವಾಜಪೇಯಿ ವಿನಾಶಕಾಲೆ ವಿಪರೀತ ಬುದ್ದಿ ಎಂದು ಪ್ರತಿಕ್ರಿಯಿಸಿದರು.
ಆಗ ಕನ್ನಡ ಪ್ರಭ ಪತ್ರಿಕೆಯಲ್ಲಿ ಸಂಪಾದಕೀಯ ಕಾಲಂ ಖಾಲಿ ಬಿಟ್ಟಿದ್ದರು. ನಮಗೆ ವಾಕ್ ಸ್ವಾತಂತ್ರ್ಯ ಇಲ್ಲ ಎಂಬುದು ಅದರ ಅರ್ಥ. ಇದನ್ನು ಕಂಡ ವಾಜಪೇಯಿ ದೂರವಾಣಿ ಮೂಲಕ ಖಾದ್ರಿ ಬಳಿ ಮಾತನಾಡಿ, ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ಒಬ್ಬೇ ಒಬ್ಬ ಪತ್ರಕರ್ತ ವಾಕ್ ಸ್ವಾತಂತ್ರ್ಯ, ಬರವಣಿಗೆ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವುದರ ವಿರುದ್ಧ ಪ್ರತಿಭಟನೆ ಮಾಡಲಿಲ್ಲ. ಇದು ಪತ್ರಿಕೋದ್ಯಮದ ದುರಂತ. ಆದರೆ ಖಾದ್ರಿ ಶಾಮಣ್ಣ ಇಡೀ ದೇಶದ ಗಮನ ಸೆಳೆದಿದ್ದರು. ಖಾದ್ರಿ ಶಾಮಣ್ಣ ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದ್ದ ಧೀಮಂತ ವ್ಯಕ್ತಿ ಎಂದು ಬಣ್ಣಿಸಿದರು.
ತುರ್ತು ಪರಿಸ್ಥಿತಿ ನಂತರ ಜನತಾ ಪಕ್ಷಕ್ಕೆ 340 ಸ್ಥಾನಗಳು ಬಂತು. ಆ ಫಲಿತಾಂಶ ಆಶ್ಚರ್ಯ ತಂದಿತ್ತು. ಇಡೀ ಪ್ರಪಂಚದಲ್ಲಿ ಭಾರತೀಯರು ತಮ್ಮ ಹಕ್ಕುಗಳನ್ನು ಹೇಗೆ ಚಲಾಯಿಸುತ್ತಾರೆ ಎಂಬುದಕ್ಕೆ ಇದು ನಿದರ್ಶನವಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದಾಗ “ಕನಕಪುರಕ್ಕೆ ದುಡಿಯೋ ಎತ್ತು ಬೇಕು, ದೊಡ್ಡ ಗೌಡ್ರು ಬೇಡ” ಎಂದು ಮತದಾರರೊಬ್ಬರ ಅಭಿಪ್ರಾಯವನ್ನು ಅತ್ಯಂತ ವಸ್ತುನಿಷ್ಠವಾಗಿ ಹಿಂದೂ ಪತ್ರಿಕೆ ಬರೆದಿತ್ತು. ನಾನು 45 ಸಾವಿರ ಮತ ಪಡೆದಿದ್ದೆ, ಗೌಡರು 15 ಸಾವಿರ ಮತಗಳನ್ನು ಪಡೆದರು. ಹೀಗಾಗಿ ಪತ್ರಕರ್ತರು ಯಾವುದನ್ನೂ ನಿರ್ಲಕ್ಷಿಸಬಾರದು. ವಸ್ತುನಿಷ್ಠವಾಗಿ, ಆಳವಾಗಿ ವಿಶ್ಲೇಷಿಸಿ ಬರೆಯಬೇಕು ಎಂದು ಸಲಹೆ ನೀಡಿದ ಅವರು, ಮಾಧ್ಯಮದಿಂದ ಜನಾಭಿಪ್ರಾಯ ಮೂಡಿಸಲು ಸಾಧ್ಯ ಎಂಬುದು ಸರಿಯಲ್ಲ. ಜನ ಮಾಧ್ಯಮಗಳಿಗಿಂತ ಬುದ್ದಿವಂತರು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಜೀವಳ : ಕೆ.ವಿ. ಪ್ರಭಾಕರ್
ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಶಕ್ತಿಯು ಮಾಧ್ಯಮಗಳಿಗಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರವು ಅತ್ಯಮೂಲ್ಯವಾದದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.
ಮಾಧ್ಯಮಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಪ್ರಾಣವಾಯು ಎನ್ನುವ ಅಂಬೇಡ್ಕರ್ ಅವರ ಮಾತು ಸದಾ ಜೀವಂತಿಕೆ ಪಡೆಯಬೇಕು, ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ಭಾರತೀಯ ಪತ್ರಿಕೋದ್ಯಮ ಸಮಾಜವನ್ನು ಒಗ್ಗೂಡಿಸುವಲ್ಲಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಸ್ವಾತಂತ್ರ್ಯಾ ಬಳಿಕ ಅಭಿವೃದ್ಧಿ ಪತ್ರಿಕೋದ್ಯಮ, ತನಿಖಾ ಪತ್ರಿಕೋದ್ಯಮದ ಮೂಲಕ ಸಮಾಜವನ್ನು ಎಚ್ಚರಿಸುವ ಹೊಣೆಗಾರಿಕೆಯನ್ನು ನಿರ್ವಹಿಸಿದ್ದವು. ಆದರೆ ಇಂದು ಅರೆಸತ್ಯ ಮತ್ತು ಸುಳ್ಳು ಸುದ್ದಿಗಳು ಭಾರತೀಯ ಪತ್ರಿಕೋದ್ಯಮದ ಈ ಮಹೋನ್ನತ ಘನತೆಯನ್ನು ಹಾಳುಗೆಡಹುವ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಕರ್ತರು, ಸಂಪಾದಕರು ಆಗಿದ್ದ ಅಂಬೇಡ್ಕರ್ ಅವರು ಸಂಘಟನೆ ಮತ್ತು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಸಂಘಟಕ ಧ್ವನಿ ಸರ್ಕಾರದ ಮತ್ತು ಸಮಾಜದ ಕಣ್ಣು ತೆರೆಸುತ್ತವೆ ಎಂದಿದ್ದರು.
ಪತ್ರಿಕಾ ಸಂಘಟನೆಗಳು, ಪತ್ರಕರ್ತರ ಸಂಘಗಳು ಪ್ರಜಾಪ್ರಭುತ್ವ ಮತ್ತು ಮಾಹಿತಿ ಹಕ್ಕುಗಳ ರಕ್ಷಣೆಗೆ ಪ್ರಮುಖ ಅಸ್ತ್ರಗಳು ಎನ್ನುವುದನ್ನು ನಾವು ಮರೆಯಬಾರದು ಎಂದರು.
ಮಾಧ್ಯಮವನ್ನು ಜನಪರವಾಗಿ, ಭಯಮುಕ್ತವಾಗಿಡಲು ಪತ್ರಕರ್ತರು ಯಾವುದೇ ಹಿಂಜರಿಕೆ ಇಲ್ಲದೆ ವರದಿ ಮಾಡಲು ಇದು ಸಹಾಯ ಮಾಡುವ ರೀತಿಯಲ್ಲಿ ಸಂಘಟನೆಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಮಾಧ್ಯಮ ಸಂಘಟನೆಗಳು ಪತ್ರಕರ್ತರಿಗೆ ನೈತಿಕ ಮಾರ್ಗಸೂಚಿಗಳನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಸುಪ್ರೀಂಕೋರ್ಟ್ ಮತ್ತು ಹೈ ಕೋರ್ಟ್ ಗಳು ಹಲವು ಸಂದರ್ಭಗಳಲ್ಲಿ ಮಧ್ಯಮಗಳಿಗೆ ಎಚ್ಚರಿಸಿವೆ. “ಸ್ವಯಂ ನೈತಿಕ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ” ಸೂಚನೆಗಳನ್ನು ನೀಡಿರುವುದು ಗಂಭೀರವಾದ ಸಂಗತಿ ಎಂದರು.
ಇದು ಮಾಧ್ಯಮದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇದನ್ನು ನಾವೆಲ್ಲಾ ಪೋಷಣೆ ಮಾಡೋಣ ಎಂದರು.
ಪತ್ರಕರ್ತರ ಪಿಂಚಣಿಯ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಡು ಸಿದ್ದೇಶ್ವರ ಸಂಸ್ಥಾನ ಮಠದ ಶಿವಯೋಗಿಶ್ವರ ಮಹಾಸ್ವಾಮಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮ ಕರ್ತ ಡಾ.ಜಿ.ಬೀಮೇಶ್ವರ ಜೋಶಿ, ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ, ಚಿಕ್ಕಮಗಳೂರಿನ ಬೇರುಗುಂಡಿ ಬೃಹನ್ಮಠದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಮಾಧ್ಯಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಜಿ ಸಚಿವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕರ್ನಾಟಕ ವಲಯ ಆಯುಕ್ತರದ ಪಿ.ಜಿ.ಆರ್. ಸಿಂಧ್ಯಾ, ಪತ್ರಕರ್ತರು, ಉದ್ಯಮಿಗಳು, ರಕ್ಷಣಾ ಏರೋ ಸ್ಪೇಸ್ ಹಾಗೂ ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರಿಗೆ ಮಾಧ್ಯಮ ಪತ್ರಕರ್ತರ ಸಂಘದ ವತಿಯಿಂದ 2025 -26 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಶಾ ಖಾನಂ, ಸಂಘದ ಕಾನೂನು ಸಲಹೆಗಾರರು ಹೈಕೋರ್ಟ್ ವಕೀಲರಾದ ಎಂ.ಪಿ. ಅಮೃತೇಶ್, ಸಂಘದ ಮೈಸೂರು ವಲಯ ಉಪಾಧ್ಯಕ್ಷರದ ಟಿ.ಪಿ. ಕೃಷ್ಣನ್, ದಕ್ಷಿಣ ಕನ್ನಡ ವಲಯದ ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಉತ್ತರ ಕರ್ನಾಟಕ ವಲಯದ ಉಪಾಧ್ಯಕ್ಷ ದಾನಯ್ಯ ವಿ.ಹಿರೇಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಂಗಾರಪ್ಪ, ಖಜಾಂಚಿ ಎಂ.ಸಿ.ಮಂಜುನಾಥ್, ರಾಜ್ಯ ಸಮಿತಿ ಸದಸ್ಯ ರೂಪೇಶ್ ಕುಮಾರ್, ಮಲ್ಲಿಕಾರ್ಜುನ ಹೊಸಕೇರಾ, ರಘು ಮಂಡ್ಯ, ಸೇರಿದಂತೆ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.