Theft at Singanala Kariamma Devi Temple

ದೇವಿಯ ಆಭರಣ ಹುಂಡಿಯ ಹಣ ದೋಚಿದ ಕಳ್ಳರು
ಕಾರಟಗಿ : ತಾಲೂಕಿನ ಸಿಂಗನಾಳ ಗ್ರಾಮದ ಅರಾಧ್ಯ ದೈವ ಶ್ರೀ ಕರಿಯಮ್ಮ ದೇವಿಯ ದೇವಸ್ಥಾನದಲ್ಲಿ ಜುಲೈ-22 ಮಂಗಳವಾರ ಮಧ್ಯರಾತ್ರಿಯ ಸಮಯದಲ್ಲಿ ಕಳ್ಳರ ಕೈಚಳಕ ನಡೆದಿದ್ದು, ದೇವಿಯ ಬೆಳ್ಳಿ ಮತ್ತು ಬಂಗಾರದ ಆಭರಣಗಳು, ಮೂರು ಲಕ್ಷಕ್ಕೂ ಅಧಿಕ ಹುಂಡಿಯ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಜುಲೈ-23 ಬುಧವಾರ ಬೆಳ್ಳಂಬೆಳಗ್ಗೆ ಬೆಳಕಿಗೆ ಬಂದಿದೆ.
ಗರ್ಭಗುಡಿಯ ಮುಂಭಾಗದಲ್ಲಿ ಇರಿಸಲಾಗಿದ್ದ ಲಾಕರ್ ರೂಪದ ಹುಂಡಿಯಲ್ಲಿ ಎರಡು ಮೂರು ವರ್ಷಗಳಿಂದ ಭಕ್ತರು ಸಲ್ಲಿಸಿದ್ದ ಮೂರು ಲಕ್ಷಕ್ಕೂ ಅಧಿಕ ಹಣ ಹಾಗೂ ಅದೇ ಲಾಕರ್’ನಲ್ಲಿ ಇರಿಸಲಾಗಿದ್ದ 75 ಗ್ರಾಂ ದೇವಿಯ ಬಂಗಾರದ ಆಭರಣ ಹಾಗೂ 280ಗ್ರಾಂ ಬೆಳ್ಳಿಯ ಆಭರಣವನ್ನು ಕಳ್ಳರು ಹುಂಡಿಯ ಸಮೇತ ದೋಚಿ ಪರಾರಿಯಾಗಿದ್ದಾರೆ. ಮರುದಿನ ಬೆಳ್ಳಂ ಬೆಳಗ್ಗೆ ಯತಾರೀತಿಯಾಗಿ ಪೂಜೆ ಸಲ್ಲಿಸಲು ಬಂದಿದ್ದ ಪೂಜಾರಿಯು ಹುಂಡಿ ಕಳ್ಳತನವಾಗಿರುವುದನ್ನು ಕಂಡು ಗ್ರಾಮಸ್ಥರಿಗೆ ತಿಳಿಸಿದ್ದಾರೆ

. ನಂತರ ಗ್ರಾಮಸ್ಥರು ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುತ್ತಿದ್ದಂತೆ ಶ್ವಾನದಳದ ಮೂಲಕ ಪೊಲೀಸರು ಆಗಮಿಸಿ ಶೋಧನಾ ಕಾರ್ಯ ಆರಂಭಿಸಿದ್ದರು ಕಳ್ಳರ ಸುಳಿವು ದೊರೆತಿರುವುದಿಲ್ಲ. ಜನಗಳು ನಂಬುವ ದೇವರ ಜಾಗದಲ್ಲಿಯೇ ಕಳ್ಳತನವಾಗುತ್ತಿದ್ದು ಮುಂದೊಂದು ದಿನ ಜನಸಾಮಾನ್ಯರು ಆಭರಣಗಳನ್ನು ಧರಿಸಿ ನಡೆದಾಡುವುದು ಕಷ್ಟವಾಗುತ್ತದೆ. ಇಂತ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದು ಕೂಡಲೇ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಕಳ್ಳರನ್ನು ಪತ್ತೆ ಹಚ್ಚುವದಾಗಿ ಪೊಲೀಸರು ಭರವಸೆ ನೀಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
