Bhoomi Puja for Rs 24.98 crore project: MLA Savadi

ಅರಟಾಳ : ಕರ್ನಾಟಕ ರಾಜ್ಯದಲ್ಲಿ ಪ್ರ ಪ್ರಥಮ ಬಾರಿಗೆ 2006ರಲ್ಲಿ ಅಥಣಿ ತಾಲೂಕಿನ ಐಗಳಿ, ಮದಬಾವಿ, ಬಳ್ಳಿಗೇರಿ 3 ಸಂಯುಕ್ತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ರಾಜ್ಯಕ್ಕೆ ಮಾದರಿ ಹಾಗೂ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಅರಟಾಳ ಸಮೀಪದ ಐಗಳಿ ಕ್ರಾಸ್‌ನಲ್ಲಿ 24.98 ಕೋಟಿ ರೂ. ವೆಚ್ಚದ ಸಂಯುಕ್ತ ಕುಡಿಯುವ ನೀರಿನ ಪುನಶ್ಚತನ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ, 2006ರಲ್ಲಿ ಆಗಸ್ಟ್ ನಲ್ಲಿ ತಾಲೂಕಿನಲ್ಲಿ ಒಂದೆಡೆ ಕೃಷ್ಣಾ ನದಿ ಪ್ರವಾಹ ಬಂದು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ಭರದಿಂದ ಸಾಗಿದರೆ, ಇದೇ, ತಾಲೂಕಿನ ತೆಲಸಂಗ ಹಾಗೂ ಅನಂತಪುರ ಹೋಬಳಿಗಳಲ್ಲಿ 3 ಕಿ.ಮೀ ದೂರ ಹೋಗಿ ಕುಡಿಯಲು ನೀರು ತರುವ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾದೆ. ಅಂದಿನ ಮುಖ್ಯಮಂತ್ರಿ ಧರ್ಮಸಿಂಗ ಅವರಿಗೆ ಪರಿಸ್ಥಿತಿ ವಿವರಿಸಿ ಮನದಟ್ಟು ಮಾಡಿದ ಮೇಲೆ 15 ಕೋಟಿ ವೆಚ್ಚದ 3 ಸಂಯುಕ್ತ ಕುಡಿಯುವ ನೀರು ಯೋಜನೆಗಳು ಅನುಷ್ಠಾನಕ್ಕೆ ಬಂದ ಫಲವಾಗಿ ಕುಡಿಯುವ ನೀರಿನ ಸಮಸ್ಯೆ ತಿಳಿಯಾಯಿತು. ರಾಜ್ಯದ 160 ಸಂಯುಕ್ತ ಕುಡಿಯುವ ನೀರಿನ ಯೋಜನೆಗಳಿದ್ದು, 2400 ಹಳ್ಳಿಗಳು ಒಳಪಟ್ಟಿವೆ. ಈಗ ಈ ಮೂರು ಯೋಜನೆಗಳಿಗೆ 68 ಕೋಟಿ ಪುನಶ್ಚತನಕ್ಕೆ ಮಂಜೂರಾಗಿದೆ. ಅದರಲ್ಲಿ 220 ಮೆ.ವ್ಯಾ. ನೀರೆತ್ತುವ ಮೋಟರ್ ಪಂಪ್, ಅಲ್ಲಲ್ಲಿ ೩೦ ಕಿ.ಮೀ. ಪೈಪಲೈನ್ ಸೇರಿದಂತೆ ಸರಾಗವಾಗಿ ನೀರು ಸರಬರಾಜಿಗೆ ಅನುಕೂಲವಾಗುವಂತೆ ಎಲ್ಲ ಸೌಕರ್ಯಗಳನ್ನು ನೂತನ ತಂತ್ರಜ್ಞಾನದೊಂದಿಗೆ ಮಾಡಲಾಗುವದು. ಬರಗಾಲದ ಬವಣೆ ನೀಗಿಸಿ ರೈತರ ನೆಮ್ಮದಿ ಬದುಕಿಗೆ ಶ್ರಮಿಸಿ ಯಶಸ್ವಿಯಾದ ತೃಪ್ತಿ ನನಗಿದೆ. 8 ರಿಂದ 10 ತಿಂಗಳಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಅಥಣಿ ಗ್ರಾಮಿಣ ಮತ್ತು ನೈರ್ಮಲ್ಯ ಇಲಾಖೆ ಸ.ಕಾ.ನಿ. ಅಭಿಯಂತರ ರವೀಂದ್ರ ಮುರಗಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಕಮರಿ, ಐಗಳಿ, ಅಡಹಳ್ಳಿ, ಕೊಟ್ಟಲಗಿ, ತೆಲಸಂಗ, ಕೊಹಳ್ಳಿ, ಕನ್ನಾಳ, ಬನ್ನೂರ, ಬಾವನದಡ್ಡಿ, ಬಾಡಗಿ ಗ್ರಾಮಗಳಿಗೆ ಈ ಯೋಜನೆಯಿಂದ ಹೊಸ ತಂತ್ರಜ್ಞಾನ ಮೂಲಕ ಪ್ರತಿದಿನ ವ್ಯಕ್ತಿಗೆ 55 ಲೀ ನೀರು ಪೂರೈಸಲು ಸಹಕಾರಿಯಾಗಲಿದೆ ಎಂದರು.
ಶ್ರೀ ಲಕ್ಷಣ ಸಂಗಪ್ಪಾ ಸವದಿ
ಬೆಂಗಳೂರ ಮಾಲೂ ಕನ್ಸಟ್ರಕ್ಷನ್‌ನ ನವೀನ ನಾಗನೂರ ಹಾಗೂ ಸಿಬ್ಬಂದಿ ಮಾನ್ಯ ಲಕ್ಷ್ಮಣ ಸಂ. ಸವದಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಶೇಖರ ನೇಮಗೌಡ, ಸಿದ್ದರಾಯ ಯಲಡಗಿ, ಶ್ಯಾಮ ಪೂಜಾರಿ, ಸುಶೀಲಕುಮಾರ ಪತ್ತಾರ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಗುರು ದಾಶ್ಯಾಳ, ನೂರಹಮ್ಮದ ಡೊಂಗರಗಾಂವ, ಪ್ರಲ್ಲಾದ ಪಾಟೀಲ, ಗ್ರಾಪಂ ಅಧ್ಯಕ್ಷರಾದ ಬಸವಂತ ಗುಡ್ಡಾಪುರ, ನಾನಾಗೌಡ ಪಾಟೀಲ, ವೆಂಕಣ್ಣಾ ಅಸ್ಕಿ, ಶಿವಾನಂದ ತೇಲಿ, ಶ್ರೀಶೈಲ ಶೆಲ್ಲೆಪ್ಪಗೋಳ, ಇಂಜಿನಿಯರ್ ಬಸವರಾಜ ಪಾಟೀಲ, ತಾ.ಪಂ. ಇ.ಒ. ಶಿವಾನಂದ ಕಲ್ಲಾಪುರ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಹಾಗೂ ರೈತರು ಪಾಲ್ಗೊಂಡಿದ್ದರು. ಕೇದಾರಿ ಬಿರಾದಾರ ನಿರೂಪಿಸಿದರು. ರವಿ ಮೂರಗಾಲಿ ಸ್ವಾಗತಿ ವಂದಿಸಿದರು.