Ink on stage banner: State Secretary Asif Hussain boycotts Congress swearing-in ceremony

ಗಂಗಾವತಿ: ನಗರದ ಅಮರ್ ಗಾರ್ಡನ್ ನಲ್ಲಿ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಯುವ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ವೇದಿಕೆ ಬ್ಯಾನರ್ ಗೆ ಮಸಿ ಬಳಿದ ಹಿನ್ನೆಲೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಮಹಮ್ಮದ ಆಸೀಫ್ ಹುಸೇನ್ ಹಾಗೂ ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮಿದ್ ಮನಿಯಾರ್ ಇತರರು ಕಾರ್ಯಕ್ರಮ ಬಹಿಷ್ಕರಿಸಿದ ಘಟನೆ ಬುಧವಾರ ನಡೆದಿದೆ.
ಕಾರ್ಯಕ್ರಮದ ವೇದಿಕೆ ಬ್ಯಾನರ್ ನ ಮಹಮ್ಮದ ಆಸೀಫ್ ಅವರ ಭಾವಚಿತ್ರಕ್ಕೆ ಮಾಜಿ ಸಚಿವ ಅನ್ಸಾರಿ ಬೆಂಬಲಿಗರು ಮಸಿ ಹಚ್ಚಿ ಗೊಂದಲ ಸೃಷ್ಟಿಸಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್ ಮತ್ತು ಮುಖಂಡರಾದ ಅರಸನಕೇರಿ ಹನುಮಂತ ಮತ್ತು ಬೆಂಬಲಿಗರನ್ನು ಕೆರಳಿಸಿದೆ. ಈ ಕುರಿತು ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರ ಗಮನಕ್ಕೆ ತರಲಾಗಿದ್ದು ಜಿಲ್ಲಾ ಮುಖಂಡರೊಂದಿಗೆ ಚರ್ಚಿಸಿ ಗೊಂದಲಗಳಿಗೆ ಇತಿಶ್ರೀ ಹಾಡುವುದಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಬಯ್ಯಾಪುರ್ ತಿಳಿಸಿದ್ದಾರೆ.

ಗಂಗಾವತಿ ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲಿದ್ದು, ಪರಸ್ಪರ ಕಾಲೆಳೆದುಕೊಳ್ಳುವ ಮೂಲಕ ಚುನಾವಣೆಗಳಲ್ಲಿ ಪರಾಭವಗೊಳ್ಳುತ್ತಿದ್ದಾರೆ.
ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹಾಗು ಸಂಸದ ರಾಜಶೇಖರ್ ಹಿಟ್ನಾಳ್ ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿ ಹೊರಟು ಹೋಗಿದ್ದು, ಖಾಲಿಕುರ್ಚಿ ಮುಂದೆ ಭಾಷಣ ಬಿಗಿದಿದ್ದಾರೆ. ಅನ್ಸಾರಿ ಮತ್ತು ಆಸೀಫ್ ಬೆಂಬಲಿಗರ ಮದ್ಯೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಯಾವಾಗ ಸಿಡಿಯುತ್ತೋ ಎಂದು ಮುಖಂಡರು ಆತಂಕದಲ್ಲಿದ್ದಾರೆ. ಉತ್ಸಾದಿಂದ ಪಕ್ಷಕಟ್ಟುವವರಿಗೆ ಕೊಡಲಿಪೆಟ್ಟು ನೀಡಲಾಗುತ್ತಿದ್ದು ಹತಾಶೆಗೊಳ್ಳದೆ ನಿಷ್ಠೆಯಿಂದ ಪಕ್ಷ ಕಟ್ಟುವುದಾಗಿ ಆಸೀಫ್ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.