Raichur Fort lighting plan: Demo viewing by District Magistrate

ರಾಯಚೂರ ಜುಲೈ 15 (ಕ.ವಾ.): ಐತಿಹಾಸಿಕ ರಾಯಚೂರು ಸಿಟಿಯನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ವಿಶೇಷವಾಗಿ ರೂಪಿಸಿರುವ ರಾಯಚೂರ ಕೋಟೆಗೆ ದೀಪಾಲಂಕಾರ ಯೋಜನೆಯ ಮೊದಲ ಹಂತದ ಡೆಮೊ ವೀಕ್ಷಣೆಯು ಜುಲೈ 15ರಂದು ನಡೆಯಿತು.
ಇದಕ್ಕಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡುವ ಕೋಟೆದ್ವಾರದ ಬಳಿಯ ಎಡಗಡೆಯ ಸ್ಥಳವಾದ
ಬಯಲು ಗ್ರಂಥಾಲಯದ ಆವರಣದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ ವೇಳೆಗೆ ಡೆಮೋ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪತ್ರ ಅವರು ಲೈಟಿಂಗ್ ವ್ಯವಸ್ಥೆಯ ಪ್ರಾತ್ಯಕ್ಷಿಕೆಯ ವೀಕ್ಷಣೆ ನಡೆಸಿದರು.
ಕೆಲ ಮಾರ್ಪಾಡುಗಳನ್ನು ಮಾಡುವುದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ತಂಡದೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಅಯುಕ್ತರು ಚರ್ಚಿಸಿದರು. ಬೆಂಗಳೂರಿನ ವಿಧಾನಸೌಧ ಮಾದರಿಯಲ್ಲಿ ರಾಯಚೂರ ಕೋಟೆಗೆ ದೀಪಾಲಂಕಾರ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಾಂತ್ರಿಕ ತಂಡಕ್ಕೆ ಸೂಚನೆ ನೀಡಿದರು.
ಸ್ವಾತಂತ್ರ್ಯೊತ್ಸವ, ಪ್ರಜಾರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವದಂತಹ ನಾನಾ ರಾಷ್ಟ್ರೀಯ ಹಬ್ಬಗಳು ಮತ್ತು ಇನ್ನೀತರ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಹತ್ವದ ಸಂದೇಶ ಕೊಡುವ ನಿಟ್ಟಿನಲ್ಲಿ ಬಹುವರ್ಣದ ದೀಪಾಲಂಕಾರಕ್ಕಾಗಿ ಬೀಮ್ ಮೂವಿಂಗ್ ಹೆಡ್ ಲೈಟ್ಸನ ವ್ಯವಸ್ಥೆ ಮಾಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ತಂತ್ರಜ್ಞರಿಗೆ ಸೂಚನೆ ನೀಡಿದರು.
ನಗರದ ಶ್ರೀ ಬಸವೇಶ್ವರ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣದ ಕೋಟೆ ದ್ವಾರದವರೆಗೆ ಮತ್ತು ಬಸ್ ನಿಲ್ದಾಣದ ಆವರಣಕ್ಕೆ ಹೊಂದಿಕೊಂಡ ಕೋಟೆ ಗೋಡೆಗೆ ಅಂದಾಜು 400 ಲೈಟಿಂಗ್ ಅಳವಡಿಸಿ ದೀಪಾಲಂಕಾರ ಮಾಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತಾಂತ್ರಿಕ ತಂಡದವರು ಮಾಹಿತಿ ನೀಡಿದರು.
ಈ ವೇಳೆ ಡಿಎಚ್ಓ ಡಾ.ಸುರೇಂದ್ರಬಾಬು, ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಡೈರೆಕ್ಟರ್ ಮೋಹನ ಕೃಷ್ಣ, ಮಹಾನಗರ ಪಾಲಿಕೆಯ ಎಲೆಕ್ಟ್ರಿಕಲ್
ವಿಭಾಗ, ಸಿವಿಲ್ ವಿಭಾಗದ ಅಭಿಯಂತರರಾದ ರಮೇಶ, ಮಹೇಶ, ನಿರ್ಮಿತಿ ಕೇಂದ್ರದ ಅಭಿಯಂತರ ಲೂತರ್, ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ನ ಗುರು ಸೇರಿದಂತೆ ಇನ್ನೀತರರು ಇದ್ದರು.