Breaking News

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice Chancellor Prof. Sivananda Kannimani hopes




ರಾಯಚೂರು ಜುಲೈ 08 (ಕರ್ನಾಟಕ ವಾರ್ತೆ): ರಾಯಚೂರ ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿ ಅರಿತು, ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಸಿಗುವಂತಾಗಬೇಕು ಎಂಬ ಆಶಯ ಹೊಂದಿ ರಾಯಚೂರು ಜಿಲ್ಲೆಯಲ್ಲಿರುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆಯೊಂದಿಗೆ ತಾವು ನೂತನ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದು, ಈ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸಬೇಕು ಎಂಬ ಮಹತ್ತರವಾದ ಕಾರ್ಯಕ್ಕೆ ತಾವು ಪ್ರತಿಯೊಬ್ಬರ ಸಹಕಾರ ಕೋರುವುದಾಗಿ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದರು.
ರಾಯಚೂರ ತಾಲೂಕಿನ ಯರಗೇರಾ ಗ್ರಾಮದಲ್ಲಿರುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುಚ್ಛಯದ ಸಭಾಂಗಣದಲ್ಲಿ ಜುಲೈ 8ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾಜ್ಯದ ಗಡಿ ಜಿಲ್ಲೆಯಾದ ರಾಯಚೂರ ಜಿಲ್ಲೆಯು ವಿವಿಧ ಭಾಷೆ ಮಾತನಾಡುವ, ವಿಭಿನ್ನ ಸಂಸ್ಕೃತಿ ಆಚರಣೆಯ ಸಮ್ಮಿಲನದ ವಿಶೇಷತೆ ಹೊಂದಿದೆ. ಇಡೀ ರಾಜ್ಯಕ್ಕೆ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಪೂರೈಸಿ ಹೆಸರಾಗಿರುವ ರಾಯಚೂರ ಜಿಲ್ಲೆಗೆ 2020ರಲ್ಲಿ ರಾಜ್ಯ ಸರ್ಕಾರವು ಹೊಸದಾಗಿ ವಿಶ್ವವಿದ್ಯಾಲಯ ಘೋಷಣೆ ಮಾಡುವ ಮೂಲಕ ಈ ಭಾಗಕ್ಕೆ ಸಲ್ಲಬೇಕಾದ ಶೈಕ್ಷಣಿಕೆ ಮಾನ್ಯತೆಯನ್ನು ಕಲ್ಪಿಸಿದ್ದು ರಾಜ್ಯದ ಮತ್ತು ರಾಯಚೂರ ಜಿಲ್ಲೆಯ ಇತಿಹಾಸದಲ್ಲಿ ಸ್ಮರಣೀಯವಾಗಿದೆ ಎಂದು ಅವರು ತಿಳಿಸಿದರು.
ಈ ವಿಶ್ವವಿದ್ಯಾಲಯವು ಹಲವು ಸಾಧನೆ ಮತ್ತು ವಿಶೇಷತೆಗಳನ್ನು ಹೊಂದಿದೆ. ಈ ವಿಶ್ವವಿದ್ಯಾಲಯಕ್ಕೆ ಬರುವ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಿದ್ದು, ಈ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂಬುದು ಈ ವಿಶ್ವವಿದ್ಯಾಲಯದ ಗುರಿ ಮತ್ತು ನಮ್ಮ ಆಶಯವಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ವಿಷಯ ಮತ್ತು ಸಂವಹನ ಕೌಶಲ್ಯ ಸುಧಾರಿಸಲು ವಿಶ್ವವಿದ್ಯಾಲಯದಲ್ಲಿ ನಿಯಮಿತವಾಗಿ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ವಿಶೇಷ ಉಪನ್ಯಾಸಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಈ ವಿಶ್ವವಿದ್ಯಾಲಯಕ್ಕೆ 31 ಬೋಧಕ ಹುದ್ದೆಗಳನ್ನು ಮಂಜೂರಿ ಮಾಡಿದೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಮತ್ತು ವಿಶ್ವವಿದ್ಯಾಲಯದ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ವಿಶ್ವವಿದ್ಯಾಲಯವು ಡಿಜಿಟಲ್ ಮೌಲ್ಯಮಾಪನ ಪ್ರಾರಂಭಿಸಿದೆ. ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಸರ್ಕಾರವು 15 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ. ವಿಶ್ವವಿದ್ಯಾಲಯ ಆವರಣದಲ್ಲಿರುವ ಮಾನವ ಜೀನೋಮ್ ಕೇಂದ್ರಕ್ಕೆ ಕೆಕೆಆರ್‌ಡಿಬಿ ನಿಧಿಯಡಿಯಲ್ಲಿ ಸರ್ಕಾರವು 47.00 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ. ವಿಶ್ವವಿದ್ಯಾಲಯ ಆವರಣದಲ್ಲಿ ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿ ನಿಧಿಯಡಿಯಲ್ಲಿ ಸರ್ಕಾರ 34 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ.
ನಮ್ಮ ವಿಶ್ವವಿದ್ಯಾಲಯಕ್ಕೆ ಕೆಲವು ಅವಶ್ಯಕತೆಗಳು ಬೇಕಿದೆ. ಪ್ರಸ್ತುತ ವಿಶ್ವವಿದ್ಯಾನಿಲಯವು ಒಂದೇ ಕಟ್ಟಡದಲ್ಲಿ ಎರಡು ಅವಧಿಗಳಲ್ಲಿ 20 ಸ್ನಾತಕೋತ್ತರ ಕೋರ್ಸ್ಗಳನ್ನು ನಡೆಸುತ್ತಿದೆ. ಆದ್ದರಿಂದ, ವಿಶ್ವವಿದ್ಯಾನಿಲಯದ ದಕ್ಷ ಕಾರ್ಯನಿರ್ವಹಣೆಗಾಗಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ವಿಭಾಗಗಳಿಗೆ ಕಲಾ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು. ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ವಿಭಾಗಗಳಿಗೆ ಸಮಾಜ ವಿಜ್ಞಾನ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು. ಸಂವಹನ, ಮಹಿಳಾ ಅಧ್ಯಯನ, ಗ್ರಂಥಾಲಯ ಮಾಹಿತಿ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ವಾದ್ಯಸಂಗೀತ ಇತ್ಯಾದಿ ವಿಭಾಗಗಳಿಗೆ ಭೌತ ವಿಜ್ಞಾನ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು. ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ ವಿಭಾಗಕ್ಕೆ ಜೀವ ವಿಜ್ಞಾನ ವಿಭಾಗ ಕಟ್ಟಡ ನಿರ್ಮಾಣವಾಗಬೇಕು. ಜೊತೆಗೆ ಫ್ಯಾಕಲ್ಟಿ ಆಫ್ ಕಾಮರ್ಸ್ ಕಟ್ಟಡ, ಪರೀಕ್ಷಾ ವಿಭಾಗದ ಕಟ್ಟಡ, ಕ್ಯಾಂಟೀನ್ ಕಟ್ಟಡ, ಅತಿಥಿ ಗೃಹ ಕಟ್ಟಡಗಳು ನಿರ್ಮಾಣವಾಗಬೇಕಿದೆ. ಅಸ್ತಿತ್ವದಲ್ಲಿರುವ ಗ್ರಂಥಾಲಯ ಕಟ್ಟಡದ ವಿಸ್ತರಣೆಯಾಗಬೇಕು. ಇಡೀ ಕ್ಯಾಂಪಸ್‌ಗೆ ಟಾರ್ ರಸ್ತೆಗಳು ನಿರ್ಮಾಣವಾಗಬೇಕು. 400 ಮೀಟರ್ ಟ್ರ‍್ಯಾಕ್ ಹೊಂದಿರುವ ಆಟದ ಮೈದಾನಗಳು ನಿರ್ಮಾಣವಾಗಬೇಕಿದೆ. ಇಡೀ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕ ಬೇಕಿರುತ್ತದೆ. ಎಲ್ಲಾ ವಿಜ್ಞಾನ ವಿಭಾಗಗಳಿಗೆ ಸಂಶೋಧನಾ ಉಪಕರಣಗಳು ಬೇಕಿರುತ್ತದೆ. ವಿಶ್ವವಿದ್ಯಾಲಯಕ್ಕೆ ಹಂತಹಂತವಾಗಿ ಈ ಎಲ್ಲಾ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಪತ್ರ ಬರೆದು ಕ್ರಮವಹಿಸುವುದಾಗಿ ಕುಲಪತಿಗಳಾದ ಪ್ರೊ.ಕೆಳಗಿನಮನಿ ಅವರು ತಿಳಿಸಿದರು.
ಈ ವಿಶ್ವವಿದ್ಯಾಲಯವು ಅಂದಾಜು 250 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದೆ. 20 ಕೋರ್ಸಗಳನ್ನು ನೀಡಲಾಗುತ್ತದೆ. 20 ಸರ್ಕಾರಿ ಕಾಲೇಜುಗಳು, 6 ಅನುದಾನಿತ ಕಾಲೇಜುಗಳು, 8 ಬಿಎಡ್ ಕಾಲೇಜುಗಳು, 2 ಬಿಪಿಎಡ್ ಮತ್ತು 148 ಖಾಸಗಿ ಕಾಲೇಜುಗಳು ಸೇರಿ ಒಟ್ಟು 184 ಸಂಯೋಜಿತ ಕಾಲೇಜುಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತವೆ. ಮುಖ್ಯ ಕ್ಯಾಂಪಸ್ಸನಲ್ಲಿ ಒಟ್ಟು 873 ವಿದ್ಯಾರ್ಥಿಗಳ ಬಲವಿದೆ. ಅಂಗ ಸಂಸ್ಥೆಗಳಲ್ಲಿ 4208ರಷ್ಟು ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಗಳಿದ್ದಾರೆ. ಸಂಯೋಜಿತ ವಿಶ್ವವಿದ್ಯಾಲಯಗಳಲ್ಲಿ 56,343 ಯುಜಿ ವಿದ್ಯಾರ್ಥಿಗಳಿದ್ದಾರೆ. ತಲಾವೊಂದು ಆಡಳಿತಾತ್ಮಕ ಕಟ್ಟಡ, ಗ್ರಂಥಾಲಯ ಕಟ್ಟಡ, ಸಿಬ್ಬಂದಿ ಕ್ವಾಟರ‍್ಸ್, ಅತಿಥಿ ಗೃಹ ಹಾಗೂ ಎಂಜಿನಿಯರಿಂಗ್ ಕಟ್ಟಡಗಳಿವೆ. 5 ಬಾಲಕರ ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ 2 ಮಹಿಳೆಯರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. 5 ಖಾಯಂ ಬೋಧಕ ಸಿಬ್ಬಂದಿ, 6 ಖಾಯಂ ಬೋಧಕರ ಸಿಬ್ಬಂದಿ ಇದ್ದಾರೆ. 80 ಅತಿಥಿ ಅಧ್ಯಾಪಕರು, 90 ಜನ ತಾತ್ಕಾಲಿಕ ಸಿಬ್ಬಂದಿ ಇದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ 187 ವಿದ್ಯಾರ್ಥಿಗಳು, 118 ವಿದ್ಯಾರ್ಥಿನಿಯರು ಹಾಸ್ಟೇಲಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ. ಗ್ರಂಥಾಲಯದಲ್ಲಿ ಒಟ್ಟು 25,540 ಪುಸ್ತಕಗಳಿವೆ. 100 ಕಂಪ್ಯೂಟರ್, 8 ಸಂವಾಧಾತ್ಮಕ ಫಲಕಗಳು ಇರುತ್ತವೆ. 5 ಕೊಳವೆಬಾವಿಗಳು ಮತ್ತು 2 ಜನರೇಟರಗಳು ಕಾರ್ಯನಿರ್ವಹಿಸುತ್ತಿವೆ. 1 ಮಿನಿ ಬಸ್ ಇರುತ್ತದೆ ಎಂದು ಅವರು ಕುಲಪತಿಗಳು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯದಲ್ಲಿ ಕನ್ನಡ, ಇಂಗ್ಲಿಷ್, ಉರ್ದು ಮತ್ತು ಪರ್ಶಿಯನ್, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಎಂಎಸ್‌ಡಬ್ಲ್ಯು, ಎಂಡಬ್ಲ್ಯುಎಸ್, ಪತ್ರಿಕೋದ್ಯಮ, ಗ್ರಂಥಾಲಯ ವಿಜ್ಞಾನ, ಗಣಕ ವಿಜ್ಞಾನ, ಗಣಿತಶಾಸ್ತ್ರ, ಪಿಜಿಕ್ಸ್, ಕೆಮಿಸ್ಟ್ರಿ, ಬಾಟನಿ, ಜಿಯಾಲಜಿ, ಮೈಕ್ರೋಬಯಾಲಜಿ, ಇನ್‌ಸ್ಟ್ರೂಮೆಂಟ್ ಟೆಕ್ನಾಲಜಿ ಹಾಗೂ ಎಂಕಾಂ ಸೇರಿದಂತೆ 20 ವಿಷಯಗಳ ಕೋರ್ಸಗಳನ್ನು ಇಲ್ಲಿ ಕಲಿಸಲಾಗುತ್ತದೆ ಎಂದು ಪ್ರೊ.ಕೆಳಗಿನಮನಿ ಅವರು ಮಾಹಿತಿ ನೀಡಿದರು.
ಸಲಹೆ, ಮಾರ್ಗದರ್ಶನಬೇಕು: ತಾವು ಈಗಾಗಲೇ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಎರಡೂ ದಶಕಗಳಿಗೂ ಹೆಚ್ಚು ಕಾಲ ಅಧ್ಯಾಪಕರಾಗಿ ಜೊತೆಗೆ ವಿಶ್ವವಿದ್ಯಾಲಯದ ಬೇರೆ ಬೇರೆ ಹುದ್ದೆಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಇದುವರೆಗೆ 70ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾಗಿ 33 ಅಭ್ಯರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ಮಾಡಿದ್ದಾಗಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ತಿಳಿಸಿದರು. ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಂಬಂಧಿಸಿದಂತೆ ಏನೇ ಸಲಹೆ ಮತ್ತು ಮಾರ್ಗದರ್ಶನವಿದ್ದರೆ ಅದನ್ನು ತಾವು ಸ್ವೀಕರಿಸುವುದಾಗಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲ ಸಚಿವರಾದ ಡಾ.ಚನ್ನಪ್ಪ ಎ., ಮೌಲ್ಯಮಾಪನ ಕುಲಸಚಿವರಾದ ಡಾ.ಜ್ಯೋತಿಧಾಮ ಪ್ರಕಾಶ, ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿಗಳು ಆಗಿರುವ ಸಹ ಪ್ರಾಧ್ಯಾಪಕರಾದ ಡಾ.ಕೆ.ವೆಂಕಟೇಶ, ಸಹ ಪ್ರಾಧ್ಯಾಪಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕರಾದ ಡಾ.ರಾಘವೇಂದ್ರ ಪತ್ತೇಪೂರ ಸೇರಿದಂತೆ ವಿಶ್ವವಿದ್ಯಾಲಯದ ಇನ್ನೀತರ ಸಹ ಪ್ರಾಧ್ಯಾಪಕರು ಮತ್ತು ಇನ್ನೀತರರು ಇದ್ದರು.

ಜಾಹೀರಾತು

About Mallikarjun

Check Also

ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮ್ಯಾಗಳಮನಿ ಒತ್ತಾಯ.

Magalamani demands action against officers who violated etiquette. ಗಂಗಾವತಿ :-8-ನಗರದ ತಾಲೂಕ ಪಂಚಾಯತ್ ಮಂಥನ ಸಭಾಂಗಣದಲ್ಲಿ ಸೋಮವಾರ …

Leave a Reply

Your email address will not be published. Required fields are marked *