Breaking News

ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಆರಂಭಿಸಿದ ನರೇಗಾ ನೌಕರರು





NREGA employees have started an indefinite non-cooperation movement by stopping work.

6 ತಿಂಗಳ ಬಾಕಿ ವೇತನ ಪಾವತಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ ಕೊಟ್ರೇಶ ಜವಳಿ ಒತ್ತಾಯ

ಜಾಹೀರಾತು

ಗಂಗಾವತಿ : 6 ತಿಂಗಳ ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿಸಂಘ, ಬೇರ್ ಫೂಟ್ ಟೆಕ್ನಿಷಿಯನ್ ಸಂಘ ಮತ್ತು ಗ್ರಾಮಕಾಯಕ ಮಿತ್ರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಕೆಲಸ ಸ್ಥಗಿತಗೊಳಿಸಿ ತಾ.ಪಂ. ಸಾಮರ್ಥ್ಯ ಸೌಧದ ಮುಂದೆ ಮಂಗಳವಾರದಿಂದ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಆರಂಭಿಸಿದರು.

ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಕೊಟ್ರೇಶ ಜವಳಿ ಅವರು ಮಾತನಾಡಿ, ಕಳೆದ 15 ವರ್ಷಗಳಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದಲ್ಲಿ 5000 ಕ್ಕಿಂತ ಹೆಚ್ಚು ನೌಕರರು ವಿವಿಧ ಸ್ಥರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನೌಕರರಿಗೆ ಸೇವಾ ಭದ್ರತೆ ಇಲ್ಲ. ಆರೋಗ್ಯ ವಿಮೆ ಸೌಲಭ್ಯ ಇಲ್ಲ. ಜೊತೆಗೆ ಆರು ತಿಂಗಳಿಂದ ವೇತನವು ಪಾವತಿ ಆಗಿರುವುದಿಲ್ಲ. ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆಯಾದರೂ ರಾಜ್ಯ ಸರಕಾರ ನೌಕರರ ವೇತನ ಪಾವತಿಸುವಲ್ಲಿ ತಾಂತ್ರಿಕ ಕಾರಣ ಹೇಳಿ ವಿಳಂಬ ಮಾಡುತ್ತಿದೆ. ಇದರಿಂದ ನೌಕರರು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ರಾಜ್ಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಕೆಲಸ ಸ್ಥಗಿತಗೊಳಿಸಿ ಅಸಹಕಾರ ಚಳವಳಿ ಆರಂಭಿಸಲಾಗಿದೆ ಎಂದರು.

ಬೇರ್ ಫೂಟ್ ಟೆಕ್ನಿಷಿಯನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಡಣಾಪುರ ಮಾತನಾಡಿ, ಬಿಎಫ್ ಟಿಗಳ ಪ್ರತಿ ವರ್ಷದ ನವೀಕರಣ ಪದ್ದತಿ ಕೈಬಿಡಬೇಕು. ಬಿಎಫ್ ಟಿಗಳ ವೇತನ ಪಾವತಿಯಲ್ಲಿ ಗೌರವಧನ ಎಂದು ನೀಡುತ್ತಿದ್ದು, ಇದನ್ನು ವೇತನ ರೂಪದಲ್ಲಿ ನೀಡಬೇಕು. ಪ್ರತಿ ತಿಂಗಳ ವೇತನ ಸರಿಯಾಗಿ ಆಗದ್ದರಿಂದ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಕೂಡಲೇ ರಾಜ್ಯ ಸರಕಾರ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮ ಕಾಯಕ ಮಿತ್ರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಲ್ಲಮ್ಮ ಪಲ್ಲೇದ್ ಅವರು ಮಾತನಾಡಿ, ಗ್ರಾಮಕಾಯಕ ಮಿತ್ರರಿಂದ ಪ್ರತಿ ವರ್ಷ ಪಡೆಯುವ ಮರು ಮೌಲ್ಯಮಾಪನ ಪದ್ಧತಿ ಕೈಬಿಡಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಗತ್ಯ ಪಿಠೋಪಕರಣ ನೀಡಬೇಕು. ಪ್ರತಿ ತಿಂಗಳು ವೇತನ ಇಲ್ಲದೇ ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚಗಳು, ಪ್ರಯಾಣ ವೆಚ್ಚಗಳು, ಸಾಲಗಳ ಮರುವಾವತಿ, ಇ.ಎಂ.ಐ. ಸೇರಿ ಅನೇಕ ರೀತಿಯ ಖರ್ಚುವೆಚ್ಚಗಳನ್ನು ನಿಭಾಯಿಸಲು ತೀವ್ರ ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.

ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶರಣಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಬಾಳಪ್ಪ ತಾಳಕೇರಿ, ಸದಸ್ಯರಾದ ಶರಣಬಸವ ಮಾಲಿಪಾಟೀಲ್, ಬಸವರಾಜ ಜಟಗಿ, ಉದಯ ಕುಮಾರ್, ರಮೇಶ, ಸಂಗಮೇಶ, ಶ್ವೇತಾ, ಹನುಮೇಶ, ಬೇರ್ ಫೂಟ್ ಟೆಕ್ನಿಷಿಯನ್ ಸಂಘದ ತಾಲೂಕು ಅಧ್ಯಕ್ಷ ಯಂಕೋಬ ಸಾಲಿ, ತಾಲೂಕು ಉಪಾಧ್ಯಕ್ಷರಾದ ಹನುಮೇಶ ಲಂಕಿ, ಗ್ರಾಮ ಕಾಯಕ ಮಿತ್ರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಲ್ಲಮ್ಮ ಪಲ್ಲೇದ್, ತಾಲೂಕು ಉಪಾಧ್ಯಕ್ಷರಾದ ಸುಜಾತ ಸೇರಿ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.