
Statement by MP Rajashekar Hitna, may the works be implemented properly
ಮರಳಿ ಹೋಬಳಿ ಮಟ್ಟದ ಪ್ರಗತಿ ಪರಿಶೀಲನೆ ಸಭೆ
ಗಂಗಾವತಿ : ಹಳ್ಳಿಗಳಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನ ಆಗಬೇಕು, ಈ ಬಗ್ಗೆ ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಂಸದರಾದ ರಾಜಶೇಖರ ಹಿಟ್ನಾಳ ಅವರು ಹೇಳಿದರು.
ತಾಲೂಕಿನ ಮರಳಿ ಗ್ರಾಮದ ಚಂದನ್ ಗ್ರೀನ್ ವೇ ಫಂಕ್ಷನ್ ಹಾಲ್ ನಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಗಳ ಮರಳಿ ಹೋಬಳಿ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಗ್ರಾಪಂ ಸದಸ್ಯರು ಎಲ್ಲ ಯೋಜನೆಗಳು & ಸರಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಹೋಬಳಿವಾರು ಪ್ರಗತಿ ಪರಿಶೀಲನೆ ಸಭೆ ಆಯೋಜಿಸಿ ಗ್ರಾಪಂ ಸದಸ್ಯರು, ಗ್ರಾಪಂ ಪಿಡಿಓಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಂದ ಪ್ರಗತಿ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ನರೇಗಾ ಯೋಜನೆಯಡಿ ನೀರಾವರಿ ಭಾಗದಲ್ಲಿ ನಾಲಾ ಹೂಳೆತ್ತುವ ಕಾಮಗಾರಿಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು. ಇದರಿಂದ ರೈತರಿಗೆ ಅನುಕೂಲ ಆಗಲಿದೆ. ಕೂಲಿಕಾರರಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳಬೇಕು. ಇಂಜಿನಿಯರ್ ಗಳು & ಪಿಡಿಓಗಳು ಮೇಲುಸ್ತುವಾರಿ ವಹಿಸಬೇಕು. ಹಳ್ಳಿಗಳ ಅಭಿವೃದ್ಧಿಗೆ ನರೇಗಾ ಯೋಜನೆ ನೆರವಾಗಿದ್ದು, ಆಸ್ತಿಗಳ ಸೃಜನೆಯಾಗುತ್ತಿವೆ. ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡರೆ ಹೆಚ್ಚುವರಿ ಕ್ರಿಯಾಯೋಜನೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಗ್ರಾಮಗಳ ಸ್ವಚ್ಛತೆಗಾಗಿ ಅನುಷ್ಠಾನವಾಗುತ್ತಿರುವ ಬೂದು ನಿರ್ವಹಣೆ ಕಾಮಗಾರಿಗಳು ಹಾಗೂ ಸಾಹಸ ಸಂಸ್ಥೆಯವರು ಮಾಡುತ್ತಿರುವ ವೈಜ್ಞಾನಿಕವಾಗಿ ಕಸ ಸಂಗ್ರಹಣೆ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಸ್ವಚ್ಛ ಭಾರತ ಮಿಷನ್, ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆ, ವಸತಿ, ಜೆಜೆಎಂ, ಪಶು ಇಲಾಖೆ, ಕೃಷಿ ಇಲಾಖೆ ಸೇರಿ ಇತರೆ ಇಲಾಖೆ ಅಧಿಕಾರಿಗಳು 2025-26ನೇ ಸಾಲಿನ ವಿವಿಧ ಯೋಜನೆಗಳ ಕ್ರಿಯಾಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಅಧಿಕಾರಿಗಳು ಪ್ರಗತಿ ವರದಿ ಓದಿ ಹೇಳಿದರು.
ಮರಳಿ ಗ್ರಾಪಂ ಅಧ್ಯಕ್ಷರಾದ ಹುಸೇನಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ತಾಲೂಕು ಅಧ್ಯಕ್ಷರಾದ ಡಾ.ವೆಂಕಟೇಶ ಬಾಬು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್, ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ಮರಳಿ ಗ್ರಾಪಂ ಪಿಡಿಓ ಬಸವರಾಜ ಗೌಡ್ರು, ಗ್ರಾಪಂ ಉಪಾಧ್ಯಕ್ಷರಾದ ಮೌಲಾಸಾಬ್, ಅನುಷ್ಠಾನ ಇಲಾಖೆ ತಾಲೂಕು ಅಧಿಕಾರಿಗಳು, ವಿವಿಧ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಪಿಡಿಓಗಳು ಇದ್ದರು.