High Court stops reservation abuse

ಬೆಂಗಳೂರು:ವೀರಶೈವ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ವೀರಶೈವ ಜಂಗಮರೇ ಬೇರೆ, ಬುಡ್ಗ ಅಥವಾ ಬೇಡ ಜಂಗಮರೇ ಬೇರೆ ಎಂದು ನ್ಯಾ. ಸುನೀಲ್ ದತ್ ಯಾದವ್ ಹಾಗೂ ನ್ಯಾ. ರಾಮಚಂದ್ರ ಡಿ. ಹುದ್ದಾರ್ ನೇತೃತ್ವದ ವಿಭಾಗೀಯ ಪೀಠ 70 ಪುಟಗಳ ತೀರ್ಪಿನಲ್ಲಿ ಹೇಳಿದೆ.
ಕಲಬುರಗಿ ಪೀಠದಲ್ಲಿ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಮಾನ್ಯ ಮಾಡಿ ನ್ಯಾಯಮೂರ್ತಿಗಳು ವೀರಶೈವ ಜಂಗಮರು ಸಮಾಜದ ಉನ್ನತ ವರ್ಗಕ್ಕೆ ಸೇರಿರುವ ಪೂಜ್ಯ ವರ್ಗ ಎಂದು ಸ್ಪಷ್ಟಪಡಿಸಿದೆ.
ಇದರಿಂದ ವೀರಶೈವ ಜಂಗಮರು ಬೇಡ ಅಥವಾ ಬುಡ್ಗ ಜಂಗಮರೆಂದು ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಮೀಸಲು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಪೂರ್ಣ ವಿರಾಮ ಹಾಕಿದೆ.
ವೀರಶೈವರಲ್ಲಿನ ಜಂಗಮ ವರ್ಗದ ವೃತ್ತಾಂತ, ಬೇಡ ಮತ್ತು ಬುಡ್ಗ ಜಂಗಮರ ಇತಿಹಾಸವನ್ನು ತೀರ್ಪಿನಲ್ಲಿ ಪ್ರಸ್ತಾಪಿಸಿರುವ ಹೈಕೋರ್ಟ್, ಇತಿಹಾಸ ತಜ್ಞ ಬಿ.ಎಲ್. ರೈಸ್ ಮತ್ತು ಮಾನವಶಾಸ್ತ್ರಜ್ಞರ ದಾಖಲೆಗಳನ್ನು ಉಲ್ಲೇಖಿಸಿ ಲಿಂಗಾಯಿತರಲ್ಲಿನ ಜಂಗಮರೇ ಬೇರೆ, ಬುಡ್ಗ ಅಥವಾ ಬೇಡ ಜಂಗಮರೇ ಬೇರೆ ಎಂದು ಹೇಳಿದೆ.
ಬುಡ್ಗ ಅಥವಾ ಬೇಡ ಜಂಗಮರು ಅಲೆಮಾರಿಗಳಾಗಿದ್ದು ಅವರು ರಾಜ್ಯದ ಆಂಧ್ರ ಗಡಿ ಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ಮೂಲತಃ ಆಂಧ್ರದಿಂದ ಅವರು ವಲಸೆ ಬಂದು ಮಾಂಸ ಹಾಗೂ ಮದ್ಯ ಸೇವನೆ ಮಾಡುತ್ತಾ, ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದರು. ಆದರೆ, ಈಗ ಅಂತಹ ಬೇಡ ಜಂಗಮರಿಲ್ಲ ಎಂದು ಇತ್ತೀಚೆಗೆ ಮಾಜಿ ಸಚಿವ ಹೆಚ್. ಆಂಜನೇಯ ತಿಳಿಸಿದ್ದರು.
“ಮೇಲ್ವರ್ಗದವರಾಗಿರುವ ವೀರಶೈವ ಜಂಗಮರು ನ್ಯಾಯಾಲಯದ ಈ ತೀರ್ಪನ್ನು ಅರ್ಥಮಾಡಿಕೊಳ್ಳಬೇಕು. ಕಟ್ಟಕಡೆಯ, ಅಲಕ್ಷಿತ ದಲಿತ ಜನಾಂಗದವರ ಮೀಸಲಾತಿ ತಟ್ಟೆಗೆ ಕೈ ಹಾಕಿ ಅವರ ಅನ್ನ ಕಸಿದುಕೊಳ್ಳುವದು ಸರಿಯಲ್ಲ. ಮೇಲ್ವರ್ಗದವರು ಇನ್ನಾದರೂ ಅರಿತು ಕಾನೂನುಬದ್ಧವಾಗಿ ನಡೆದುಕೊಳ್ಳಲಿ,” ಎಂದು ನಾಗರಾಜ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ, ಹೇಳಿದರು.