Minister Ishwar Khandre attended the funeral of the tigers that died of poisoning

ವರದಿ : ಬಂಗಾರಪ್ಪ .ಸಿ .
ಹನೂರು:ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂನಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಅಸಹಜವಾಗಿ ಸಾವಿಗೀಡಾಗಿರುವ ಸ್ಥಳಕ್ಕೆ ಅರಣ್ಯ ಇಲಾಖೆಯ ಸಚಿವರಾದ ಈಶ್ವರ್ ಕಂಡ್ರೆ ಜೊತೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು ತಾಲೂಕಿನ ಮಲೆ ಮಾದೇಶ್ವರ ವನ್ಯ ಧಾಮ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ಸಾವನ್ನಪ್ಪಿರುವುದು ದುರಂತ ಘಟನೆ ಗಡಿ ಗ್ರಾಮಗಳಲ್ಲಿ ಅರಣ್ಯ ಇಲಾಖೆ ನಿವಾಸಿಗಳಿಗೆ ಜಾಗೃತಿ ಮೂಡಿಸಿ ಮಾನವ ಪ್ರಾಣಿ ಸಂಘರ್ಷ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಜೊತೆಗೆ ಈ ಘಟನೆಗೆ ಕಾರಣರಾದ ಯಾರೇ ಇದ್ದರೂ ನೇರವಾಗಿ ಪೊಲೀಸರಿಗೆ ಶರಣಾಗಿ ಇಲ್ಲದಿದ್ದರೆ ಗಡಿ ಗ್ರಾಮಗಳ ನಿವಾಸಿಗಳಿಗೂ ಇದರಿಂದಾಗಿ ತೊಂದರೆಯಾಗಲಿದೆ ಅರಣ್ಯ ಇಲಾಖೆ ಅರಣ್ಯ ಸಂರಕ್ಷಣೆಯ ಜೊತೆ ಗಡಿ ಗ್ರಾಮಗಳ ಹಿತದೃಷ್ಟಿಯಿಂದ ಜಾಗೃತಿ ಮೂಡಿಸಿ ಜನರನ್ನು ವಿಶ್ವಾಸಕ್ಕೆ ಪಡೆದು ಇಂತಹ ದುರ್ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಬೇಕು ರಾಷ್ಟ್ರೀಯ ಪ್ರಾಣಿ ಹುಲಿ ಸಂತತಿ ರಕ್ಷಣೆಗೆ ಜನಸಾಮಾನ್ಯರು ಮುಂದಾಗಬೇಕು ಪರಿಸರ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ವಿಷಪ್ರಾಶನದಿಂದ ಅಸುನೀಗಿದ ಹುಲಿಗಳ ಕಳೇಬರಗಳನ್ನು ಎನ್ಟಿಸಿಎ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂನಲ್ಲಿ 5 ಹುಲಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ನಡೆಸಿ ಹುಲಿ ಮತ್ತು ಹಸುವಿನ ಅಂಗಾಂಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿ, ಕಳೇಬರವನ್ನು ಅಂತ್ಯಕ್ರಿಯೆ ನಡೆಸಲಾಯಿತು. ಹುಲಿಗಳ ಮೃತದೇಹದ ಆಸುಪಾಸಿನಲ್ಲೇ ಸಿಕ್ಕಿದ್ದ ಹಸುವಿನ ದೇಹವನ್ನು ಪ್ರತ್ಯೇಕವಾಗಿ ಸುಡಲಾಗಿದೆ.
ಹುಲಿಗಳ ಅಂತ್ಯಕ್ರಿಯೆಗೆ ಆಗಮಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ .
ಮರಣೋತ್ತರ ಪರೀಕ್ಷೆಯಲ್ಲಿ ವಿಷ ಸತ್ಯ ಬಯಲು: ಮೃತಪಟ್ಟಿದ್ದ 5 ಹುಲಿಗಳಲ್ಲಿ ತಾಯಿ ಹುಲಿ ಸೇರಿದಂತೆ ನಾಲ್ಕು ಹೆಣ್ಣು ಹುಲಿ, ಒಂದು ಗಂಡು ಹುಲಿಗಳಾಗಿದ್ದು, ತಾಯಿ ಹುಲಿಗೆ 8 ವರ್ಷ ಮತ್ತು ಮರಿಗಳಿಗೆ 8-10 ತಿಂಗಳು ಎಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ.
ಹುಲಿಗಳು ಮೃತಪಟ್ಟು 3 ದಿನಗಳಾಗಿದ್ದು, ಹಸುವಿನ ಮೃತದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದರಿಂದ ಹಸುವಿನ ಮಾಂಸ ತಿಂದಿದ್ದ ಹುಲಿಗಳು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹಸುವಿನ ಮೃತದೇಹಕ್ಕೆ ಸಿಂಪಡಿಸಿದ್ದ ಕ್ರಿಮಿನಾಶಕದಿಂದಲೇ ಹುಲಿಗಳು ಮೃತಪಟ್ಟಿರುವುದು ಬಯಲಾಗಿದೆ.
ಮೃತಪಟ್ಟಿರುವ ಹಸುವಿನ ಮಾಲೀಕ ಇನ್ನೂ ಯಾರು ಎಂಬುದು ಪತ್ತೆಯಾಗಿಲ್ಲ. ಪೊಲೀಸರು ಇದರ ಬೆನ್ನು ಬಿದ್ದಿದ್ದು, ಸಿಡಿಆರ್ ಮತ್ತು ಟವರ್ ಲೊಕೇಷನ್ ಆಧಾರದಲ್ಲಿ ವಿಷ ಹಾಕಿದವರ ಪತ್ತೆ ಮತ್ತು ಮಾಲೀಕನ ಪತ್ತೆಗೆ ಬಲೆ ಬೀಸಿದ್ದಾರೆ.
ಹುಲಿಗಳ ಅಂತ್ಯಕ್ರಿಯೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ .
ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ : 5 ಹುಲಿಗಳು ಮೃತಪಟ್ಟಿದ್ದನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೀಣ್ಯಂಗೆ ಭೇಟಿ ಕೊಟ್ಟು ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಹುಲಿಗಳ ಅಂತ್ಯಕ್ರಿಯೆಯು ಕೂಡ ಸಚಿವರ ಸಮ್ಮುಖದಲ್ಲಿಯೇ ನಡೆಯಿತು.
ಅಂತ್ಯಕ್ರಿಯೆ ಬಳಿಕ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರ್ ಖಂಡ್ರೆ, ”ಇದೊಂದು ಘೋರ ದುರಂತ. ಘಟನೆ ಏಕೆ ಆಯ್ತು? ಯಾವ ಕಾರಣಕ್ಕೆ ಆಯ್ತು? ಯಾರದ್ದಾದರೂ ನಿರ್ಲಕ್ಷ್ಯ ಇದೆಯೇ? ಎಂಬ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುವುದು. ಘಟನೆಯಾದ ನಂತರ ಬಹಳಷ್ಟು ದೂರುಗಳು ಬರುತ್ತವೆ. ಆದರೆ, ಎಲ್ಲ ದೂರುಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ, ಸಮಗ್ರವಾಗಿ ತನಿಖೆ ಮಾಡಿ ವರದಿ ಕೊಡಿ ಎಂದು ಹೇಳಿದ್ದೇನೆ. ವರದಿ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ. ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆಗಾಗಿ ಉನ್ನತ ಪಟ್ಟದ ಸಮೀತಿ ರಚಿಸಿದ್ದೇವೆ. ಈಗಾಗಲೇ ಕೆಲವು ಅಧಿಕಾರಿಗಳು ಬಂದು ಪರಿಶೀಲಿಸಿದ್ದು, ಎಫ್ಎಸ್ಎಲ್ ವರದಿಗೂ ಕಳಿಸಿದ್ದಾರೆ. ಮೂರ್ನಾಲು ದಿನದಲ್ಲಿ ಎಫ್ಎಸ್ಎಲ್ ವರದಿ ಬರಬಹುದು. ಪೊಲೀಸರು ಕೂಡ ತನಿಖೆ ನಡೆಸಿದ್ದಾರೆ. ಇಲ್ಲಿ ಯಾರಾರು ಓಡಾಡಿದ್ದಾರೋ ಅವರ ಮೊಬೈಲ್ ಕರೆಗಳ ವಿವರ ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ವರದಿ ಬಂದ ಬಳಿಕ ಆರೋಪಿಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆ ನೀಡಲಾಗುವುದು” ಎಂದರು.
ಘಟನೆಗೆ ಸಂಬಂಧಿಸಿದಂತೆ ಯಾರನ್ನಾದರೂ ವಶಕ್ಕೆ ಪಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ”ನಿನ್ನೆಯಷ್ಟೇ ಎಫ್ಐಆರ್ ಆಗಿದೆ. ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಕೂಡ ಇಲ್ಲ” ಎಂದರು.
ಸಿಸಿಎಫ್ ಹೇಳಿದ್ದೇನು?: ಚಾಮರಾಜನಗರ ಸಿಸಿಎಫ್ ಹೀರಾಲಾಲ್ ಮಾಧ್ಯಮದವರೊಂದಿಗೆ ಮಾತನಾಡಿ, ಎನ್ಟಿಸಿಎ ಮಾರ್ಗಸೂಚಿ ಅನ್ವಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹಸುವಿನ ಹಿಂಭಾಗದ ಮಾಂಸವನ್ನು ಹುಲಿಗಳು ಸೇವನೆ ಮಾಡಿವೆ. 5 ಹುಲಿಗಳ ಹೊಟ್ಟೆಯಲ್ಲೂ ವಿಷ ಮಿಶ್ರಿತ ಹಸುವಿನ ಮಾಂಸ ಇದೆ’ ಎಂದು ತಿಳಿಸಿದ್ದಾರೆ.