CPI(ML) Liberation strongly condemns the forcible seizure of land by Devanahalli farmers and the violent attacks and arrests on activists.

ಗಂಗಾವತಿ: ಬೆಂಗಳೂರಿನ ದೇವನಹಳ್ಳಿಯ ೧೩ ಹಳ್ಳಿಗಳ ಕೃಷಿಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮದ ವಿರುದ್ಧವಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಜೂನ್-೨೫ ರಂದು ‘ಸಂಯುಕ್ತ ಹೋರಾಟ ಕರ್ನಾಟಕ ಆಂದೋಲನವನ್ನು ಸಂಘಟಿಸಿತ್ತು. ಈ ಕರೆಯ ಮೇರೆಗೆ ಸಾವಿರಾರು ಜನರು, ರೈತರ ನ್ಯಾಯಯುತ ಬೇಡಿಕೆಗೆ ಬೆಂಬಲವಾಗಿ ಸೇರಿದ್ದರು. ಕಳೆದ ೧೧೭೭ ದಿನಗಳಿಂದ ರೈತರು ನಿರಂತರವಾಗಿ ಈ ಭೂಸ್ವಾಧೀನದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭೂ ಸ್ವಾಧೀನದ ಆದೇಶವನ್ನು ಹಿಂತೆಗದುಕೊಳ್ಳಲು ನಿರಾಕರಿಸುತ್ತಿದೆ. ಆದರೆ, ಈ ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅಡ್ಡಿಯೊಡ್ಡಿ, “ಫ್ರೀಡಂ ಪಾರ್ಕ್ನಲ್ಲೇ ಮಾತ್ರ ಪ್ರತಿಭಟನೆ ನಡೆಸಬೇಕು” ಎಂದು ನಿರ್ಬಂಧಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರನ್ನು ಬಂಧಿಸಿ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದರು. ಪೊಲೀಸರು ಪ್ರದರ್ಶಿಸಿದ ಈ ಕಠೋರ ಮತ್ತು ಅನಾವಶ್ಯಕ ಕ್ರಮ ಪ್ರಜಾಪ್ರಭುತ್ವದ ತಾತ್ವಿಕತೆ ಮತ್ತು ನಾಗರಿಕ ಹಕ್ಕುಗಳಿಗೆ ವಿರುದ್ಧವಾಗಿದೆ. ಇಂತಹ ಕ್ರೂರ ವರ್ತನೆ ಖಂಡನೀಯವಾಗಿದೆ ಎಂದು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೆರಾಜು ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಿಪಿಐ(ಎಂಎಲ್) ಲಿಬರೇಷನ್ ಹಾಗೂ ಅದರ ಜೊತೆಗೆ ನಿಲ್ಲುತ್ತಿರುವ ಜನಸಂಘಟನೆಗಳು ದೇವನಹಳ್ಳಿಯ ರೈತರ ಹೋರಾಟಕ್ಕೆ ನಿಖರ ಬೆಂಬಲ ನೀಡುತ್ತವೆ. ಭೂ ಕಬಳಿಕೆ ವಿರುದ್ಧ ಧೈರ್ಯದಿಂದ ಹೋರಾಟ ನಡೆಸುತ್ತಿರುವ ರೈತರು ಹಾಗೂ ಹೋರಾಟಗಾರರ ಬಂಧನ ಮತ್ತು ದಮನವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ದೇವನಹಳ್ಳಿಯ ೧೩ ಹಳ್ಳಿಗಳ ಜಮೀನನ್ನು ಒಳಗೊಂಡು, ರಾಜ್ಯದಾದ್ಯಂತ ಕೈಗಾರಿಕೀಕರಣ ಅಥವಾ “ಅಭಿವೃದ್ಧಿ” ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಲು ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಯ ಬಳಕೆ ಮತ್ತು ಅವಶ್ಯಕತೆಯ ಕುರಿತು ಸಂಪೂರ್ಣ ಮೌಲ್ಯಮಾಪನ ನಡೆಯಬೇಕು. ರೈತರ ಕೈಯಿಂದ ಕಸಿದುಕೊಂಡು ಬಳಕೆಯಾಗದೆ ಉಳಿದಿರುವ ಕೃಷಿಭೂಮಿಗಳನ್ನು ತಕ್ಷಣವೇ ಅವರಿಗೆ ಮರಳಿ ನೀಡಬೇಕು. ಸಿಪಿಐ(ಎಂಎಲ್) ಲಿಬರೇಷನ್ ಎಲ್ಲ ಪ್ರಜಾಪ್ರಭುತ್ವವಾದಿ, ಶೋಷಿತ ಜನತೆಯ ಪ್ರಗತಿಪರ ಚಿಂತಕರು, ರೈತ ಸಂಘಟನೆಗಳು ಮತ್ತು ಪ್ರಜಾಪ್ರಭುತ್ವಪರ ಸಂಘಟನೆಗಳಿಗೆ ಕರೆ ನೀಡುತ್ತದೆ ಎಂದು ತಿಳಿಸಿದರು.
ಬಾಕ್ಸ್:
ದೇವನಹಳ್ಳಿ ರೈತರ ಹೋರಾಟಕ್ಕೆ ಧ್ವನಿಯಾಗಿ ನಿಲ್ಲೋಣ. ಭೂಮಿ, ಜೀವ ಮತ್ತು ಬದುಕು ರಕ್ಷಿಸುವ ಈ ಹೋರಾಟವನ್ನು ಬೆಂಬಲಿಸೋಣ. ಕೈಗಾರಿಕೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಶಕ್ತಿ ಹಾಗೂ ಏಕತೆ ಪ್ರದರ್ಶಿಸೋಣ.
ಮಾಹಿತಿಗಾಗಿ
(ವಿಜಯ್ ದೊರೆರಾಜು)
ಕೊಪ್ಪಳ ಜಿಲ್ಲಾ ಕಾರ್ಯದರ್ಶಿ, ಸಿ.ಪಿ.ಐ.ಎಂ.ಎಲ್ ಲಿಬರೇಷನ್,
ಮೊ.ನಂ: ೯೪೪೮೯೧೭೮೨೯