Anjanadri cleanliness drive launched: Mrs. Lalitharani Srirangadevarayalu

ಗಂಗಾವತಿ: ತಾಲೂಕಿನ ಹನುಮನ ಜನ್ಮಸ್ಥಳವಾದ ಅಂಜನಾದ್ರಿಯಲ್ಲಿ ಜೂನ್-೧೮ ಬುಧವಾರ ಅಂಜನಾದ್ರಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ದೊರೆಯಿತು.
ಈ “ಅಂಜನಾದ್ರಿ ಸ್ವಚ್ಛತಾ ಆಂದೋಲನಕ್ಕೆ” ಚಾಲನೆ ನೀಡಿ ಮಾತನಾಡಿದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲುರವರು, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇಶ-ವಿದೇಶಗಳಿಂದ ಅಂಜನಾದ್ರಿಗೆ ಆಗಮಿಸುತ್ತಿದ್ದು, ಹನುಮನ ಜನ್ಮಸ್ಥಳವಾದ ಪುಣ್ಯಕ್ಷೇತ್ರದಲ್ಲಿ ದಿನೇ ದಿನೇ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಮುಂದೊAದು ದಿನ ಪುಣ್ಯಕ್ಷೇತ್ರ ತ್ಯಾಜ್ಯ ಕ್ಷೇತ್ರವಾಗದಿರಲಿ ಎಂದರು. ಮುಂದುವರೆದು ನಮ್ಮ ಪುಣ್ಯಕ್ಷೇತ್ರಗಳನ್ನು ನಾವು ಅತ್ಯಂತ ಶ್ರದ್ಧಾಭಕ್ತಿಯೊಂದಿಗೆ ಸಂರಕ್ಷಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಅಂಜನಾದ್ರಿ ದಿನೇ ದಿನೇ ದೇಶವಿದೇಶಗಳವರೆಗೂ ಪ್ರಖ್ಯಾತಿ ಪಡೆಯುತ್ತಿದ್ದು, ಅದರ ವೈಜ್ಞಾನಿಕ ನಿರ್ವಹಣೆ ಕೂಡ ಅತ್ಯಂತ ಮಹತ್ವದ ಪಾತ್ರವನ್ನು ಪಡೆಯುತ್ತದೆ. ಬರುವ ಭಕ್ತಾದಿಗಳು ಪ್ಲಾಸ್ಟಿಕ್, ಬಟ್ಟೆಗಳನ್ನ ಮತ್ತು ದಾರಗಳನ್ನ ಎಲ್ಲೆಂದರಲ್ಲಿ ಬೆಟ್ಟದ ಮೇಲೆ ಬಿಸಾಡುವುದರಿಂದ, ನಮ್ಮ ಪುಣ್ಯಕ್ಷೇತ್ರದ ಪಾವಿತ್ರತೆಯನ್ನ ಕಳೆದುಕೊಳ್ಳುತ್ತದೆ ಎನ್ನುವ ಎಚ್ಚರಿಕೆ ನಮ್ಮೆಲ್ಲರಲ್ಲೂ ಇರಲೇಬೇಕು. ನಿರಂತರ ಬೆಟ್ಟದ ಸ್ವಚ್ಛತೆ ನಮ್ಮ ಆದ್ಯತೆಯಾಗಬೇಕಿದೆ ಎಂದರು. ಅಂಜನಾದ್ರಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಅಂಜನಾದ್ರಿ ಬೆಟ್ಟದ ಅಡಿಯಲ್ಲಿನ ಬೀದಿಬದಿ ವ್ಯಾಪಾರಸ್ಥರು ಹಾಗೂ ಸುಮಾರು ೨೫೦ಕ್ಕೂ ಹೆಚ್ಚು ಮಹಿಳೆಯರು, ಯುವಕರಿಂದ ಕೂಡಿದ ಅಂಜನಾದ್ರಿ ಸ್ವಯಂ ಸೇವಕರʼ ತಂಡವು ಕಳೆದ ಸುಮಾರು ವರ್ಷಗಳಿಂದ ನಿರಂತರವಾಗಿ ಅಂಜನಾದ್ರಿ ಸ್ವಚ್ಛತೆಯ ಸೇವೆಯನ್ನು ಮುಕ್ತವಾಗಿ ಮಾಡುತ್ತಿರುವುದನ್ನು ಶ್ಲಾಘಿಸಿದರು. ಅಲ್ಲದೇ ಅಂಜನಾದ್ರಿ ಆಡಳಿತ ಮಂಡಳಿ ಮತ್ತು ಮುಜರಾಯಿ ಇಲಾಖೆಯು ಅಂಜನಾದ್ರಿ ಬೆಟ್ಟದ ಅಭಿವೃದ್ದಿ ಮತ್ತು ವೈಜ್ಞಾನಿಕ ನಿರ್ವಹಣೆಯನ್ನು ನಿರಂತರ ಮಾಡಬೇಕೆಂದರು.
ಈ ವೇಳೆ ಅಂಜನಾದ್ರಿ ಪರಿಸರ, ಕೃಷಿಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸೇವಾ ಸಂಸ್ಥೆಯ ಹಿರಿಯರಾದ ಪ್ರಸಾದ ಕಡೇಬಾಗಿಲು ಮಾತನಾಡಿ, ಸುಮಾರು ವರ್ಷಗಳಿಂದ ಅಂಜನಾದ್ರಿ ಸ್ವಚ್ಛತಾ ಸೇವೆಯಲ್ಲಿ ದುಡಿಯುತ್ತಿರುವ “ಅಂಜನಾದ್ರಿ ಸ್ವಯಂ ಸೇವಕರ” ಸೇವೆಯನ್ನು ಆಡಳಿತ ಮಂಡಳಿ/ಇಲಾಖೆ ಗುರಿತಿಸಬೇಕು. ಅಂಜನಾದ್ರಿಯಲ್ಲಿ ನಡೆಯುವ ಪ್ರಕ್ರಿಯೆಯಲ್ಲಿ ನಮ್ಮ ಸ್ವಯಂ ಸೇವಕರ ಸೇವೆಯನ್ನು ನೇಮಕಾತಿಯಲ್ಲಿ ಪರಿಗಣಿಸಬೇಕು ಎಂದರು. ಈ ಬಗ್ಗೆ ಮಾನ್ಯ ಪ್ರವಾಸೋದ್ಯಮ ಸಚಿವರಿಗೆ ಒತ್ತಾಯಿಸಲು ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲುರವರಿಗೆ ಮನವಿ ಮಾಡಿಕೊಂಡರು.
ಈ ವೇಳೆ ಯುವ ನಾಯಕ ನಟ, ಕಾಂಗ್ರೆಸ್ ಮುಖಂಡ ವಿಷ್ಣುತೀರ್ಥ ಜೋಷಿ, ಪ್ರಶಾಂತ, ಮಂಜುನಾಥ, ಬಾಲರಾಜು, ನಾರಾಣಯಪ್ಪ, ಮಾರುತಿ, ಬೀರಪ್ಪ, ಕುಮಾರ್ ಮತ್ತು ಅಪಾರ ಸಂಖ್ಯೆಯಲ್ಲಿ ಮಹಿಳಾ ಸ್ವಯಂ ಸೇವಕರು ಉಪಸ್ಥಿತರಿದ್ದರು.