Form a board for auto technician workers and implement various schemes: Bharadwaj

ಗಂಗಾವತಿ: ಕರ್ನಾಟಕ ರಾಜ್ಯದಲ್ಲಿ ಸುಮಾರು ೫೦೦೦೦ ಕ್ಕೂ ಹೆಚ್ಚು ವಾಹನ ದುರಸ್ಥಿ ಕೆಲಸಗಾರರಿದ್ದು, ಸರ್ಕಾರದಿಂದ ಅವರಿಗೆ ಯಾವುದೇ ಸೌಲಭ್ಯಗಳು ಸಿಗದೇ ವಂಚಿತರಾಗಿದ್ದು, ಸರ್ಕಾರ ಇವರಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಆಟೋ ಟೆಕ್ನಿಷಿಯನ್ ಕಾರ್ಮಿಕರ ಮಂಡಳಿ ರಚಿಸಿ, ವಾಹನಗಳ ಮಾರಾಟದಲ್ಲಿ ೧% ಸೆಸ್ ಪಡೆದುಕೊಂಡು ಮಂಡಳಿಯನ್ನು ಬಲಪಡಿಸಬೇಕೆಂದು ಆಟೋ ಟೆಕ್ನಿಷಿಯನ್ ವೆಲ್‌ಫೇರ್ ಫೋರಂ ನ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಒತ್ತಾಯಿಸಿದರು.
ಅವರು ಜೂನ್-೧೭ ರಂದು ನಗರದ ತಾ.ಪಂ ಕಾರ್ಯಾಲಯದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ವಾಹನಗಳ ಟೈರ್ ಪಂಚರ್‌ದಿAದ ಹಿಡಿದು ಹತ್ತಾರು ವಿಭಾಗಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರಲ್ಲಿ ಪ್ರಮುಖವಾಗಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಸಮುದಾಯದವರೇ ಹೆಚ್ಚಾಗಿರುತ್ತಾರೆ. ಇಡೀ ದೇಶದಲ್ಲಿ ಎರಡು ಕೋಟಿಗಿಂತಲೂ ಹೆಚ್ಚು ಆಟೋ ಟೆಕ್ನಿಷಿಯನ್ಸ್ ವಾಹನ ದುರಸ್ತಿ ಕೆಲಸವನ್ನು ಮಾಡುತ್ತಿದ್ದಾರೆ. ಇವರೆಲ್ಲರೂ ಅತಂತ್ರದಲ್ಲಿದ್ದು, ಸರ್ಕಾರದ ಯಾವುದೇ ಬೆಂಬಲವಿಲ್ಲದೇ ಜೀವಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಭಾರತದಲ್ಲಿ ಪ್ರಥಮವಾಗಿ ದುಡಿಯುವ ವರ್ಗಗಳಿಗೆ ೦೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು, ವಾಹನ ದುರಸ್ತಿ ಕೆಲಸಗಾರರ ಬಗ್ಗೆಯೂ ಕೂಡಾ ಗಮನಹರಿಸಿ ಅವರಿಗೆ ಭದ್ರತೆ ನೀಡಬೇಕಾಗಿದೆ. ವಾಹನ ದುರಸ್ತಿ ಕೆಲಸಗಾರರು ಪಂಚರ್ ಅಂಗಡಿಗಳು, ಟಿಂಕರ್‌ಗಳು, ಹೆಡ್ ರಿಪೇರಿ, ಗ್ಯಾರೇಜ್ ಸೇರಿದಂತೆ ಇನ್ನೂ ಮುಂತಾದ ವಾಹನ ದುರಸ್ತಿ ಕೆಲಸಗಳನ್ನು ಮಾಡುತ್ತಾ ಮೆಕ್ಯಾನಿಕ್‌ಗಳಾಗಿ ಜೀವಿಸುತ್ತಿದ್ದಾರೆ. ಸರ್ಕಾರ ಇವರ ಕಲ್ಯಾಣಕ್ಕಾಗಿ ಕಟ್ಟಡ ಕಾರ್ಮಿಕರಿಗೆ ಮಂಡಳಿ ರಚಿಸಿ ಯೋಜನೆಗಳನ್ನು ಜಾರಿಗೊಳಿಸಿದಂತೆ ಇವರಿಗೂ ಸಹ ಒಂದು ಸಮಿತಿಯನ್ನು ರಚಿಸಿ ನಿವೇಶನ ಹಾಗೂ ಮನೆ ಮಂಜೂರು ಮಾಡುವುದು, ಇವರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ, ಪ್ರತಿ ನಗರ/ಪಟ್ಟಣಗಳಲ್ಲಿ ಆಟೋನಗರ ನಿರ್ಮಿಸಿ ದುಡಿಯಲು ಅವಕಾಶ ಕಲ್ಪಿಸಿಕೊಡುವುದು, ಆಧುನಿಕ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುವುದು, ವೈದ್ಯಕೀಯ ಪರಿಹಾರದ ಜೊತೆಗೆ ಮರಣ ಪರಿಹಾರದ ಯೋಜನೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಂಟಿ ಕಾರ್ಯದರ್ಶಿಯಾದ ಚಾಂದಪಾಷಾ ಹಾಗೂ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಇಂಕ್ವಿಲಾಬ್ ಫಯಾಜ್ ಶಹರಾಜಿದಾರ ಭಾಗವಹಿಸಿದ್ದರು.