Government land reservation from Revenue Department for Sanapura Gram Panchayat building welcomed: Ashoka Gram Panchayat President

ಗಂಗಾವತಿ: ತಾಲೂಕಿನ ಸಣಾಪುರ ಗ್ರಾಮ ಪಂಚಾಯತಿಯು ಸ್ವಂತ ಕಟ್ಟಡವಿಲ್ಲದೆ ಸರ್ಕಾರಿ ಶಾಲೆಯ ಕೊಠಡಿಯಲ್ಲಿತ್ತು. ಪಂಚಾಯತಿಯ ಬಹುದಿನದ ಬೇಡಿಕೆಯಾದ ಸ್ವಂತ ಕಟ್ಟಡಕ್ಕೆ ಕಂದಾಯ ಇಲಾಖೆಯು ಸಣಾಪುರ ಗ್ರಾಮದ ಸರ್ವೇ ನಂ: ೦೬ ರಲ್ಲಿನ ೧೮ ಎಕರೆ ೩೦ ಗುಂಟೆ ಸರ್ಕಾರಿ ಭೂಮಿಯ ಪೈಕಿ ೦೧ ಎಕರೆ ೨೦ ಗುಂಟೆ ಭೂಮಿಯನ್ನು ಮೀಸಲಿರಿಸಿ ಸರ್ವೆ ಮಾಡಿಕೊಟ್ಟಿರುವುದು ಸ್ವಾಗತಾರ್ಹವಾಗಿದೆ ಎಂದು ಪಂಚಾಯತಿ ಅಧ್ಯಕ್ಷರಾದ ಅಶೋಕ ಅವರು ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದರು.
ಸುಮಾರು ೨೦೧೫ ರಿಂದ ಪಂಚಾಯತಿಯು ಸರ್ಕಾರಿ ಶಾಲೆ ಕಟ್ಟಡದಲ್ಲಿದ್ದು, ಶಾಲೆಗೆ ಕೊಠಡಿಗಳ ಕೊರತೆಯಿಂದ ಪಂಚಾಯತಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಶಾಲೆಯವರಿಂದ ಒತ್ತಡವಿತ್ತು. ಅದರಂತೆ ಪಂಚಾಯತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಸಾಮಾನ್ಯ ಸಭೆ ನಡೆಸಿ, ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತಿ ಕಟ್ಟಡ ಇಲ್ಲದೇ ಇರುವುದು, ಅಲ್ಲದೆ ಗ್ರಂಥಾಲಯಕ್ಕೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಟ್ಟಡ ಇಲ್ಲದೇ ಇರುವುದರ ಬಗ್ಗೆ ಚರ್ಚಿಸಿ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರ ಗಮನಕ್ಕೆ ತರಲಾಗಿತ್ತು. ಅದರಂತೆ ಸದರಿ ಅಧಿಕಾರಿಗಳ ಆದೇಶದ ಮೇರೆಗೆ ಗಂಗಾವತಿ ತಹಶೀಲ್ದಾರರು ಸಣಾಪುರ ಗ್ರಾಮದ ಸರ್ವೇ ನಂ: ೦೬ ರಲ್ಲಿ ೦೧ ಎಕರೆ ೨೦ ಗುಂಟೆ ಭೂಮಿಯನ್ನು ಪಂಚಾಯತಿ ಕಟ್ಟಡಕ್ಕೆ ಮೀಸಲಿರಿಸಿ, ಗ್ರಾ.ಪಂ ಹೆಸರಿಗೆ ವರ್ಗಾಯಿಸಿರುವುದು ಸ್ವಾಗತದ ವಿಷಯ. ಅದರಂತೆ ಜೂನ್-೧೩ ರಂದು ಗ್ರಾಮ ಆಡಳಿತ ಅಧಿಕಾರಿ ಚನ್ನಪ್ಪ, ಕಂದಾಯ ನಿರೀಕ್ಷಕರಾದ ಬಸರುದ್ದೀನ್ ಹಾಗೂ ತಾಲೂಕು ಭೂಮಾಪಕರು ಮಹಮ್ಮದ್ ರಫಿ ಇವರುಗಳು ಗಡಿಯನ್ನು ಗುರುತು ಮಾಡಿ ಸುತ್ತಲೂ ಕಲ್ಲನ್ನು ಹಾಕಿ ಕೆಂಪು ಬಣ್ಣದಿಂದ ಗುರುತು ಮಾಡಿಕೊಟ್ಟಿರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಶೇರ್ ಖಾನ್ ಸೇರಿದಂತೆ ಪಂಚಾಯತಿ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.