At the recent Beda Jangam, Bedu Jangam, Budga Jangam, round table meeting, there were heated arguments.

ಬೆಂಗಳೂರು: ಇತ್ತೀಚಿಗೆ ನಡೆದ ಬೇಡ ಜಂಗಮ, ಬೇಡುವ ಜಂಗಮ’ ಬುಡ್ಗಜಂಗಮ ದುಂಡು ಮೇಜಿನ ಸಭೆಯಲ್ಲಿ ಪರ ವಿರೋಧ ವಾದಗಳು ತೀಕ್ಷ್ಣವಾಗಿ ಜರುಗಿತು.
ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಮಾತನಾಡಿ ಅತ್ಯಂತ ನಿಕೃಷ್ಟವಾದ ಅಲೆಮಾರಿ ಸಮುದಾಯದ ಸವಲತ್ತುಗಳನ್ನು ಅತ್ಯಂತ ಶ್ರೀಮಂತವಾದ ಬೇಡುವ ಜಂಗಮ ಎಂದು ಹೇಳಿದರು.
ಬೇಡುವ ಜಂಗಮ ಮತ್ತು ಬೇಡ ಜಂಗಮ ಒಂದೇ ಅಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಹೇಳಿ ಎರಡೂ ಸಮುದಾಯಗಳ ನಡುವಿರುವ ವ್ಯತ್ಯಾಸಗಳನ್ನು ವಿವರಿಸಿದರು.
ಐತಿಹಾಸಿಕವಾಗಿ ಲಿಂಗಿ ಬ್ರಾಹ್ಮಣರೆಂದು ಕರೆದುಕೊಂಡು ಲಿಂಗಾಯತರಲ್ಲಿ ಚಾತುರ್ವಣ್ಯ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸಿದವರೇ ಇಂದು ದಲಿತ ಬೇಡ ಜಂಗಮರೆಂದು ಕರೆದುಕೊಳ್ಳುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಸಭೆಗೆ ವೀರಶೈವ ಜಂಗಮ ಸಂಘದಿಂದ ಬಂದಿದ್ದ ಸುಮಾರು ಹದಿನೈದು ಜನರು ಇದಕ್ಕೆ ವಿರುದ್ಧವಾಗಿ ನಿಲುವು ತೆಗೆದುಕೊಂಡರು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಾಗರಾಜ ಹೇಳಿದರು.
ಸಭೆಯಲ್ಲಿ ಮಾತನಾಡಿದ ವೀರಶೈವ ಜಂಗಮರೊಬ್ಬರು ‘ಬ್ರಾಹ್ಮಣರನ್ನು ಹೊರತುಪಡಿಸಿ ಎಲ್ಲರೂ ಅಸ್ಪೃಶ್ಯರೇ ಆಗಿದ್ದಾರೆ. ಬೇಡ ಜಂಗಮರು ಬೇರೆಯಲ್ಲ ಬೇಡುವ ಜಂಗಮ ಬೇರೆಯಲ್ಲ. ಎಲ್ಲರೂ ಒಂದೇ,’ ಎಂದು ಪ್ರತಿಪಾದಿಸಿದರು.
‘ನಮ್ಮನ್ನೂ ಬ್ರಾಹ್ಮಣರು ಹೊರಗಿಟ್ಟಿದ್ದಾರೆ. ನಾವು ಊಟ ಮಾಡಿದರೆ ಸೆಗಣಿ ಸಾರಿಸಿ ಬರಬೇಕು,’ ಎಂದು ಹೇಳಿದರು.
‘ವೀರಶೈವ ಜಂಗಮರು ಕೆಲವು ಕೋರ್ಟ್ ದಾಖಲೆ ತಂದಿದ್ದರು. ಆದರೆ ಅವುಗಳನ್ನು ಅವರು ಸರಿಯಾಗಿ ಓದಿರಲೇ ಇಲ್ಲ. ಅವುಗಳನ್ನು ಜಾಮದಾರ ಮತ್ತು ದ್ವಾರಕಾನಾಥ್ ಪರಿಶೀಲಿಸಿ ಸರಿಯಾದ ಅರ್ಥವನ್ನು ವಿವರಿಸಿದರು,’ ಎಂದು ನಾಗರಾಜ್ ಹೇಳಿದರು.
ಆದರೂ ಹಠಬಿಡದೆ ವೀರಶೈವ ಜಂಗಮರು ತಾವೂ ದಲಿತ ಸಮುದಾಯವೇ ಎಂದು ಹೇಳಿದರು. ಆಗ ದ್ವಾರಕಾನಾಥ್ ಬುಡ್ಗ ಬೇಡ ಜಂಗಮರು ಮಾಂಸಾಹಾರಿಗಳು. ಅವರು ಬೆಕ್ಕು ನರಿ ಅಳಿಲುಗಳನ್ನೆಲ್ಲ ತಿನ್ನುತ್ತಾರೆ. ಈಗಲೇ ಅವರು ತಿನ್ನುವ ಅಳಿಲು, ಇಲಿ ತರಿಸುತ್ತೀವಿ. ಅವರೊಂದಿಗೆ ಕುಳಿತು ನೀವೂ ಅವನ್ನು ತಿಂದರೆ ಬೇಡುವ ಜಂಗಮ ಬೇಡ ಜಂಗಮ ಒಂದೇ ಎಂದು ಒಪ್ಪಿಕೊಳ್ಳುತ್ತೇವೆ’ ದ್ವಾರಕಾನಾಥ್ ಸವಾಲು ಹಾಕಿದರು.
ಇಂತಹ ಚರ್ಚೆ ನಡೆಯಲೆಂದೇ ಸಭೆ ಏರ್ಪಡಿಸಿದ್ದು. ಎಲ್ಲೂ ವಾದ ವಿವಾದ ಸಭ್ಯತೆ ಮೀರಿ ನಡೆಯಲಿಲ್ಲ. ಆದರೂ ವೀರಶೈವ ಜಂಗಮರು ಅಸಹನೆಯಿಂದ ಹೊರನಡೆದಿದ್ದು ಸರಿ ಕಾಣಲಿಲ್ಲ, ಎಂದು ತಿಳಿದು ಬಂದಿದೆ.