
TAP Executive Officers visit and inspect Anganwadi Centers

ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ವಿತರಿಸಿ–ತಾಪಂ ಇಓ ರಾಮರೆಡ್ಡಿ ಪಾಟೀಲ್ ಸೂಚನೆ

ಗಂಗಾವತಿ : ತಾಲೂಕಿನ ಚಿಕ್ಕಜಂತಗಲ್ ಗ್ರಾ.ಪಂ. ವ್ಯಾಪ್ತಿಯ ಹೊಸ ಅಯೋಧ್ಯ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಮಂಗಳವಾರ ಭೇಟಿ ನೀಡಿ ಆಹಾರ ಧಾನ್ಯ ಮತ್ತು ಮಕ್ಕಳ ಹಾಜರಾತಿ, ಸೌಲಭ್ಯಗಳ ಪರಿಶೀಲನೆ ಮಾಡಿದರು.
ತಾಪಂ ಇಓ ರಾಮರೆಡ್ಡಿ ಪಾಟೀಲ್ ಅವರು ಮಾತನಾಡಿ, ಅಂಗನವಾಡಿ ಚಿಣ್ಣರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ವಿತರಣೆ ಮಾಡಬೇಕು. ಕೇಂದ್ರದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಕ್ಕಳ ಹಾಜರಾತಿ ಹೆಚ್ಚಿಸಬೇಕು. ಜೊತೆಗೆ ಮಕ್ಕಳಿಗೆ ಕೇಂದ್ರದಲ್ಲಿ ಕಲಿಕಾ ಪೂರಕ ವಾತಾವರಣ ನಿರ್ಮಿಸಿ ಶಾಲಾ ಪೂರ್ವ ಶಿಕ್ಷಣ ನೀಡಬೇಕು ಎಂದು ಸೂಚಿಸಿದರು.
ಮಕ್ಕಳಿಗೆ ಹಾಡು, ಕಥೆ ಇತರೆ ವಿಭಿನ್ನ ಚಟುವಟಿಕೆಗಳ ಮೂಲಕ ಚಿಣ್ಣರನ್ನು ಸೆಳೆಯಬೇಕು. ಮಕ್ಕಳ ಹಾಜರಾತಿ ಹಾಗೂ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ವಿತರಿಸುವ ಪೌಷ್ಟಿಕ ಆಹಾರದ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ನಂತರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿರುವ ಶಾಲೆಯ ಕೊಠಡಿ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ವೇಳೆ ಚಿಕ್ಕಜಂತಗಲ್ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಕಡಿವಾಳ, ಮುಖ್ಯಶಿಕ್ಷಕರಾದ ಮಂಜುನಾಥ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.




