Samara International Islamic School de-recognition: School Education Department issues notice to find alternative system within 7 days

ಬೆಂಗಳೂರು; ಸುಳ್ಳು ದಾಖಲೆಗಳನ್ನು ನೀಡಿ ಸರ್ಕಾರ, ವಿದ್ಯಾರ್ಥಿಗಳು, ಪೋಷಕರನ್ನು ವಂಚಿಸಿದ್ದ ನಗರದ ಥಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದೆ.

ನಕಲಿ ದಾಖಲೆಗಳನ್ನು ಸಲ್ಲಿಸಿ ಜಾಮೀಯ ಮಹಮ್ಮದೀಯ ಮನ್ಸೂರ[ರಿ], ಜಾಮೀಯಾ ಮಹಮ್ಮದೀಯ ಎಜುಕೇಶನ್ ಸೊಸೈಟಿ, ದಿ ಅಲ್ ಜಾಮೀಯಾ ಮಹಮ್ಮದೀಯ ಎಜುಕೇಷನ್ ಸೊಸೈಟಿ ಮತ್ತು ಅಲ್ ಜಾಮೀಯಾ ಮಹಮ್ಮದೀಯ ಎಂtಬ ಬೇರೆ ಬೇರೆ ಟ್ರಸ್ಟ್, ಸೊಸೈಟಿಗಳ ಹೆಸರಿನ ಮೂಲಕ 1 ರಿಂದ 10 ನೇ ತರಗತಿವರೆಗೆ ನಡೆಯುತ್ತಿದ್ದ ಶಾಲೆಯ ಮಾನ್ಯತೆಯನ್ನು ರದ್ದು ಮಾಡಲಾಗಿದೆ ಎಂದು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಈ ಆದೇಶ ಉಪನಿರ್ದೇಶಕರಿಗೆ ತಲುಪಿದ 7 ದಿನಗಳ ಒಳಗಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಈ ಶಾಲೆಯ ಶೈಕ್ಷಣಿಕ ದಾಖಲಾತಿಗಳನ್ನು ಸಮೀಪದ ಸರ್ಕಾರಿ ಶಾಲೆಗೆ ಹಸ್ತಾಂತರಿಸಿ ಈ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ದಾಸ್ತಾನು ವಹಿಯಲ್ಲಿ ನಮೂದಿಸಿ ದಾಖಲೆ ನಿರ್ವಹಿಸಲು ಉಪ ನಿರ್ದೇಶಕರು ಕ್ರಮ ವಹಿಸಬೇಕಾಗುತ್ತದೆ ಎಂದು ತಿಳಿಸಿದೆ.
ಶಿಕ್ಷಣ ಕಾಯ್ದೆ ನಿಯಮ 34 ರಡಿ ಉಪ ನಿರ್ದೇಶಕರ ಹಂತದಲ್ಲಿ ಮಾಡಿರುವ ನೋಂದಣಿಯನ್ನು ರದ್ದುಪಡಿಸಬೇಕು. ಶಿಕ್ಷಣ ಕಾಯ್ದೆ 1983 ರ ನಿಯಮ, 1999 ರ 13[3] ರಂತೆ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮೀಪದ ಶಾಲೆಗೆ ದಾಖಲಿಸಲು ಉಪ ನಿರ್ದೇಶಕರು ಸೂಕ್ತ ಕ್ರಮ ವಹಿಸಬೇಕು ಮತ್ತು ಈ ಆದೇಶದ ತಿದ್ದುಪಡಿ ಹಾಗೂ ಮಾರ್ಪಾಡಿಗೆ ಅವಕಾಶವಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.
ಶಾಲೆಯ ಆಡಳಿತ ಮಂಡಳಿಯು 1 ರಿಂದ 10 ನೇ ತರಗತಿವರೆಗೆ ಔಪಚಾರಿಕ ಶಿಕ್ಷಣ ಬೋಧಿಸಲು ಅನುಮತಿ ಪಡೆದು ಅದೇ ಆವರಣದಲ್ಲಿ ಅನೌಪಚಾರಿಕ ಶಿಕ್ಷಣವಾದ ಮದರಸವನ್ನು ಅನುಮತಿ ಇಲ್ಲದೇ ನಡೆಸುತ್ತಿರುವುದು ಕಂಡು ಬಂದಿದೆ. ಆಡಳಿತ ಮಂಡಳಿಗೆ ಹಲವಾರು ನೋಟೀಸ್ ಗಳನ್ನು ನೀಡಿ, ವಿವರಣೆ ಪಡೆದು, ಶಿಕ್ಷಣ ಇಲಾಖೆ ತ್ರಿಸದಸ್ಯ ಸಮಿತಿ ರಚಿಸಿ ವರದಿ ಪಡೆದು ಮಾನ್ಯತೆ ರದ್ದುಪಡಿಸಲು ತೀರ್ಮಾನ ಕೈಗೊಂಡಿದೆ.