Warning of withdrawal of recognition of Samar International Islamic School under Section 39 of the Education Act – 1983

7 ದಿನಗಳ ಒಳಗಾಗಿ ದಾಖಲೆ ಒದಗಿಸದಿದ್ದರೆ ಕ್ರಮ; ಶಾಲಾ ಶಿಕ್ಷಣ ಇಲಾಖೆಯಿಂದ ಅಂತಿಮ ನೋಟೀಸ್ ಜಾರಿ
ಬೆಂಗಳೂರು:ಕಾನೂನು ಬಾಹಿರವಾಗಿ ನಡೆಯುತ್ತಿರುವ ಹೆಗಡೆ ನಗರದ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ( ಜಮೀಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ – ಮುಂಬೈ) ಗೆ ಶಾಲಾ ಶಿಕ್ಷಣ ಇಲಾಖೆ ಕಾರಣ ಕೇಳಿ ಅಂತಿಮ ನೋಟೀಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ. ಇಲ್ಲವಾದಲ್ಲಿ ಶಾಲೆಯ ಮಾನ್ಯತೆ ಹಿಂಪಡೆದು, ಶಾಲೆಗೆ ನೀಡಿರುವ ನೋಂದಣಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.
ಕಾನೂನಿಗೆ ವಿರುದ್ಧವಾಗಿ ಶಿಕ್ಷಣ ಸಂಸ್ಥೆ ನಡೆಯುತ್ತಿರುವ ಕುರಿತು ಹಲವು ದೂರುಗಳು ಕೇಳಿ ಬಂದಿದ್ದು, ಇವೆಲ್ಲವನ್ನೂ ಪರಿಶೀಲಿಸಲಾಗಿದೆ. ಹೀಗಾಗಿ ಮೂಲ ದಾಖಲೆಗಳನ್ನು ಒದಗಿಸುವಂತೆ ಹಲವು ಬಾರಿ ನೋಟೀಸ್ ನೀಡಿದ್ದು, ಈ ವರೆಗೆ ದಾಖಲೆ ಸಲ್ಲಿಸಿಲ್ಲ. ವಿದ್ಯಾರ್ಥಿಗಳು, ಪೋಷಕರಿಗೆ ಸುಳ್ಳು ಮಾಹಿತಿ ನೀಡಿ, ಶಿಕ್ಷಣ ಇಲಾಖೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಶಿಕ್ಷಣ ಸಂಸ್ಥೆ ಹೆಜ್ಜೆ ಹೆಜ್ಜೆಗೂ ಗೊಂದಲಕಾರಿ ನಿರ್ಧಾರಗಳನ್ನು ತೆಗೆದುಕೊಂಡು, ಒಂದೊಂದು ಕಡೆ ಒಂದೊಂದು ರೀತಿಯ ದಾಖಲೆಗಳನ್ನು ಸಲ್ಲಿಸಿದೆ. ಒಟ್ಟಾರೆ ಆಡಳಿತ ಮಂಡಳಿ ಕಾರ್ಯವೈಖರಿ ಸಂಶಯಾಸ್ಪದವಾಗಿದೆ ಎಂದು ಹೇಳಿದೆ.
1 ರಿಂದ 10 ನೇ ತರಗತಿಗೆ ನೋಂದಣಿ ಮಾಡಿಸಿಕೊಂಡು ಶಾಲೆಯ ಹೆಸರನ್ನು ಬದಲಾಯಿಸಲು ಅನುಮತಿ ಪಡೆದು ನಡೆಸುತ್ತಿರುವ ಸಾಮರ್ ಇಂಟರ್ನ್ಯಾಷನಲ್ ಸ್ಕೂಲ್ ನ ಶಾಲೆ ಮತ್ತು ಆಡಳಿತ ಮಂಡಳಿಯ ಹೆಸರನ್ನು ಒಂದೊಂದು ದಾಖಲೆಗಳಲ್ಲಿ ಒಂದೊಂದು ಹೆಸರನ್ನು ನಮೂದಿಸಿಕೊಂಡಿದೆ. ಸಂಸ್ಥೆ ಮತ್ತು ಶಾಲೆಯ ಜಾಗಕ್ಕೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಪರಿಶೀಲನೆಗೆ ಈ ವರೆಗೆ ಒದಗಿಸಿಲ್ಲ ಎಂದು ಹೇಳಿದೆ.
ಶಾಲಾ ಶಿಕ್ಷಣ ಇಲಾಖೆಗೆ, ಸಾರ್ವಜನಿಕರಿಗೆ, ಮಕ್ಕಳಿಗೆ ಹಾಗೂ ಪೋಷಕರಿಗೆ ಶಿಕ್ಷಣ ಸಂಸ್ಥೆ ವಂಚನೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕರ್ನಾಟಕ ಶಿಕ್ಷಣ ಕಾಯ್ದೆ – 1983 ಸೆಕ್ಷನ್ 7[ಎ] 39ರ ಅನ್ವಯ ನಿಮ್ಮ ಶಾಲೆಗೆ ನೀಡಿರುವ ಮಾನ್ಯತೆಯನ್ನು ಹಿಂಪಡೆಯಲು ಹಾಗೂ ನಿಯಮ 34 ರ ಪ್ರಕಾರ ನಿಮ್ಮ ಶಾಲೆಗೆ ನೀಡಿರುವ ನೋಂದಣಿಯನ್ನು ರದ್ದುಪಡಿಸಲು ಮೇಲಧಿಕಾರಿಗಳಿಗೆ ಏಕೆ ಶಿಫಾರಸ್ಸು ಮಾಡಬಾರದು ಎಂಬುದಕ್ಕೆ ಕಾರಣ ಕೇಳಿ ಅಂತಿಮ ನೋಟೀಸ್ ನೀಡಲಾಗಿದೆ. 7 ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿಯನ್ನು ಸಮರ್ಥನೀಯ ದಾಖಲೆಗಳೊಂದಿಗೆ ಸಲ್ಲಿಸದಿದ್ದರೆ ಶಾಲೆಯ ಮಾನ್ಯತೆ ಹಿಂಪಡೆದು, ಶಾಲೆಗೆ ನೀಡಿರುವ ನೋಂದಣಿಯನ್ನು ರದ್ದುಪಡಿಸಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ನೋಟೀಸ್ ಅಂತಿಮ ಜಾರಿ ಮಾಡಿದ್ದಾರೆ.