Complaint to superiors demanding disciplinary action against officers who were absent from the KDP meeting in Anegundi Gram Panchayat: Huligemma Honnappa Nayaka

ಗಂಗಾವತಿ: ಆನೆಗುಂದಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ೨೦ ಅಂಶಗಳ ಕಾರ್ಯಕ್ರಮವು ಸೇರಿದಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಗೈರು ಆಗಿದ್ದು, ಗೈರು ಆದ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಹುಲಿಗೆಮ್ಮ ಹೊನ್ನಪ್ಪ ನಾಯಕ ತಿಳಿಸಿದರು.
ಅವರು ಮೇ-೧೫ ಗುರುವಾರ ಆನೆಗುಂದಿ ಗ್ರಾಮ ಪಂಚಾಯಿತಿಯಲ್ಲಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಭೆಯಲ್ಲಿ ೨೧ ಇಲಾಖೆಗಳ ಅಧಿಕಾರಿಗಳಲ್ಲಿ ಕೇವಲ ೬ ಇಲಾಖೆಗಳ ಅಧಿಕಾರಿಗಳು ಮಾತ್ರ ಹಾಜಿರಾಗಿದ್ದು, ಉಳಿದ ಇಲಾಖೆಗಳ ಅಧಿಕಾರಿಗಳು ಗೈರಾಗಿರುತ್ತಾರೆ. ಆನೆಗುಂದಿ ಗ್ರಾಮ ಪಂಚಾಯತಿ ಕೆಡಿಪಿ ಸಭೆಗೆ ಹಾಜಿರಾಗದೆ ಸಭೆಗೆ ಗೌರವ ನೀಡದೆ ಇರುವ ಕಾರಣ ಗ್ರಾ.ಪಂ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆಗಳು ಹಾಗೂ ದೂರುಗಳ ಬಗ್ಗೆ ಇತ್ಯರ್ಥಪಡಿಸಲಾಗದೇ, ಕಡತಗಳ ವಿಲೇವಾರಿ ಮಾಡಲಾಗದೆ ವಿಳಂಬವಾಗುತ್ತಿದೆ. ಈ ಸಭೆ ಮಾತ್ರವಲ್ಲದೇ ಹಿಂದಿನ ಪ್ರತಿ ಸಭೆಯಲ್ಲೂ ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಾಗುತ್ತಿದ್ದು, ಇದರಿಂದ ಯವುದೇ ಸಭೆಗಳು ಯಶಸ್ವಿಯಾಗಿ ಜರುಗದೇ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಗದೇ ಅಭಿವೃದ್ಧಿ ಕೆಲಸಗಳು ಕುಂಟಿತಗೊಳ್ಳುತ್ತಿವೆ. ಕಾರಣ ಈ ಸಭೆಗೆ ಗೈರು ಆದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ ಕೊಪ್ಪಳರವರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರಾಜಶೇಖರ್, ಗ್ರಾ.ಪಂ ಪ್ರಭಾರಿ ಪಿ.ಡಿ.ಓ ರವೀಂದ್ರ ಕುಲಕರ್ಣಿ ಸೇರಿದಂತೆ ಪಂಚಾಯತಿಯ ಇತರ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.