Breaking News

ಅನ್ಸಾರಿಯವರಿಂದ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ: ರಮೇಶ ಕಾಳೆ

The development of the constituency is possible only through the Ansaris: Ramesh Kale

ಮತದಾರರು ಜನಮನದ ನಾಯಕನ ಗೆಲ್ಲಿಸುವ ದೃಢ ಸಂಕಲ್ಪ ಮಾಡಬೇಕಿದೆ

IMG 20250512 WA0067

ಗಂಗಾವತಿ, ಮೇ.12: ಸುಳ್ಳು ಭರವಸೆಗಳನ್ನು ನೀಡಿ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವ ಜನಾರ್ಧನ ರೆಡ್ಡಿ ಸದ್ಯಕ್ಕೆ ಗಣಿ ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಕಳೆದ ಎರಡು ವರ್ಷಗಳ ಇವರ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕುಂಠಿತವಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರವು 20 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಹಗರಣದಲ್ಲಿ ಏಳು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿರುವ ಜನಾರ್ಧನ ರೆಡ್ಡಿಯವರ ಶಾಸಕತ್ವ ರದ್ದಾಗಿದ್ದು ಮುಂಬರುವ ದಿನಗಳಲ್ಲಿ ಉಪಚುನಾವಣೆ ಎದುರಾಗಲಿದೆ. ಇನ್ನಾದರೂ ಕ್ಷೇತ್ರದ ಮತದಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಭಿವೃದ್ಧಿಯ ಹರಿಕಾರ ಇಕ್ಬಾಲ್ ಅನ್ಸಾರಿಯವರ ಬೆಂಬಲಕ್ಕೆ ನಿಂತು ಅವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ ಎಂದು ಕಾಂಗ್ರೆಸ್ ಯುವ ದಲಿತ ಮುಖಂಡ ರಮೇಶ ಕಾಳೆ ಕರೆ ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ರಮೇಶ ಕಾಳೆ ಅವರು, ಬಳ್ಳಾರಿಯಿಂದ ನಿರ್ಬಂಧನೆಗೆ ಒಳಗಾಗಿ ಗಂಗಾವತಿ ಪ್ರವೇಶಿಸಿದ್ದ ಜನಾರ್ಧನ ರೆಡ್ಡಿ ಚುನಾವಣೆ ಸಂದರ್ಭದಲ್ಲಿ ಸಾವಿರಾರು ಸುಳ್ಳು ಭರವಸೆಗಳು ಹಾಗೂ ಹುಸಿ ಕನಸುಗಳನ್ನು ಬಿತ್ತುವ ಮೂಲಕ ಜನರನ್ನು ಮರಳು ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿಯೇ ರೆಡ್ಡಿಯವರ ಅಸಲಿ ವ್ಯಕ್ತಿತ್ವದ ಬಗ್ಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು ಜನರನ್ನು ಎಚ್ಚರಿಸಿದ್ದರು. ಆದರೆ, ಆಮೀಷಗಳಿಂದಾಗಿ ಮೈಮರೆತ ಜನ ರೆಡ್ಡಿಯನ್ನು ಬೆಂಬಲಿಸಿ ಇಂದು ಪಶ್ಚತಾಪ ಪಡುವಂತಾಗಿದೆ. ಕಳೆದ ನಾಲ್ಕು ದಶಕಗಳಿಂದ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯವಾಗಿ ಸಕ್ರೀಯವಾಗಿದ್ದ ಇಕ್ಬಾಲ್ ಅನ್ಸಾರಿಯವರು ಸಚಿವರಾದ ಸಮಯದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಮತ್ತು ಅವರ ಅಭಿವೃದ್ಧಿ ಕಾರ್ಯಗಳು ರಾಜ್ಯದ ಗಮನ ಸೆಳೆದಿವೆ. ಯಾವತ್ತೂ ಹುಸಿ ಭರವಸೆ ನೀಡಿದವರಲ್ಲ. ಜನರನ್ನು ಮರಳು ಮಾಡುವ ಪ್ರಯತ್ನವನ್ನೂ ಮಾಡಿದವರಲ್ಲ. ಅಂತಹ ಪಾರದರ್ಶಕ ವ್ಯಕ್ತಿತ್ವದ ಅನ್ಸಾರಿಯವರಿಂದಾಗಿ ಕ್ಷೇತ್ರ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದಿತ್ತು. ಆದರೆ, ರೆಡ್ಡಿಯ ಪ್ರವೇಶದ ನಂತರ ಅಭಿವೃದ್ಧಿ ಕುಂಠಿತವಾಗಿ ಮತ್ತೆ 20 ವರ್ಷ ಹಿಂದಕ್ಕೆ ಹೋಗಿದೆ. ಆದ್ದರಿಂದ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರನ್ನು ಏಕಮುಖವಾಗಿ ಅತ್ಯಂತ ಹೆಚ್ಚಿನ ಬಹುಮತದಲ್ಲಿ ಗೆಲ್ಲಿಸುವ ಸಂಕಲ್ಪವನ್ನು ಈ ಕ್ಷೇತ್ರದ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿಯ ಕುರಿತಂತೆ ನಾನೂ ಕೂಡ ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ ಮತದಾರರನ್ನು ಎಚ್ಚರಿಸಿದ್ದೆ. ಬಣ್ಣದ ಮಾತುಗಳಿಗೆ, ಸುಳ್ಳು ಭರವಸೆ, ಆಮೀಷಗಳಿಗೆ ಬಲಿಯಾಗದಂತೆ ಕೂಡ ಮನವಿ ಮಾಡಿದ್ದೆ. ಆದರೆ, ದೀಪದ ಬೆಳಕಿಗೆ ಆಕರ್ಷಣೆಗೆ ಒಳಗಾಗುವ ಮಿಂಚು ಹುಳುಗಳಂತೆ ಕೆಲವರು ಆದನ ಆಮೀಷಕ್ಕೆ ಬಲಿಯಾಗಿದ್ದು ಇಂದು ಎಲ್ಲರ ಕಣ್ಣಮುಂದೆ ಇದೆ. ಇನ್ನಾದರೂ ಕ್ಷೇತ್ರದ ಮತದಾರರು ಜಾಗೃತರಾಗಿ ಜನನಾಯಕರ ಆಯ್ಕೆ ವಿಚಾರದಲ್ಲಿ ಸದೃಢ ನಿಲುವು ತೋರಬೇಕಿದೆ. ಕಳೆದ ಎರಡು ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯನ್ನು ಗಮನಿಸಿದರೆ ಅನ್ಸಾರಿಯನ್ನು ಬಿಟ್ಟರೆ ಈ ಕ್ಷೇತ್ರದ ಅಭಿವೃದ್ಧ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂಬುವುದು ಸಾಬೀತಾಗಿದೆ. ಆದ್ದರಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಮನದ ನಾಯಕ ಅನ್ಸಾರಿಯವರನ್ನು ಬೆಂಬಲಿಸಿ ಅಭೂತಪೂರ್ವ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ರಮೇಶ ಕಾಳೆ ಮನವಿ ಮಾಡಿದ್ದಾರೆ.

About Mallikarjun

Check Also

screenshot 2025 12 17 18 45 28 37 e307a3f9df9f380ebaf106e1dc980bb6.jpg

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.