Agi Full Moon Day, Lord Shiva’s Memorial Festival

ಜಯಂತಿ: ಆಗಿ ಹುಣ್ಣಿಮೆ
ಸ್ಥಳ: ಅಡಗಂಟಿ, ಶಿಕಾರಿಪುರ ತಾ, ಶಿವಮೊಗ್ಗ ಜಿಲ್ಲೆ.
ಕಾಯಕ: ಕಂಬಳಿ ನೇಯುವುದು
ಲಭ್ಯ ವಚನಗಳ ಸಂಖ್ಯೆ: ೦೩
ಅಂಕಿತ: ನಾಗಪ್ರಿಯ ಚೆನ್ನರಾಮೇಶ್ವರಾ
ಬಸವಣ್ಣನವರ ಚರಿತ್ರೆಯಲ್ಲಿ ಬರುವ ಸಂಬೋಳಿ ನಾಗಿಮಯ್ಯ, ಕಂಬಳಿಯ ನಾಗಿದೇವರು ಎಂಬ ಹೆಸರು ಇವರಿಗಿದೆ.
ಅಸ್ಪೃಶ್ಯ ಜಾತಿಯಿಂದ ಬಂದ ಶರಣರು. ಲಿಂಗದ ಮಹತ್ವ, ಸದಾಚಾರ ನಿಷ್ಠೆ ಇವರ ವಚನಗಳಲ್ಲಿ ತುಂಬ ಆಪ್ತವಾಗಿ ಹೇಳಲ್ಪಟ್ಟಿವೆ. ಸದಾಚಾರ, ಸಮಯಾಚಾರ, ಲಿಂಗಮಹತ್ವಗಳಿಗೆ ಸಂಬಂಧಿಸಿದ ವಿವರಗಳು ಇವರ ವಚನಗಳಲ್ಲಿವೆ.
ಒಮ್ಮೆ ಶಿವಭಕ್ತರ ಕೈಂಕರ್ಯಕ್ಕೆ ಮೀಸಲಾಗಿದ್ದ ಕಂಬಳಿಯನ್ನು ಕೊಂಡಿ ಮಂಚಣ್ಣನವರು ಬಲವಂತವಾಗಿ ಕಸಿದುಕೊಂಡು ಅದರಿಂದ ಸಂಕಷ್ಟ ಅನುಭವಿಸಿ ಹಿಂತಿರುಗಿಸಿದರು ಎಂದು ಮೌಖಿಕ ಕಥೆಗಳಿವೆ. ಬಸವ ಕಲ್ಯಾಣದಲ್ಲಿ ಈಗಲೂ ಕಂಬಳಿ ನಾಗಿದೇವರ ಮಠವೆಂದು ಒಂದು ಮಠವಿದೆ. ಜಾನಪದ ಸಾಹಿತ್ಯದಲ್ಲಿ –
ಕಲ್ಯಾಣದ ಊರಾಗ ಕಂಬಳಿ ಮಠದಾಗ ಕಂಬಳಿ ನಾಗಿದೇವ ಶರಣರು | ಶಿವಲಿಂಗ ಬನ್ನಿರೇ
ಕಂಬಳಿ ನಾಗಿದೇವ ಅವರೆಂತಾ ಶರಣರು ದರುಮಾದ ಮೂರ್ತಿ ಎನಿಸ್ಯಾರೆ | ಶಿವಲಿಂಗ ಬನ್ನಿರೇ..
ಇವರದೊಂದು ವಚನ:
ಹುಟ್ಟಿದಾಕ್ಷಣವೆ ಲಿಂಗಸ್ವಾಯತವ ಮಾಡಿ, ಶಿಶುವ ತನ್ನ ಶಿಶುವೆಂದು ಮುಖವ ನೋಡುವದು ಸದಾಚಾರ.
ಅದಲ್ಲದೆ, ಬರಿಯ ವಿಭೂತಿಯ ಪಟ್ಟವ ಕಟ್ಟಿ,
ಗುರುಕಾರುಣ್ಯವಾಯಿತ್ತೆಂದು
ಅನುಸರಣೆಯಲ್ಲಿ ಆಡಿಕೊಂಬುದು ಕ್ರಮವಲ್ಲ.
ಅದೇನು ಕಾರಣವೆಂದಡೆ, ತಾ ಲಿಂಗದೇಹಿಯಾದುದಕ್ಕೆ ಕುರುಹು.
ಲಿಂಗವುಳ್ಳವರೆಲ್ಲರ ತನ್ನವರೆನ್ನಬೇಕಲ್ಲದೆ,
ಲಿಂಗವಿಲ್ಲದವರ ತನ್ನವರೆಂದಡೆ, ತನ್ನ ಸದಾಚಾರಕ್ಕೆ ದ್ರೋಹಬಹುದು,
ಸಮಯಾಚಾರಕ್ಕೆ ಮುನ್ನವೇ ಸಲ್ಲ.
ಇದು ಕಾರಣ, ಲಿಂಗಸ್ವಾಯತವಾಗಿಹುದೆ ಪಥವಯ್ಯಾ,
ನಾಗಪ್ರಿಯ ಚೆನ್ನರಾಮೇಶ್ವರಾ.