When it comes to the Scheduled Caste survey, write Banjara (Lambani). B. T. Kumar

ಮೇ 5 ರಿಂದ 17ರವರೆಗೆ ಮೂರು ಹಂತದಲ್ಲಿ ಜಾತಿ ಸಮೀಕ್ಷೆ: ಬಿ.ಟಿ. ಕುಮಾರ್.
ತಿಪಟೂರು: ತಾಲೂಕಿನ ಲಂಬಾಣಿ ಸಮಾಜದ ಬಂಧುಗಳು, ಒಳ ಮೀಸಲಾತಿ ಸಮೀಕ್ಷೆಗೆ ಮೇ 5 ರಿಂದ 17ರ ವರೆಗೆ ಮೂರು ಹಂತದಲ್ಲಿ ತಮ್ಮಗಳ ತಾಂಡ್ಯ ಮತ್ತು ಊರುಗಳಿಗೆ ಅಧಿಕಾರಿಗಳು ಬಂದಾಗ ಬಂಜಾರ (ಲಂಬಾಣಿ) ಎಂದು ನಮೂದಿಸುವಂತೆ ತಾಲೂಕು ಶ್ರೀ ಸೇವಾಲಾಲ್ ಲಂಬಾಣಿ ಸಂಘದ ಅಧ್ಯಕ್ಷ ಬಿ.ಟಿ.ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯದ್ಯಂತ ಪರಿಶಿಷ್ಟ ಜಾತಿ, ಉಪಜಾತಿ ಸಮಗ್ರ ಸಮೀಕ್ಷೆ ಮೂರು ಹಂತದಲ್ಲಿ ನಡೆಯಲಿದ್ದು, ಮೀಸಲಾತಿ ವರ್ಗೀಕರಣ ಆಯೋಗದ ಅಧ್ಯಕ್ಷ ನ್ಯಾ.ನಾಗ ಮೋಹನದಾಸ್ ರವರು ಸರ್ಕಾರಕ್ಕೆ ನೀಡಿರುವ ಮಧ್ಯಂತರ ವರದಿಯನ್ವಯ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದಂತೆ, ದತ್ತಾಂಶ ಸಂಗ್ರಹಿಸಿ, ಅದರ ಆಧಾರದ ಮೇಲೆ ಮೀಸಲಾತಿ ನಡೆಯುತ್ತದೆ.
ರಾಜ್ಯದ್ಯಂತ ಪ್ರತಿಯೊಂದು ಜಿಲ್ಲೆ, ತಾಲೂಕು, ಹೋಬಳಿ, ತಾಂಡ್ಯ ಮತ್ತು ನಮ್ಮ ಲಂಬಾಣಿ ಜನಾಂಗದವರು ವಾಸಿಸುವ ಊರುಗಳಿಗೆ ಒಳ ಮೀಸಲಾತಿ ವರ್ಗಿಕರಣ ಸಮೀಕ್ಷೆಗೆ ಅಧಿಕಾರಿಗಳು ಮಾಹಿತಿ ಪಡೆಯಲು ಬಂದಾಗ ತಾಂಡಗಳ ನಾಯಕ್, ಕಾರ್ ಬಾರಿ, ಡಾವೋ,ಗ್ರಾಪಂ ಸದಸ್ಯರು, ಮುಖಂಡರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಯುವಕರು ಎಲ್ಲರೂ ಸೇರಿ ನಾವು ಪರಿಶಿಷ್ಟ ಜಾತಿಯಲ್ಲಿದ್ದೇವೆ. ನಮ್ಮ ಉಪ ಜಾತಿ ಬಂಜಾರ (ಲಂಬಾಣಿ) ಎಂದು ನಮೂದಿಸಬೇಕು. ಸಮೀಕ್ಷೆಯಲ್ಲಿ ಉಪಜಾತಿಗಳ ಜನಸಂಖ್ಯೆ, ಕುಟುಂಬಗಳ ಸಂಖ್ಯೆ, ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ ಮತ್ತು ಹೊಂದಿರುವ ಸೌಲಭ್ಯಗಳು ಸೇರಿದಂತೆ ಮುಂತಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ರಾಜ್ಯದಲ್ಲಿ ನಮ್ಮ ಜನಾಂಗವು ಸುಮಾರು 35 ರಿಂದ 40 ಲಕ್ಷ ಜನಸಂಖ್ಯೆ ಹೊಂದಿದ್ದು, ರಾಜ್ಯದ ಒಂದು ಅಥವಾ ಎರಡು ಜಿಲ್ಲೆಗಳಲ್ಲಿ ತಕ್ಕಮಟ್ಟಿಗೆ ನಮ್ಮ ಸಮಾಜದವರು ಸುಧಾರಿಸುವ ಜೀವನ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಕಡು ಬಡತನ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜೀವನ ಸಾಗಿಸಲಾಗದೆ ಮಕ್ಕಳ ಮಾರಾಟ ದೊಡ್ಡ ಸುದ್ದಿಯಾಗಿದ್ದು, ಎಲ್ಲಾ ರಂಗದಲ್ಲಿ ಹಿನ್ನಡೆ ಆಗಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿಯೊಬ್ಬರು ತಮ್ಮ ಮತ್ತು ಕುಟುಂಬ ಸದಸ್ಯರ ಮಾಹಿತಿಯನ್ನು ತಪ್ಪದೆ ಬರೆಯಿಸಬೇಕು. ಆಧಾರ್ ನಂಬರ್, ಜಾತಿ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆ ಕಡ್ಡಾಯವಾಗಿದೆ. ಯಾರು ಜಾತಿ ಪ್ರಮಾಣ ಪತ್ರ ಮಾಡಿಸಿರುವುದಿಲ್ಲವೋ ಕೂಡಲೇ ಅವರು ಜಾತಿ ಪ್ರಮಾಣ ಪತ್ರವನ್ನು ಮಾಡಿಸಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಜಾತಿ ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿಯನ್ನು ನೀಡಿ, ಖುದ್ದು ಪರಿಶೀಲಿಸಿ, ಸಮಾಜಕ್ಕೆ ಮುಂದೊಂದು ದಿನ ಆಗುವ ಬಾರಿ ಹಿನ್ನಡೆ ತಪ್ಪಿಸಲು, ಸಮೀಕ್ಷೆಗೆ ಸಹಕರಿಸುವಂತೆ ಸಮಾಜದ ಬಂಧುಗಳಲ್ಲಿ ಮನವಿ ಮಾಡಿದ್ದಾರೆ.
ವರದಿ ಮಂಜು ಗುರುಗದಹಳ್ಳಿ