Sweet apples in a sunny country: Modi praises farmer for earning ₹15 lakh income


ವರದಿ:ಸಚೀನ ಆರ್ ಜಾಧವ~
ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಬಿಸಿಲಿನ ಬಯಲು ಪ್ರದೇಶದಲ್ಲಿ ಸೇಬು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ್ದಾರೆ. ಈ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ರೀಶೈಲರನ್ನು ಶ್ಲಾಘಿಸಿದ್ದಾರೆ. ರೈತನ ಸಾಧನೆ ವಿವರ ನೋಡಿ.
ಸಾಮಾನ್ಯವಾಗಿ ಸೇಬು ಹಣ್ಣಿನ ಬೆಳೆಯನ್ನ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಂತಹ ಶೀತ ಪ್ರದೇಶದಲ್ಲಿ ಬೆಳೆಯೋದು ಕಾಮನ್. ಆದರೆ, ಕನ್ನಡದ ರೈತನೊಬ್ಬ ಬಿರುಬಿಸಿಲಿನ ಬಯಲು ಪ್ರದೇಶದಲ್ಲಿಯೇ ಸೇಬು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ್ದಾನೆ. ಸಾಲದ್ದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರೈತನ ಗುಣಗಾನ ಮಾಡಿದ್ದಾರೆ. ಹಾಗಾದರೆ ಆ ರೈತ ಯಾರು? ಆತನ ಸಾಧನೆ ಹೇಗಿತ್ತು ಅಂತೀರಾ. ಈ ಕುರಿತು ವರದಿ ಇಲ್ಲಿದೆ.
ಹೌದು, ನೀವು ಆ ಜಮೀನಿಗೆ ಹೋಗಿ ನೋಡಿದ್ರೆ ಸಾಕು, ಬಿರು ಬಿಸಿಲಿನ ಬಯಲು ಪ್ರದೇಶದಲ್ಲಿ ಸಿಗೋದು ನಳನಳಿಸುವ ಸೇಬು ಹಣ್ಣಿನ ಬೆಳೆ, ಇತ್ತ ಸೇಬು ಬೆಳೆಯೊಂದಿಗೆ ಲಕ್ಷ ಲಕ್ಷ ಆದಾಯ ಪಡೆಯುತ್ತಾ ಖುಷಿಯಲ್ಲಿ ಬದುಕುತ್ತಿರುವ ರೈತ, ರೈತನ ಸಾಧನೆಯನ್ನ ಮನ್ ಕಿ ಬಾತ್ ನಲ್ಲಿ ಗುಣಗಾನ ಮಾಡಿದ ಪ್ರಧಾನಿ. ಅಂದಹಾಗೆ ಇಂತಹವೊಂದು ಸಾಧನೆಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ.
ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಾಗಲಕೋಟೆ ರೈತನ ಗುಣಗಾನ: ಸಾಮಾನ್ಯವಾಗಿ ಸೇಬು ಹಣ್ಣಿನ ಬೆಳೆಯನ್ನ ಶೀತ ಪ್ರದೇಶದಲ್ಲಿ ಬೆಳೆಯಲಾಗುತ್ತೆ. ಆದ್ರೆ ರೈತ ಶ್ರೀಶೈಲ ಬಿರುಬಿಸಿಲಿನ ಬಯಲು ಸೀಮೆ ಪ್ರದೇಶದ ತಮ್ಮ ಕುಳಲಿ ಗ್ರಾಮದ 7 ಎಕರೆ ಜಮೀನಿನಲ್ಲಿ ಸೇಬು ಹಣ್ಣಿನ ಬೆಳೆ ಬೆಳೆದು ಉಳಿದ ರೈತರು ಹುಬ್ವೇರಿಸುವಂತೆ ಮಾಡಿದ್ದಾರೆ.
ಇಂತಹ ವಿಶೇಷ ರೈತನ ಬಗ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಪ್ರಸ್ತಾಪಿಸಿದ್ದು, ಕರ್ನಾಟಕದ ಬಯಲು ಸೀಮೆಯಲ್ಲಿ ಸೇಬು ಬೆಳೆದಿದ್ದು ಗಮನಾರ್ಹ ಮತ್ತು 35 ಡಿಗ್ರಿ ಸೆಲ್ಸಿಯಸ್ ನಲ್ಲಿ ರೈತ ಶ್ರೀಶೈಲ ತೇಲಿ ಸಾಧನೆ ಮಾಡಿದ್ದಾರೆನ್ನುವ ಮೂಲಕ ಗುಣಗಾನ ಮಾಡಿದ್ದಾರೆ. ಇದರಿಂದ ರೈತ ಶ್ರೀಶೈಲನ ಖುಷಿಗೆ ಪಾರವೇ ಇಲ್ಲದಂತಾಗಿದ್ದು, ಹಳ್ಳಿಯಲ್ಲಿರೋ ನಮ್ಮನ್ನ ಗುರುತಿಸಿ ದಿಲ್ಲಿಯಿಂದ ಪ್ರಧಾನಿಗಳು ಮಾತನಾಡಿದ್ದು ಖುಷಿ ಕೊಟ್ಟಿದೆ. ಇದು ನಮ್ಮ ಕೃಷಿ ಬದುಕಿಗೆ ಮತ್ತಷ್ಟು ಪ್ರೇರಣೆಯಾಗಿದ್ದು , ಮರೆಯಲಾರದ್ದು ಎಂದು ರೈತ ಶ್ರೀಶೈಲ ಹೇಳಿದ್ದಾರೆ.
ಶೀತ ಪ್ರದೇಶ ಅಲ್ಲ, ಬಯಲು ಸೀಮೆಯಲ್ಲಿಯೇ 2,700 ಸೇಬು ಗಿಡ ಬೆಳೆದು 15 ಲಕ್ಷ ಲಾಭ ಪಡೆದ ರೈತ ಶ್ರೀಶೈಲ: ಬೆಳಗಾವಿಯ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ರೈತ ಶ್ರೀಶೈಲ ತೇಲಿ ಕೆಲ ವರ್ಷಗಳ ಹಿಂದೆ ಕುಳಲಿ ಗ್ರಾಮದ ವ್ಯಾಪ್ತಿಯಲ್ಲಿ ಜಮೀನು ಖರೀದಿ ಮಾಡಿದ್ದರು. ಅದರಲ್ಲಿ ಸೇಬು ಬೆಳೆಯೋ ಇಚ್ಚೆಯಿಂದ 7 ಎಕರೆ ಜಮೀನಿನಲ್ಲಿ ಒಟ್ಟು ಶಿರಡಿ ಮತ್ತು ಪುಣಾದಿಂದ ತಂದಿದ್ದು 2700 ಸಸಿ ನಾಟಿ ಮಾಡಿ, ಸಸಿಗಳ ಆರೈಕೆಗೆ ಜೀವಾಮೃತ, ಸಾವಯವ ಗೊಬ್ಬರ ಮಾತ್ರ ಬಳಕೆ ಮಾಡಿದ್ದರು. ಸದ್ಯ ನೂರರಿಂದ ನೂರಿಪ್ಪತ್ತು ಗಿಡಗಳಲ್ಲಿ ಸೇಬು ಹಣ್ಣು ಬೆಳೆದು ನಿಂತಿವೆ.
ಸಾವಯವ ಮಾದರಿಯಲ್ಲಿ ಸೇಬು ಹಣ್ಣನ್ನು ಬೆಳೆದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಶ್ರೀಶೈಲ ಅವರ ಸೇಬು ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಜಮಖಂಡಿ, ಮಹಾಲಿಂಗಪುರ, ಮುಧೋಳ, ಬೀಳಗಿ, ರಾಯಬಾಗ ಸೇರಿದಂತೆ ಬೆಂಗಳೂರವರೆಗೆ ರಪ್ತಾಗುತ್ತಿದೆ. ಪ್ರತಿ ಕೆಜಿಗೆ 80-150 ರೂ. ರಂತೆ ಮಾರಾಟ ಬರೋಬ್ಬರಿ 15 ಲಕ್ಷ ಲಾಭವನ್ನ ಪಡೆದಿದ್ದಾರೆ. ರೈತ ಶ್ರೀಶೈಲನ ಸಾಧನೆ ಕಂಡು ತಾವು ಸಹ ಸೇಬು ಬೆಳೆಯಲು ರೈತರು ಉತ್ಸುಕರಾಗಿ ಶ್ರೀಶೈಲ ಜಮೀನಿಗೆ ಭೇಟಿ ನೀಡಿ ತಮ್ಮ ಅನುಭವ ಹಂಚಿಕೊಂಡಿದ್ದು ಕಂಡು ಬಂತು. ಒಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಾಗಲಕೋಟೆ ರೈತ ಶ್ರೀಶೈಲನ ಗುಣಗಾನ ಮಾಡಿದ್ದು, ಈ ರೈತನ ಕೃಷಿ ಸಾಧನೆ ಇದೀಗ ಇತರೆ ರೈತರಿಗೂ ಮಾದರಿಯಾಗಿದ್ದು ಸುಳ್ಳಲ್ಲ.