Congratulatory ceremony for Patil There is a need to formulate a special law to provide strict punishment for the illegal and immoral acts of adults: Minister H.K. Patil

ಡಾ. ಶಿವಕುಮಾರ ಸ್ವಾಮಿಗಳ 118ನೇ ಜಯಂತೋತ್ಸವ : ಜಸ್ಟೀಸ್ ಡಾ. ಶಿವರಾಜ್
ಬೆಂಗಳೂರು, ಏ, 23; ಕಳೆದ ಒಂದು ಸಾವಿರ ವರ್ಷಗಳಲ್ಲಿ ಆಗದ ಆಕ್ರಮಗಳು, ಆಕ್ರಮಣಗಳು ಕೇವಲ ಒಂದೇ ವರ್ಷದಲ್ಲಿ ನಡೆದಿದೆ. ದೊಡ್ಡ ದೊಡ್ಡ ವ್ಯಕ್ತಿಗಳ ಅಕ್ರಮಗಳು, ಅನಾಚಾರ, ದೌರ್ಜನ್ಯಗಳಿಗೆ ಕಠಿಣ ಶಿಕ್ಷೆ ಕೊಡಿಸುವ ಬಗ್ಗೆ ವಿಶೇಷ ಕಾನೂನು ರೂಪಿಸಬೇಕಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ ಹೇಳಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರತ್ನ, ಡಾ. ಶಿವಕುಮಾರ ಸ್ವಾಮಿಗಳ 118ನೇ ಜಯಂತೋತ್ಸವ ಹಾಗೂ ಜಸ್ಟೀಸ್ ಡಾ. ಶಿವರಾಜ್ ಪಾಟೀಲರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾವಿರ ವರ್ಷಗಳಲ್ಲಿ ಆದ ಆಕ್ರಮಗಳು ಕೇವಲ ಒಂದೇ ವರ್ಷದಲ್ಲಿ ಎಲ್ಲರೂ ಘಟಿಸಿವೆ. ಮಾನವೀಯತೆ ಮರೆತಂತೆ ವರ್ತಿಸುತ್ತಿದ್ದಾರೆ. ಸಮಾಜಕ್ಕೆ ನೈತಿಕತೆ ಬೋಧಿಸುವವರು, ಕಾನೂನು, ನ್ಯಾಯಾಂಗ ವ್ಯವಸ್ಥೆಯನ್ನು ಎತ್ತಿ ಹಿಡಿಯುವರು, ರಾಜಕೀಯ ಕ್ಷೇತ್ರ, ಆಡಳಿತ ವ್ಯವಸ್ಥೆಯ ಮೊದಲ ಆರೇಳು ಆಗ್ರಪಂಕ್ತಿಯ ವ್ಯಕ್ತಿಗಳು ಇಂತಹ ಹೇಯ ಕೃತ್ಯಗಳಲ್ಲಿ ತೊಡಗಿದ್ದಾರೆ. ಈಗಿರುವುದು ಸಣ್ಣ ಸಣ್ಣ ಅಪರಾಧಗಳಿಗೆ ಶಿಕ್ಷಿಸುವ ಕಾನೂನುಗಳಾಗಿವೆ. ಹೀಗಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಒಳಗೊಂಡಂತೆ ದೊಡ್ಡ ವ್ಯಕ್ತಿಗಳಿಗೆ ಕಾನೂನಿನ ಮೂಲಕ ಬಿಸಿ ಮುಟ್ಟಿಸಿ ಸರ್ಕಾರ, ಸಮಾಜಕ್ಕೆ ವಿಶೇಷ ಸಂದೇಶ ರವಾನಿಸಬೇಕಾಗಿದೆ. ಇದಕ್ಕಾಗಿ ನ್ಯಾಯಾಂಗ ಕ್ಷೇತ್ರದ ಗಣ್ಯರು ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ದೊಡ್ಡ ಅಪರಾಧಗಳನ್ನು ನೋಡಲಾಗದೇ ನಾವು ಟಿವಿ ಬಂದ್ ಮಾಡುತ್ತೇವೆ. ಪರಮೋಚ್ಛ ಶಿಷ್ಟಾಚಾರ ಅನುಭವಿಸುವವರೇ ಇಂತಹ ಕೃತ್ಯಗಳಲ್ಲಿ ತೊಡಗುತ್ತಾರೆ. ಪೊಲೀಸರು ಪಿಕ್ ಪಾಕೆಟ್ ಮಾಡುವವರನ್ನು, ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ನಾವು ಆರೋಪಿಸುತ್ತೇವೆ. ದೊಡ್ಡ ದೊಡ್ಡ ಅಪರಾಧ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರೆ ತಪ್ಪಾಗುತ್ತದೆ. ಈಗ ದೊಡ್ಡವರು ಮಾಡುವ ತಪ್ಪುಗಳನ್ನು ಸಣ್ಣವರು ಸಹ ಮಾಡಿದರೆ ನಮ್ಮ ಸಮಾಜ ಎಲ್ಲಿಗೆ ತಲುಪುತ್ತದೆ. ದೊಡ್ಡ ವಿಕೃತ ಮನಸ್ಸಿನವರಿಗೆ, ದುರಾಸೆಯವರಿಗೆ ಸರಿಯಾದ ಪಾಠ ಕಲಿಸುವ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸಬೇಕಾಗಿದೆ ಎಂದು ಎಚ್.ಕೆ. ಪಾಟೀಲ್ ಬಲವಾಗಿ ಪ್ರತಿಪಾದಿಸಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಜಸ್ಟೀಸ್ ಶಿವರಾಜ್ ಪಾಟೀಲ್ ಅವರಂತಹ ಗಣ್ಯರು ಸೂಕ್ತ ಮಾರ್ಗದರ್ಶನ ಮಾಡಬೇಕು. ಇವರಿಂದಾಗಿಯೇ ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಯಿತು. ಜಸ್ಟೀಸ್ ಪಾಟೀಲರು ಸೂಕ್ತ ಮಾರ್ಗದರ್ಶಕರು. ಸಕಾರಾತ್ಮಕ ಚಿಂತನೆಯುಳ್ಳವರು. ಅವರು ಸರ್ಕಾರ ಮತ್ತು ಸಮಾಜಕ್ಕೆ ಬಹುದೊಡ್ಡ ಆಸ್ತಿ ಎಂದು ಹೇಳಿದರು.
ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ನಾಡು ಕಂಡ ನಡೆದಾಡುವ ಪವಾಡ ಪುರುಷ. ತಮ್ಮ ಕೆಲಸಗಳ ಮೂಲಕ ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡುವ ವ್ಯಕ್ತಿಗಳನ್ನು ರೂಪಿಸಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಶಾಲೆಗೆ ರಜೆ ಇದ್ದರೂ ಸಹ ಸಹಸ್ರಾರು ಮಂದಿ ಮಕ್ಕಳು ಉಳಿಯುತ್ತಿದ್ದರು. ಹೀಗೆ ಉಳಿಯುತ್ತಿದ್ದವರೆಲ್ಲರೂ ತಂದೆ, ತಾಯಿ ಇಲ್ಲದ ಅನಾಥರು. ಜಾತಿ, ಬೇಧ ಮಾಡದೇ ಪ್ರತಿಯೊಬ್ಬರನ್ನು ಒಪ್ಪಿಕೊಂಡು, ಅಪ್ಪಿಕೊಂಡ ಮಹಾನ್ ಸಂತ ಎಂದು ಸಚಿವ ಎಚ್.ಕೆ. ಪಾಟೀಲ್ ಬಣ್ಣಿಸಿದರು.
ಬೆಂಗಳೂರು ಕರ್ನಾಟಕ ಉಚ್ಚನ್ಯಾಯಾಲಯ ಹೆಚ್ಚುವರಿ ಅಡ್ವಿಕೇಟ್ ಜನರಲ್ ಎನ್. ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. ಧರ್ಮಗುರು, ನಿಡುಮಾಮಿಡಿ ಮಹಾ ಸಂಸ್ಥಾನದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ಚನ ನೀಡಿದರು.
ಜಸ್ಟೀಸ್ ಅಶೋಕ ಹಿಂಚಗೇರಿ, ಹಿರಿಯ ವಕೀಲರಾದ ಉದಯ ಹೊಳ್ಳ, ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಕೆ.ಜಿ. ರಾಘವನ್, ಅಡ್ವೋಕೆಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಸ್.ಎಸ್. ಮಿತ್ತಲಕೋಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ, ಹಿರಿಯ ವಕೀಲರು, ಜಸ್ಟೀಸ್ ಡಾ. ಶಿವರಾಜ್ ಪಾಟೀಲರಿಗೆ ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಆರ್. ಹಿರೇಮಠ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.