Tourism in Anegondi and Sanapur, which have geographical and natural beauty, needs encouragement – Journalist K. Ningajja

ಕಿಷ್ಕಿಂಧಾ ಅಂಜನಾದ್ರಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಬೇರ್ಪಸಬೇಕು
*ಪ್ರವಾಸೋದ್ಯಮಕ್ಕೆ ಶೇ.30 ರಷ್ಟು ಆದಾಯ ತರುವ ಕಿಷ್ಕಿಂಧಾ ಅಂಜನಾದ್ರಿ ಆದ್ಯತೆಗೆ ಆಗ್ರಹ*
ಗಂಗಾವತಿ (ರಾಜಾ ಶ್ರೀರಂಗದೇವರಾಯಲು ವೇದಿಕೆ):ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಭಾಗದ ನಾಲ್ಕು ಗ್ರಾ.ಪಂ.ಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಬೇರ್ಪಡಿಸುವ ಮೂಲಕ ಪ್ರತೇಕ ಕಿಷ್ಕಿಂಧಾ ಅಭಿವೃದ್ಧಿ ಪ್ರಾಧಿಕಾರದ ರಚಿಸಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಜತೆಗೆ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುವಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಸರಕಾರಕ್ಕೆ ಮನವಿ ಮಾಡಿದರು.
ಅವರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಪ್ಪಳ ಜಿಲ್ಲಾ 13 ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇಯ ದಿನದ ಅಭಿವೃದ್ಧಿ ಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಸವಾಲು, ಸಾಧ್ಯತೆ ಕುರಿತು ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಆನೆಗೊಂದಿ, ಸಾಣಾಪೂರ ಭಾಗದಲ್ಲಿರುವ ಐತಿಹಾಸಿಕ ಸ್ಥಳಗಳು ಮತ್ತು ಪ್ರಾಕೃತಿಕ ಸೌಂದರ್ಯದ ಕಾರಣಕ್ಕೆ ದೇಶ ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ. ಇವರಿಗೆ ಊಟ, ವಸತಿ ಸೇರಿ ಮೂಲಸೌಕರ್ಯಗಳ ಕೊರತೆ ಇದ್ದು ಪದೇ ಪದೇ ಇಲ್ಲಿರುವ ಹೊಟೇಲ್, ಹೋಂಸ್ಟೇಗಳನ್ನು ತೆರವುಗೊಳಿಸುವುದು ಅಥವಾ ಮುಚ್ಚಿಸುವುದರಿಂದ ಪ್ರವಾಸೋದ್ಯಮ ನಾಶವಾಗುತ್ತದೆ. ಇದಕ್ಕೆ ಹೊಸಪೇಟೆ ಹೋಟೇಲ್ ಲಾಭಿ ಪ್ರಮುಖ ಕಾರಣ ಎನ್ನಲಾಗುತ್ತಿದ್ದು ಆನೆಗೊಂದಿ ಭಾಗದ ಹೊಟೇಲ್‌ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಆನೆಗೊಂದಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿ ಪ್ರತೇಕ ಮಾಸ್ಟರ್ ಪ್ಲಾನ್ ರೂಪಿಸಿ ಅನುಷ್ಠಾನ ಮಾಡಬೇಕು. ಆನೆಗೊಂದಿಯಲ್ಲಿ ಪೊಲೀಸ್ ಠಾಣೆ ಆರಂಭಿಸಿ ಪೊಲೀಸ್ ಗಸ್ತು ಹೆಚ್ಚು ಮಾಡಿ ಅಕ್ರಮ ತಡೆಯಬೇಕು. ಏಳುಗುಡ್ಡ ಪ್ರದೇಶ ಸೇರಿ ಹಿರೇಬೆಣಕಲ್ ಮೋರ್ಯರ ಬೆಟ್ಟದ ಶಿಲಾಸಮಾಧಿಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಬೇಕು. ಗಂಡುಗಲಿಕುಮಾರರಾಮನ ಕುಮ್ಮಟದುರ್ಗದ ಕೋಟೇ, ಹೇಮಗುಡ್ಡ, ಕನಕಗಿರಿ, ಪುರ ಸೋಮನಾಥ ದೇವಾಲಯ, ಹನುಮಸಾಗರದ ಕಪಿಲತೀರ್ಥ, ಇಟಗಿಯ ಮಹಾದೇವದೇವಾಲಯ, ಕುಕನೂರಿನ ಮಹಾಮಾಯ ದೇವಾಲಯ, ಕೊಪ್ಪಳದ ಕೋಟೆಗಳು, ಅಶೋಕನ ಶಿಲಾಶಾಸನಗಳು, ದೇವಘಾಟದ ಅಮೃತೇಶ್ವರ, ವಾಣಿಭದ್ರೇಶ್ವರ ಪಂಪಾಸರೋವರ, ಋಷ್ಯಮುಖ ಪರ್ವತ ಪ್ರದೇಶಮ, ಶಬರಿಗುಹೆ ಮತ್ತು ಏಳು ಗುಡ್ಡದಲ್ಲಿರುವ ಗುಹಾಂತರ ಚಿತ್ರಗಳನ್ನು ಸಂರಕ್ಷಣೆ ಮಾಡಬೇಕು. ಪ್ರವಾಸೋದ್ಯಮ ಇಲಾಖೆ ಇವುಗಳನ್ನು ಗುರುತಿಸಿ ನಾಮಫಲಕ ಹಾಗೂ ಸಿಬ್ಬಂದಿ ನಿಯೋಜನೆ ಮಾಡಬೇಕು. ಏಳುಗುಡ್ಡ ಪ್ರದೇಶದಲ್ಲಿ ವನಸ್ಪತಿ ಸಸ್ಯರಾಶಿ ಸಂರಕ್ಷಣೆ ಮಾಡುವ ಜತೆಗೆ ಈ ಭಾಗದ ಯುವಕರಿಗೆ ಭಾರತೀವೈದ್ಯ ಪದ್ಧತಿ, ಯೋಗ ನ್ಯಾಚುರೋಪತಿ ತರಬೇತಿ ನೀಡುವ ಮೂಲಕ ಉದ್ಯೋಗ ಕಲ್ಪಿಸಬೇಕು. ಸಾಣಾಪೂರ ಕೆರೆಯಲ್ಲಿ ಜಿಲ್ಲಾಡಳಿತ ಬೋಟಿಂಗ್ ಆರಂಭಿಸಿ ಸ್ಥಳೀಯರಿಗೆ ವಹಿಸಬೇಕು. ಕಿಷ್ಕಿಂಧಾ ಭಾಗದ ಬೆಟ್ಟ ಪ್ರದೇಶ ಶಿಲಾರೋಹಣಕ್ಕೆ ಹೇಳಿ ಮಾಡಿಸಿದ ಜಾಗವಾಗಿದ್ದು ಇಲ್ಲಿ ಈಗಾಗಲೇ ಅನೇಕ ಯುವಕರು ಶಿಲಾರೋಹಣದ ಮೂಲಕ ಯುರೋಪ ದೇಶದ ಪ್ರವಾಸಿಗರಿಗೆ ಚಿರಪರಿಚಿತರಾಗಿದ್ದು ಕೆಲ ದೇಶದ ಪ್ರವಾಸಿಗರು ತಾವು ಬರೆದ ಪ್ರವಾಸಿ ಕಥನದಲ್ಲಿ ಸಾಣಾಪೂರ, ವಿರೂಪಾಪೂರಗಡ್ಡಿ ಶಿಲಾರೋಹಣ ತರಬೇತಿ ನೀಡುವವರ ಹೆಸರನ್ನೂ ಪ್ರಸ್ತಾಪಿಸಿದ್ದು ಆನೆಗೊಂದಿ-ಸಾಣಾಪೂರ ಬೆಟ್ಟಗಳಲ್ಲಿ ಶಿಲಾರೋಹಣ ಸಾಹಸ ಕ್ರೀಡೆ ಪ್ರಾಶ್ಯಸ್ತ ಸ್ಥಳವಾಗಿದ್ದು ಪ್ರವಾಸೋದ್ಯಮ ಇಲಾಖೆ ಇದಕ್ಕೆ ಪೂರಕ ಯೋಜನೆ ಅನುಷ್ಠಾನ ಮಾಡಬೇಕು. ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ನೀಡುವ ಆದ್ಯತೆಯನ್ನು ಕೊಪ್ಪಳ ಜಿಲ್ಲೆಯ ಪ್ರವಾಸೋಮದ್ಯಮಕ್ಕೂ ನೀಡಬೇಕೆಂದರು.
ಗೋಷ್ಠಿಯ ಆಶಯ ಭಾಷಣ ಮಾಡಿದ ಪ್ರೋ.ಶಿವಾನಂದ ಮೇಟಿ ಮಾತನಾಡಿ, ಕೊಪ್ಪಳದಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಕಾರ್ಖಾನೆಗಳಿಗೆ ಸರಕಾರ ಪರವಾನಿಗೆ ನೀಡಿದ್ದು ಜನರ ಬದುಕಿನೊಂದಿಗೆ ಚಲ್ಲಾಟವಾಡಲಾಗುತ್ತಿದೆ. ಪರಿಸರ ಸ್ನೇಹಿ ಕಾರ್ಖಾನೆಗಳನ್ನು ಉದ್ಯಮಿಗಳು ಸ್ಥಾಪಿಸಬೇಕು. ವಿಶ್ವವಿದ್ಯಾಲಯ ಮುಚ್ಚಬಾರದು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಉದ್ಯೋಗ ಸೃಷ್ಠಿಗೆ ಆದ್ಯತೆ ನೀಡುವಂತೆ ಸರಕಾರಕ್ಕೆ ಆಗ್ರಹಿಸಿದರು.
ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿ ಬಾಬು ಉದ್ಯಮ ಮತ್ತು ಉದ್ಯೋಗಾವಕಾಶಗಳ ಕುರಿತು ಮಾತನಾಡಿ, ಹಣ ಇದ್ದರೆ ಮಾತ್ರ ಉದ್ಯಮ ಆಗಲು ಸಾಧ್ಯವಿಲ್ಲ. ಕೌಶಲ್ಯವಿದ್ದರೆ ಯಾರು ಬೇಕಾದರೂ ಉದ್ಯಮಿಗಳಾಗಬಹುದಾಗಿದೆ. ಯುವಕರು ಸರಕಾರಿ ನೌಕರಿಗಾಗಿ ಕಾಯದೇ ಸ್ವಂತ ಶಕ್ತಿಯ ಮೇಲೆ ಸ್ಥಳೀಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಕೌಶಲ್ಯದಿಂದ ಉದ್ಯಮಿಗಳಾಗುವಂತೆ ಕರೆ ನೀಡಿದರು. ನಿವೃತ್ತ ಕೃಷಿ ತಜ್ಞ ಹಾಗೂ ಅಯೋಧ್ಯಾ ಕ್ರಾಪ್ಸ್ ಅಕಾಡೆಮಿಯ ಡಾ.ಎಂ.ಬಿ.ಪಾಟೀಲ್ ಮಾತನಾಡಿ, ಸಾವಯವ ಕೃಷಿ, ಸಮಗ್ರ ಕೃಷಿ, ಇಸ್ರೇಲ್ ಕೃಷಿ ಎನ್ನುವುದು ಬರೀ ಭ್ರಮೆಯಾಗಿದ್ದು ಗ್ರಾಮೀಣ ಭಾಗದ ರೈತರು ಈ ಹಿಂದೆ ಮಾಡುತ್ತಿದ್ದ ಕೃಷಿ ಪದ್ಧತಿ ಯಾವ ದೇಶದಲ್ಲೂ ಸಿಗುವುದಿಲ್ಲ. ರಸಾಯನಿಕ, ಕ್ರಿಮಿನಾಶಕ ರಹಿತ ಕೃಷಿಯಿಂದ ಆರೋಗ್ಯಯುತ ಜೀವನ ಸಾಧ್ಯ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಬೆಳೆಯ ಹಿಂದೆ ಬಿದ್ದಿದ್ದು ಮುಂದೊAದು ದಿನ ಸಂಕಷ್ಟ ತಪ್ಪಿದ್ದಲ್ಲ. ಕೂಡಲೇ ವ್ಯವಸಾಯ ಪದ್ಧತಿ ಬದಲಿಸಿಕೊಳ್ಳುವಂತೆ ಕರೆ ನೀಡಿದರು.
ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪೂರ ಮಾತನಾಡಿ, ಕೊಪ್ಪಳ ಜಿಲ್ಲೆಯ ಸಮಗ್ರ ಬೆಳವಣಿಗೆಗೆ ಅಭಿವೃದ್ಧಿ ಗೋಷ್ಠಿ ಬೆಳಕು ಚೆಲ್ಲಿದೆ. ಕೈಗಾರಿಕಾ ಜೋನ್ ಮಾಡಿದ ತಕ್ಷಣ ಪರಿಸರ ಮತ್ತು ಜನರ ಜೀವನಕ್ಕೆ ಗಂಡಾAತರ ತರುವ ಕಾರ್ಖಾನೆಗಳ ಸ್ಥಾಪನೆ ಸರಿಯಲ್ಲ. ಪರಿಸರ ಸ್ನೇಹಿ ಕೈಗಾರಿಕೆಗಳು ಜಿಲ್ಲೆಗೆ ಬರಲಿ, ಪ್ರವಾಸೋದ್ಯಮ ವಿಶ್ವ ಬಹುತೇಕ ದೇಶಗಳ ಜನರಿಗೆ ಉದ್ಯೋಗ ಕಲ್ಪಿಸಿದೆ. ಆನೆಗೊಂದಿ ಭಾಗದ ಸ್ಥಳಗಳು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಸರಕಾರ ಸೂಕ್ತ ಯೋಜನೆ ರೂಪಿಸಿ ಅನುಷ್ಠಾನ ಮಾಡುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸರ್ವಾಧ್ಯಕ್ಷ ಲಿಂಗಾರೆಡ್ಡಿ ಆಲೂರು, ಪತ್ರಕರ್ತರಾದ ಪ್ರಸನ್ನದೇಸಾಯಿ, ಸುದರ್ಶನ ವೈದ್ಯ, ಹನಮೇಶ ಭಟಾರಿ, ಶಿವಪ್ಪ ನಾಯಕ, ಅಮರೇಶಪ್ಪ ಇಂಗಳಗಿ, ರಂಗಣ್ಣ ದರೋಜಿ, ಮರಿಯಪ್ಪ ಸಾಲೋಣಿ, ವಿಜಯಕುಮಾರ ಗದ್ದಿ,ಅಮರೇಶ ಗೋನಾಳ, ಸಿ.ಪ್ರಭಾಕರ್, ಟಿ.ರಾಮಚಂದ್ರ, ವಾಗೀಶ ಹಿರೇಮಠ, ಜಿ.ದೇವರಾಜ್, ವಸಂತಕುಮಾರ ಸೇರಿ ಅನೇಕರಿದ್ದರು.