Breaking News

ಲೇಸರ್ ಮೆಡಿಸಿನ್ ವಲಯದ ಹೂಡಿಕೆಗೆ ಸಂಪೂರ್ಣ ಸಹಕಾರ: ಎಂ ಬಿ ಪಾಟೀಲ

Full cooperation for investment in laser medicine sector: M B Patil

ಜಾಹೀರಾತು

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವಂತಹ 350 ಸಾಧನಗಳು ರಾಜ್ಯದಲ್ಲೇ ತಯಾರಾಗುತ್ತಿವೆ. ಜತೆಗೆ ನವೋದ್ಯಮ ಕ್ಷೇತ್ರದಲ್ಲಿ ವೈದ್ಯಕೀಯ ಮತ್ತು ಔಷಧ ತಯಾರಿಕೆ ವಲಯದ ನೂರಾರು ಕಂಪನಿಗಳು ಕರ್ನಾಟಕದಲ್ಲಿ ನೆಲೆಯೂರಿವೆ. ಚರ್ಮಶಾಸ್ತ್ರ ಮತ್ತು ಸೌಂದರ್ಯವರ್ಧಕ ವೈದ್ಯಕೀಯ ಚಿಕಿತ್ಸಾ ವಲಯದ ಹೂಡಿಕೆದಾರರಿಗೆ ಕ್ವಿನ್ ಸಿಟಿ ಯೋಜನೆ ಸೇರಿದಂತೆ ಹಲವೆಡೆ ಹೇರಳ ಅವಕಾಶಗಳಿವೆ. ಉದ್ಯಮಿಗಳು ನಮ್ಮಲ್ಲಿ ಹೂಡಿಕೆಗೆ ಮುಂದೆ ಬಂದರೆ ಅವರಿಗೆ ಸಂಪೂರ್ಣ ಸಹಕಾರ ಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ನಗರದ ಹೊರವಲಯದ ವೈಟ್ ಫೀಲ್ಡಿನಲ್ಲಿ ಏರ್ಪಾಡಾಗಿರುವ ಅಖಿಲ ಭಾರತ ಲೇಸರ್ ಚಿಕಿತ್ಸೆ ಮತ್ತು ಸರ್ಜರಿ ಸಮಾವೇಶವನ್ನು ಅವರು ಗುರುವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸೆಗಳಲ್ಲಿ ಲೇಸರ್ ಮೆಡಿಸಿನ್ ಮಹತ್ತ್ವದ ಪಾತ್ರ ವಹಿಸುತ್ತಿದೆ. ಮೆಡ್-ಟೆಕ್ ಕ್ಷೇತ್ರದಲ್ಲಿ ಕರ್ನಾಟಕವು ಅತ್ಯುತ್ತಮ ಕಾರ್ಯಪರಿಸರ ಹೊಂದಿದ್ದು, ಕ್ಷಿಪ್ರ ಬೆಳವಣಿಗೆ ಕಾಣುತ್ತಿದೆ. ದೇಶದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಗತ್ಯವಾಗಿರುವ ಸಾಧನಗಳ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇಕಡ 25ರಷ್ಟಿದೆ. ಇದರ ಜತೆಗೆ ದೇಶದ ಬಯೋಟೆಕ್ ಕಂಪನಿಗಳಲ್ಲಿ ಶೇಕಡ 60 ನಮ್ಮಲ್ಲೇ ಇದ್ದು, ದೇಶದ ಔಷಧ ರಫ್ತು ವಹಿವಾಟಿನಲ್ಲಿ ನಮ್ಮ ಪಾಲು ಶೇಕಡ 40ರಷ್ಟಿದೆ ಎಂದು ಅವರು ವಿವರಿಸಿದ್ದಾರೆ.

ಮೆಡಿಕಲ್ ಐಟಿ, ಪಿಸಿಆರ್ ಯಂತ್ರಗಳು, ಹೃದಯದ ಚಿಕಿತ್ಸೆಗೆ ಬೇಕಾಗುವ ಸ್ಟೆಂಟ್, ಇನ್ಸುಲಿನ್ ಪೆನ್ ಮುಂತಾದವುಗಳ ತಯಾರಿಕೆಯಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ವೈದ್ಯಕೀಯ ಸಾಧನಗಳು, ಡಿಜಿಟಲ್ ಆರೋಗ್ಯ, ರೋಗ ಪತ್ತೆ ಮುಂತಾದವು ಹೊಸ ದಾರಿ ತುಳಿಯಲಿವೆ. ಅಂತಹ ತಂತ್ರಜ್ಞಾನವು ರಾಜ್ಯದಲ್ಲಿರುವ ಕಂಪನಿಗಳಿಂದ ಅಭಿವೃದ್ಧಿಯಾಗುತ್ತಿದೆ. ಲೇಸರ್ ಚಿಕಿತ್ಸೆ ವಲಯದಲ್ಲಿರುವವರು ಇದನ್ನು ಗಮನಿಸಬೇಕು ಎಂದು ಅವರು ನುಡಿದಿದ್ದಾರೆ.

ದೇಶದ ಆರೋಗ್ಯ ಸೇವೆ ಮತ್ತು ಹೂಡಿಕೆ ಎರಡರಲ್ಲೂ ರಾಜ್ಯವು ಅಗ್ರಸ್ಥಾನದಲ್ಲಿದೆ. ರಾಜ್ಯದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಜಾಲವೇ ಇದ್ದು, ಇವುಗಳನ್ನು ನಾವು ಜನರ ಸಬಲೀಕರಣಕ್ಕೆ ಬಳಸಿಕೊಳ್ಳಬೇಕು. ಕೈಗೆಟುಕುವ ದರದಲ್ಲಿ ಮತ್ತು ಕ್ಷಿಪ್ರ ಗತಿಯಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತರೆ ಮಾತ್ರ ವಿಶ್ವಾಸಾರ್ಹತೆ ಬೆಳೆಯುತ್ತದೆ. ಇವುಗಳ ಜತೆಗೆ ಸಂಶೋಧನೆ ಮತ್ತು ನಾವೀನ್ಯತೆ ಹಾಗೂ ಅವುಗಳ ವಾಣಿಜ್ಯ ಬಳಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು ಎಂದು ಪಾಟೀಲ ಹೇಳಿದ್ದಾರೆ.

ಈ ಸಮಾವೇಶದಲ್ಲಿ ಸಂಘಟನಾ ಅಧ್ಯಕ್ಷರಾದ ಪ್ರೊಫೆಸರ್ ಅರುಣ ಸಿ. ಇನಾಮದಾರ್,ಸಂಘಟನಾ ಡಾ. ಟಿ. ಸಲೀಂ, ಡಾ. ಸಂಜೀವ್ ಜೆ. ಔರಂಗಾಬಾದ್ಕರ್, ಪ್ರಧಾನ ಕಾರ್ಯದರ್ಶಿ ಡಾ. ಬಿ.ಎಸ್ ಚಂದ್ರಶೇಖರ್, ಡಾ.ಅರುಣ್ ಇನಾಂದಾರ್, ಸೊಲ್ಲಾಪುರದ ಸ್ಬಪ್ನಿಲ್ ಶಾ, ಹೈದರಾಬಾದ್ ಸಂಜೀವ್ ಔರಂಗಾಬಾದ್

ಡಾ ವೆಂಕಟರಾಮ್ ಮೈಸೂರ್, ಡಾ ಗಣೇಶ್ ಪೈ,ಡಾ ರಾಜೇಂದ್ರನ್ ಎಸ್ ಸಿ,ಡಾ. ಶೆಹನಾಜ್ ಆರ್ಸಿವಾಲಾ, ಡಾ. ಸ್ವಪ್ನಿಲ್ ಶಾ, ಡಾ. ಸಿ. ಮಧುರ,ಡಾ ಚೈತ್ರಾ ಶೆಣೈ, ಡಾ ಮಂಜುಳ, ಡಾ ಗಿರೀಶ್ ಎಂ ಎಸ್ ಸೇರಿದಂತೆ ಇತರರು ಇದ್ದರು.

About Mallikarjun

Check Also

ಎಫ್.ಕೆ.ಸಿ.ಸಿ.ಐನಿಂದ ಶನಿವಾರ ಉದ್ಯೋಗ ಉತ್ಸವ್ 2025 –26 ; 6 ವಲಯಗಳಲ್ಲಿ 6 ಸಾವಿರ ಉದ್ಯೋಗಾವಕಾಶಗಳು ಲಭ್ಯ

FKCCI to hold Saturday Udyog Utsav 2025-26; 6,000 job opportunities available in 6 zones ಬೆಂಗಳೂರು, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.