Rojagar Divas celebration at Tirumalapur lake dredging work site

ಗಂಗಾವತಿ : ಬಡ ಕೂಲಿಕಾರರ ಜೀವನ ಭದ್ರೆತೆಗೆ ಕೇಂದ್ರ ಸರ್ಕಾರ ಜಾರಿ ತಂದಿರುವ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಯಡಿ ಅರ್ಹರು ಖಾತೆ ಇರುವ ಬ್ಯಾಂಕ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ವಡ್ಡರಹಟ್ಟಿ ಗ್ರಾಪಂ ಪಿಡಿಓ ಚಲವಾದಿ ಅವರು ತಿಳಿಸಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಲಿಕಾರರು ನರೇಗಾ ಯೋಜನೆಯಡಿ ತಿರುಮಲಾಪುರ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಆಯೋಜಿಸಿದ್ದ ರೋಜಗಾರ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗೆ ಕೂಲಿಕಾರರು ನೋಂದಾಯಿಸಿಕೊಂಡು ವಾರ್ಷಿಕ 330 ರೂ. ಪಾವತಿಸಿದರೆ (50 ವರ್ಷದೊಳಗೆ) ಅಕಾಲಿಕ ಮರಣ ಸಂದರ್ಭದಲ್ಲಿ ಅವರ ನಾಮಿನಿದಾರರಿಗೆ 2 ಲಕ್ಷ ರೂ. ಮೌಲ್ಯದ ಜೀವ ವಿಮಾ ಸೌಲಭ್ಯ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವಾರ್ಷಿಕ 12 ರೂ. ಪಾವಿತಿಸಿದರೆ ಅಪಘಾತ ವಿಮೆ ಸೌಲಭ್ಯ ಪಡೆಯಬಹುದು, 18-70 ವರ್ಷದೊಳಗಿನವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. 18-40 ವರ್ಷದೊಳಗಿನವರು ಅಟಲ್ ಪಿಂಚಣಿ ಯೋಜನೆ ನೋಂದಾಯಿಸಿಕೊಂಡು ಮಾಸಿಕ ಯೋಜನೆ ಮೊತ್ತ ಪಾವತಿಸಿದರೆ 60 ವರ್ಷ ಮೇಲ್ಪಟ್ಟ ನಂತರ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಜೊತೆಗೆ ಎಲ್ಲ ಕೂಲಿಕಾರ್ಮಿಕರು ಕಡ್ಡಾಯವಾಗಿ ಆಯುಷ್ಮಾನ್ ಕಾರ್ಡ್ ಮಾಡಿಕೊಳ್ಳುವಂತೆ ತಿಳಿಸಿದರು.
ನರೇಗಾ ಯೋಜನೆಯಡಿ ಕೆಲಸಕ್ಕೆ ತಕ್ಕಂತೆ ಕೂಲಿ ನೀಡಲಾಗುತ್ತದೆ, ಕೆರೆ ಹೂಳೆತ್ತುವ ಕೂಲಿಕಾರರು ತಮಗೆ ನಿಗದಿ ಪಡೆಸಿದ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕು. ಕೆರೆ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿ ಹಾಗೂ ಕಾಡುಪ್ರಾಣಿಗಳು, ಜಾನುವಾರುಗಳಿಗೆ ನೀರಿನ ಸೌಲಭ್ಯ ದೊರೆಯುತ್ತದೆ ಎಂದರು.
ಜಿ.ಪಂ. ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿಗಳಾದ ಮಹಾಂತಸ್ವಾಮಿ ಅವರು ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಪುರುಷರು ಹಾಗೂ ಮಹಿಳಾ ಕೂಲಿಕಾರರಿಗೆ ಸಮಾನ ಕೂಲಿ ಇದ್ದು, ಎಲ್ಲರೂ ಸರಿಯಾಗಿ ಕೆಲಸ ಮಾಡಬೇಕು. ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ 100 ಮಾನವ ದಿನಗಳು ದುಡಿಯಲು ಅವಕಾಶ ಇದೆ. ಸಮುದಾಯಿಕ ಕಾಮಗಾರಿಗಳ ಜೊತೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಳಬಹುದು. ಕೆರೆ, ನಾಲಾ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.
ಗ್ರಾಮೀಣ ಆವಾಸ್ ಯೋಜನೆ (ಗ್ರಾಮೀಣ) ಮತ್ತು ರಾಜ್ಯದ ಇತರೆ ಯಾವುದೇ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ 90 ಮಾನವ ದಿನಗಳ ಅಕುಶಲ ಕೂಲಿ (31,410 ರೂ.) ವೆಚ್ಚವನ್ನು (4 ಹಂತಗಳಲ್ಲಿ ಪಡೆಯಲು ಅವಕಾಶವಿದೆ. ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳುವವರು ಗ್ರಾ.ಪಂ.ಗೆ ಅಗತ್ಯ ದಾಖಲೆ ನೀಡಿ 90 ಮಾನವ ದಿನಗಳನ್ನು ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.
ತಾ.ಪಂ. ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ ಅವರು ಮಾತನಾಡಿ, ನರೇಗಾ ಯೋಜನೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ತಾಂತ್ರಿಕ ಸಹಾಯಕರಾದ ವಿಜಯ ಶಿರಿಗೇರಿ, ಗ್ರಾಪಂ ಸದಸ್ಯರಾದ ಶಾಂತಮ್ಮ, ಗ್ರಾಪಂ ಸಿಬ್ಬಂದಿಗಳಾದ ಮಹ್ಮದ್ , ರಾಜಾಭಕ್ಷಿ, ಬಿಎಫ್ ಟಿ ಅಮರ್, ಗ್ರಾಮ ಕಾಯಕ ಮಿತ್ರರಾದ ಸುಜಾತ ಹಾಗೂ ಕಾಯಕಬಂಧುಗಳು ಇದ್ದರು.