Priyanka Kharge chaired a confidential meeting of Minister’s media coordinators

ಬಿಜೆಪಿ ಆರೋಪಗಳಿಗೆ ಪ್ರತ್ಯುತ್ತರ ನೀಡಲು ಸಚಿವರ ಮಾಧ್ಯಮ ಸಲಹೆಗಾರ ಗೌಪ್ಯ ಸಭೆ
ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಸಾಲು ಸಾಲು ಆರೋಪಗಳನ್ನು ಮಾಡುತ್ತಿದೆ. ಈ ಆರೋಪಗಳಿಗೆ ಯಾವ ರೀತಿ ಉತ್ತರ ಕೊಡಬೇಕು, ಸರ್ಕಾರದ ಕಾರ್ಯವೈಖರಿಯ ಬಗ್ಗೆ ಹೇಗೆ ಪ್ರಚಾರ ಮಾಡಬೇಕು, ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳನ್ನು ಹೇಗೆ ಜನರಿಗೆ ತಲುಪಿಸಬೇಕು ಎಂಬಿತ್ಯಾದಿ ವಿಚಾರಗಳನ್ನು ಇಟ್ಟುಕೊಂಡು ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಎಲ್ಲಾ ಸಚಿವರ ಮಾಧ್ಯಮ ಸಲಹೆಗಾರರ ಸಭೆಯನ್ನು ಇಂದು ಕರೆಯಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ಆರೋಪಗಳಿಗೆ ಯಾವ ರೀತಿಯಲ್ಲಿ ಪ್ರತ್ಯುತ್ತರ ನೀಡಬೇಕು ಹಾಗೂ ಇಲಾಖೆಗಳ, ಸಚಿವರುಗಳ ಕಾರ್ಯವೈಖರಿಗಳನ್ನು ಯಾವ ರೀತಿಯಲ್ಲಿ ಪ್ರಚಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್ ಅವರ ನೇತೃತ್ವದಲ್ಲಿ ಎಲ್ಲಾ ಸಚಿವರ ಮಾಧ್ಯಮ ಸಲಹೆಗಾರರ ಸಭೆಯನ್ನು ಕರೆಯಲಾಗಿದೆ.
ಗುರುವಾರ ಮಧ್ಯಾಹ್ನ 1 ಗಂಟೆಗೆ ಈ ಗೌಪ್ಯ ಸಭೆಯನ್ನು ಕರೆಯಲಾಗಿದ್ದು, ವಾರ್ತಾ ಇಲಾಖೆಯ ಸಮ್ಮೇಳನಾ ಸಭಾಂಗಣದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಒಮ್ಮೆ ಸಭೆಯಲ್ಲಿ ಕರೆಯಲಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಸಭೆಯನ್ನು ಮುಂದೂಡಲಾಗಿತ್ತು. ಇದೀಗ ಎಲ್ಲಾ ಸಚಿವರುಗಳ ಮಾಧ್ಯಮ ಸಂಯೋಜಕರಿಗೆ ಅಧಿಕೃತವಾದ ಆಹ್ವಾನ ಹೋಗಿದ್ದು, ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಸಭೆಯ ಉದ್ದೇಶ ಏನು?
ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸುತ್ತಿದೆ. ಈ ನಡುವೆ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ರೂಪಿಸಲು ಬಿಜೆಪಿ ಮತ್ತು ಜೆಡಿಎಸ್ ಪ್ರಯತ್ನ ನಡೆಸುತ್ತಿದೆ. ಇಲಾಖೆಗಳಲ್ಲಿ ಸರಿಯಾದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಅಭಿವೃದ್ದಿಯಲ್ಲಿ ಸರ್ಕಾರ ಹಿಂದುಳಿದಿದೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಆರೋಪಗಳಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡುವ ನಿಟ್ಟಿನಲ್ಲಿ ಮಾಧ್ಯಮಗಳ ಮೂಲಕ ಯಾವ ರೀತಿಯಲ್ಲಿ ಪ್ರಚಾರಗಳನ್ನು ನಡೆಸಬೇಕು ಮತ್ತು ಮಾಧ್ಯಮಗಳಿಗೆ ಯಾವ ಮಾಹಿತಿಗಳನ್ನು ಕೊಡಬೇಕು ಕೊಡಬಾರದು ಎಂಬ ಕುರಿತಾಗಿ ಸಚಿವರ ಮಾಧ್ಯಮ ಸಂಯೋಜಕರಿಗೆ ಈ ಸಭೆಯಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಇಲಾಖಾವಾರು ಸಚಿವರುಗಳ ಪ್ರವಾಸ, ಸಭೆ ಹಾಗೂ ಪ್ರಮುಖ ಘೋಷಣೆಗಳ ಬಗ್ಗೆ ಜನರಿಗೆ ತಲುಪುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ತಂತ್ರಗಾರಿಕೆಗಳನ್ನು ಮಾಡಬೇಕು ಎಂಬ ಕೆಲವೊಂದು ‘ಟಿಪ್ಸ್’ ಗಳನ್ನು ಸಭೆಯಲ್ಲಿ ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಮೂಲಕ ಸಚಿವರ ಕಾರ್ಯವೈಖರಿಗಳು ವಿವಿಧ ರೂಪದಲ್ಲಿ ಜನರಿಗೆ ತಲುಪುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆಯೂ ಸಲಹೆ ಸೂಚನೆಗಳನ್ನು ಸಭೆಯಲ್ಲಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆರೋಪಗಳಿಗೆ ತ್ವರಿತ ಉತ್ತರ
ಇನ್ನು ಸರ್ಕಾರ ಮತ್ತು ಇಲಾಖೆಗಳ ವಿರದ್ಧದ ಆರೋಪಗಳನ್ನು ನಿರಂತರವಾಗಿ ವಿರೋಧ ಪಕ್ಷಗಳು ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರವನ್ನು ನೀಡಲು ಸಚಿವರುಗಳು ವಿಫಲರಾಗುತ್ತಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಹೀಗಾಗಿ ಆರೋಪಗಳಿಗೆ ದಾಖಲೆ ಸಹಿತವಾಗಿ ಯಾವ ರೀತಿಯಲ್ಲಿ ಉತ್ತರಗಳನ್ನು ನೀಡಬೇಕು ಎಂಬ ಬಗ್ಗೆಯೂ ಈ ಸಭೆಯಲ್ಲಿ ಪ್ರಿಯಾಂಕ್ ಖರ್ಗೆ, ಸಿಎಂ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್ ಹಾಗೂ ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.