Road Safety Walking Procession by Regional Transport Department

ರಾಯಚೂರು ಫೆ 17 (ಕರ್ನಾಟಕ ವಾರ್ತೆ): ರಾಷ್ಟೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ರಾಯಚೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯು ಫೆ.17ರಂದು ಹಮ್ಮಿಕೊಂಡ ರಸ್ತೆ ಸುರಕ್ಷತಾ ಕಾಲ್ನಡಿಗೆ ಜಾಥಾಕ್ಕೆ ಗೌರವಾನ್ವಿತ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಸಿದ್ದರಾಮಪ್ಪ ಕಲ್ಯಾಣರಾವ್ ಅವರು ಹಾಗೂ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಚಾಲನೆ ನೀಡಿದರು.
ಈ ವೇಳೆ ಗೌರವಾನ್ವಿತ ನ್ಯಾ.ಸಿದ್ದರಾಮಪ್ಪ ಕಲ್ಯಾಣರಾವ್ ಅವರು ಮಾತನಾಡಿ, ಮಾನವ ಜೀವನವು ಅತ್ಯಂತ ಮೌಲ್ಯಯುತವಾದುದಾಗಿದೆ. ಅಪಘಾತಗಳಿಂದ ದೂರವಿರುವುದು ಮತ್ತು ಸುರಕ್ಷಿತ ಜೀವನ ನಡೆಸುವುದು ಸಹ ಜೀವನದಲ್ಲಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ವಾಹನ ಚಾಲನೆ ಮಾಡುವಾಗ ಜಾಗರೂಕತೆ ವಹಿಸಬೇಕು ಎಂದು ಸಲಹೆ ಮಾಡಿದರು.
ಅವಸರವೇ ಅಪಘಾತಕ್ಕೆ ಮೂಲ ಕಾರಣ ಎಂಬುದನ್ನು ಅರಿಯಬೇಕು. ಒತ್ತಡದಲ್ಲಿ, ಅವಸರದಲ್ಲಿ ವಾಹನಗಳನ್ನು ಚಾಲನೆ ಮಾಡಬಾರದು. ರಸ್ತೆ ನಿಯಮಗಳನ್ನ ತಪ್ಪದೇ ಪಾಲನೆ ಮಾಡಬೇಕು. ನಾವಷ್ಟೇ ಅಲ್ಲ, ಇತರರು ಸಹ ರಸ್ತೆಯ ಮೇಲೆ ಸುರಕ್ಷಿತವಾಗಿ ಸಂಚರಿಸುವಂತೆ ಸಹಕಾರ ನೀಡಬೇಕು ಎಂದು ಸಲಹೆ ಮಾಡಿದರು.
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ದಂಡಪ್ಪ ಬಿರಾದಾರ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಪುಟ್ಟಮಾದಯ್ಯ, ಆರ್.ಟಿ.ಒ ಅಧಿಕಾರಿ ದೇವಿಂದ್ರ ಪ್ರಸಾದ್, ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಮಂಜುನಾಥ ಕೊರವಿ, ಮೋಟಾರು ವಾಹನ ನಿರೀಕ್ಷಕರಾದ ರಾಕೇಶ್, ಪ್ರವೀಣ, ಆರ್‌ಟಿಓ ಅಧೀಕ್ಷಕರಾದ ಮಂಜುನಾಥ, ಜಿನತ್ ಸಾಜಿದಾ, ಎಸ್.ಕೆ.ಇ.ಎಸ್ ಪ್ಯಾರಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಬಾಬುರಾವ್ ಶೇಗುಣಸಿ, ಗೃಹರಕ್ಷಕ ದಳದ ಜಂಬಣ್ಣ, ಡ್ರೈವಿಂಗ್ ಸ್ಕೂಲ್ ಅಧ್ಯಕ್ಷರಾದ ಅನ್ವರ್ ಪಾಷಾ, ಲಾರಿ ಅಸೋಶಿಯೇಶನ್ ಅಧ್ಯಕ್ಷರಾದ ಅಜಿಮ್ ಪಾಷಾ ಸೇರಿದಂತೆ ಇತರರು ಇದ್ದರು. ಭಾರತ ಸೇವಾದಳದ ವಿದ್ಯಾಸಾಗರ ಅವರು ಸ್ವಾಗತಿಸಿದರು. ರಾಕೇಶ ಅವರು ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.
ಜಾಥಾ : ರಸ್ತೆ ಸುರಕ್ಷತಾ ಕಾಲ್ನಡಿಗೆ ಜಾಥಾ ಬೆಳಗ್ಗೆ ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಿಂದ ಆರಂಭವಾಗಿ ನಗರಸಭೆ, ತಹಸೀಲ್ದಾರ ಕಚೇರಿ, ಬಸ್ ನಿಲ್ದಾಣದ ಮೂಲಕ ಅಂಬೇಡ್ಕರ್ ವೃತ್ತ ಪ್ರವೇಶಿಸಿ ಮಹಾತ್ಮ ಗಾಂಧೀಜಿ ಕ್ರೀಡಾಂಗಣಕ್ಕೆ ಬಂದು ಮುಕ್ತಾಯವಾಯಿತು. ಜಾಥಾದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಎಸ್‌ಕೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ಎಲ್ಲ ಚಾಲನಾ ತರಬೇತಿ ಶಾಲೆಯ ಪ್ರಾಚಾರ್ಯರು ಮತ್ತು ಸಿಬ್ಬಂದಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.