“Parents’ role in children’s health and education” is immense.

ತಿಪಟೂರು : ಶಿಕ್ಷಕರು ಸುಪ್ತ ಮಾರ್ಗದರ್ಶಿಗಳಾಗಿ, ಪೋಷಕರು ಲುಪ್ತ ವ್ಯವಸ್ಥಾಪಕರಾಗಿ, ವಿದ್ಯಾರ್ಥಿಗಳು ಮುಕ್ತ ಕಲಿಕಾಸಕ್ತರಾದಾಗ ಮಾತ್ರ ಶಿಕ್ಷಣದಲ್ಲಿ ಏಳಿಗೆ ಸಾಧ್ಯ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಅಧ್ಯಕ್ಷೆ ಲತಾಮಣಿ ಎಂ.ಕೆ. ತುರುವೇಕೆರೆ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಹಾಸನ ಸರ್ಕಲ್ ಅನ್ನಪೂರ್ಣ ಬೇಕರಿ ಹಿಂಭಾಗ ಇರುವ ಟ್ಯೂಷನ್ ಕೇಂದ್ರದಲ್ಲಿ ತಿಪಟೂರು ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಾತ್ಯಾತೀತ, ಧರ್ಮಾತೀತ ಹಾಗೂ ಲಿಂಗಾತೀತವಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಎಲೆಮರೆ ಕಾಯಿಯಂತಹ ಸಾಧಕರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಉತ್ತಮೋತ್ತಮ ಕೆಲಸಗಳನ್ನು ವೇದಿಕೆ ಮಾಡುತ್ತದೆ ಎಂದರು.
ಸಮುದಾಯ ಆರೋಗ್ಯ ಅಧಿಕಾರಿಯಾದ ಶಿಲ್ಪಾ ಎನ್. ಅವರು “ಮಕ್ಕಳ ಆರೋಗ್ಯ ಮತ್ತು ಶಿಕ್ಷಣದಲ್ಲಿ ಪೋಷಕರ ಪಾತ್ರ” ಎಂಬ ವಿಷಯದಡಿ ಉಪನ್ಯಾಸ ನೀಡಿ ಮಾತನಾಡಿ ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಎಲ್ಲವನ್ನೂ ಯಂತ್ರ ತಂತ್ರಗಳಿಂದಲೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸವೂ ಯಾಂತ್ರಿಕ ಹಾಗೂ ತಾಂತ್ರಿಕವಾಗುತ್ತಾ ಮಕ್ಕಳ ಶಿಕ್ಷಣವೆಂಬುದು ಮಾಂತ್ರಿಕವಾಗಿ ಪೋಷಕರ ಹಾಗೂ ಶಿಕ್ಷಕರ ಹಿಡಿತದಿಂದ ದೂರವಾಗುತ್ತಿದೆ ಆದ್ದರಿಂದ ಹೆತ್ತವರಾದ ನಾವು ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕಲಿಕಾ ಪರಿಸರವನ್ನು ಸೃಷ್ಠಿಸಿ ಮಗುವನ್ನು ಮಾನಸಿಕವಾಗಿ ಸಜ್ಜುಗೊಳಿಸಿ ಶಾಲಾರಂಗಕ್ಕೆ ತಲುಪಿಸಿದಾಗ ಮಾತ್ರ ತರಬೇತಿ ಯಶಸ್ವಿಯಾಗುತ್ತದೆ ಆದ್ದರಿಂದ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬುದನ್ನು ಅನುಸರಿಸೋಣ ಮಕ್ಕಳ ಅಭಿವೃದ್ಧಿಯಲ್ಲಿ ಪಾಲುದಾರರಾಗೋಣ ಎಂದರು.
ಪತ್ರಕರ್ತ ಹಾಗೂ ಸಮಾಜ ಸೇವಕರಾದ ಡಾ. ಭಾಸ್ಕರಾಚಾರ್ ಅವರು ಕಲಾದೇವಿಯ ಸಾಹಿತ್ಯದೊಡವೆಗಳಾದ ಹೊತ್ತಿಗೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮಗಳು ಸರಳ ಹಾಗೂ ಗುಣಾತ್ಮಕವಾಗಿರಬೇಕು. ಇಂತಹ ಅಮೂಲ್ಯ ಕೆಲಸ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಆಗುತ್ತಿರುವುದು ಶ್ಲಾಘನೀಯವಾಗಿದೆ. ಮಕ್ಕಳು, ಪೋಷಕರು, ಸಮಾಜಕ್ಕೆ ಉಪಯುಕ್ತವಾದ ಮಾಹಿತಿಗಳನ್ನು ನೀಡುವುದರ ಜೊತೆಗೆ ಸಾಹಿತ್ಯ ಜಾಗೃತಿಯನ್ನು ಮೂಡಿಸುತ್ತಿರುವುದು ಮೆಚ್ಚುವಂಥದ್ದು. ವೇದಿಕೆ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೂ ನನ್ನ ಸಹಕಾರವಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುಚಿತ್ರ, ಶೀಲಾ, ರಾಜೇಶ್ವರಿ, ಶೀಲ ಮುಂತಾದವರು ಕವಿತೆ ವಾಚಿಸಿದರು ರಂಜಿತಾ ಆನಂದ್ ನಿರೂಪಿಸಿದರು ಪೂಜಾ ಸ್ವಾಗತಿಸಿದರು ಮಕ್ಕಳು ಪ್ರಾರ್ಥಿಸಿದರು ಕುಸುಮ ಕೆ.ಜೆ. ವಂದಿಸಿದರು. ಹಲವು ಶಾಲೆಯ ಮಕ್ಕಳು ಹಾಗೂ ಪೋಷಕರು ನೆರೆದಿದ್ದರು.
ವರದಿ ಮಂಜು ಗುರುಗದಹಳ್ಳಿ