Demand to solve the reservation problem of Okkaliga. 16th Big hike from Bellur Cross to Adi Chunchanagiri

ಬೆಂಗಳೂರು, ಫೆ, 15; ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು “ಒಕ್ಕಲಿಗರ ಮೀಸಲಾತಿಗಾಗಿ ಸರ್ಕಾರ ಉನ್ನತಾಧಿಕಾರಿ ಸಮಿತಿ” ರಚಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿ ಮಾರ್ಚ್ 16 ರಂದು ಬೆಳ್ಳೂರು ಕ್ರಾಸ್ ನಿಂದ ಆದಿ ಚುಂಚನಗಿರಿ ಮಠದವರೆಗೆ ಬೃಹತ್ ಪಾದಯಾತ್ರೆ ನಡೆಸುವುದಾಗಿ ರಾಜ್ಯ ಒಕ್ಕಲಿಗ ಸಮುದಾಯದ ಮೀಸಲಾತಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕೆ.ವಿ.ಮೂಡ್ಲಿಗಿರಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರ ಮೀಸಲಾತಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪಕ್ಷಾತೀತವಾಗಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದು, ಇದಕ್ಕಾಗಿ ಆದಿಚುಂಚನಗಿರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಸಮಾವೇಶದಲ್ಲಿ ಭಾಗವಹಿಸುವಂತೆ ಕೇಂದ್ರ ಸಚಿವರಾದ ಎಚ್.ಡಿ. ಕುಮಾರ ಸ್ವಾಮಿ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಪ್ರಮುಖ ಒಕ್ಕಲಿಗ ನಾಯಕರಿಗೆ ಮನವಿ ಮಾಡಲಾಗಿದೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದರು.
ಒಕ್ಕಲಿಗ ಸಮುದಾಯ ಹಾಗೂ ವೀರಶೈವ ಲಿಂಗಾಯಿತ ಸಮುದಾಯಗಳಿಗೆ ರಾಜ್ಯ ಸರ್ಕಾರಿ ಸಿಬ್ಬಂದಿ ನೇಮಕಾತಿಯಲ್ಲಿ ನೀಡಿರುವ ಮೀಸಲಾತಿ ಪ್ರಮಾಣ ಶೇ.4 ‘ಮತ್ತು ಶೇ.5 ರಷ್ಟಿದ್ದು, ಈ ಕಾರ್ಯವಿಧಾನದಲ್ಲೂ ತಾರತಮ್ಯವಾಗುತ್ತಿದೆ. ಈ ಅನ್ಯಾಯ ಸರಿಪಡಿಸಲು ಹೋರಾಟ ನಡೆಸುತ್ತಿದ್ದೇನೆ. ಸಚಿವರು, ರಾಜಕಾರಣಿಗಳು ಕಾನೂನು ಬದಲಿಸುವ ಶಕ್ತಿ ಹೊಂದಿದ್ದಾರೆ. ಆದರೆ ಇವರ ಮಕ್ಕಳು ಸರ್ಕಾರಿ ಸೇವೆಗೆ ಸೇರುವುದಿಲ್ಲ. ಹಾಗಾಗಿ ಇವರೆಲ್ಲಾ ನೇಮಕಾತಿ, ಮೀಸಲಾತಿ ವಿಷಯದಲ್ಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಕಟ್ಟ ಕಡೆಯ ಒಕ್ಕಲಿಗರಾದ ನಮಗೆ ತೊಂದರೆಯಾಗುತ್ತಿದೆ ಎಂದರು.
ಒಕ್ಕಲಿಗ ಸಮುದಾಯದ ಅಧಿಕಾರಿಗಳು ಕಾರ್ಯಾಂಗದಲ್ಲಿ ಬಲಾಢ್ಯರಾಗಿದ್ದು, ಸರ್ಕಾರವು ರೂಪಿಸುವ ನೀತಿ ನಿಯಮಗಳ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತಹ ಆಯಕಟ್ಟಿನ ಜಾಗದಲ್ಲಿದ್ದಾರೆ. ಇವರು ತಮಗೆ ತಮ್ಮ ಕುಟುಂಬದವರಿಗೆ ಮಾತ್ರ ಅನುಕೂಲ ಮಾಡಿಕೊಟ್ಟು ಆರಾಮದಾಯಕವಾಗಿದ್ದಾರೆ. ಒಕ್ಕಲಿಗ ಉದ್ಯಮಿಗಳು, ವ್ಯಾಪಾರಸ್ಥರು, ಗುತ್ತಿಗೆದಾರರು, ಸಂಘ ಸಂಸ್ಥೆಗಳ ಅಧ್ಯಕ್ಷರು, ಸಹ ಮೀಸಲಾತಿ ವಿಚಾರದಲ್ಲಿ ತಲೆಕೆಡಿಸಿಕೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜಾತಿ, ಜನಗಣತಿ ಕುರಿತು ಹಿಂದುಳಿದ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ವರದಿಗೆ ನಮ್ಮ ವಿರೋಧವಿದ್ದು, ಯಾವುದೇ ಕಾರಣಕ್ಕೂ ವರದಿ ಅಂಗೀಕಾರವಾಗದಂತೆ ನೋಡಿಕೊಳ್ಳಬೇಕು. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ನೇಮಕಾತಿಯಲ್ಲಿ ತಾರತಮ್ಯವಾಗಿದ್ದು, ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿಯಲ್ಲಿ ‘ಓ.ಬಿ.ಸಿ’ ಮೀಸಲಾತಿಯಲ್ಲೂ ಒಕ್ಕಲಿರಗರಿಗೆ ಅನ್ಯಾಯವಾಗುತ್ತಿದೆ ಎಂದು ಕೆ.ವಿ.ಮೂಡ್ಲಿಗಿರಯ್ಯ ಅಸಮಾಧಾನ ವ್ಯಕ್ತಪಡಿಸಿದರು.