Safer Internet Day: Awareness Workshop

ಹಿತ, ಮಿತ, ಸುರಕ್ಷಿತವಾಗಿ ಇಂಟರ್ನೆಟ್ ಬಳಸಿ – ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕೊಪ್ಪಳ : ಇತ್ತೀಚೆಗೆ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಲ್ಲರೂ ಹಿತ ಮಿತ ಹಾಗೂ ಸುರಕ್ಷಿತವಾಗಿ ಅಂತರಜಾಲ ಬಳಕೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತದಿಂದ “ಸುರಕ್ಷಿತ ಅಂತರ್ಜಾಲ ದಿನಾಚರಣೆ” ಅಂಗವಾಗಿ ಆಯೋಜಿಸಿದ್ದ ಅಂತರ್ಜಾಲ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮನುಷ್ಯನಿಗೆ ಮೊಬೈಲ್ ಸಹ ಜೀವನದ ಒಂದು ಅವಿಭಾಜ್ಯ ಅಂಗವಾದಂತಾಗಿದೆ. ಮೋಬೈಲ್, ಇಂಟರ್ನೆಟ್‌ನಿಂದ ನಮಗೆ ಬಹಳಷ್ಟು ಲಾಭ-ನಷ್ಟಗಳಿವೆ. ಆದರೆ, ಅವುಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುವುದು ಮುಖ್ಯ. ನಾವುಗಳು ಎಷ್ಟೇ ಜಾಣರಿದ್ದರು ಸಹ ಕೆಲವೊಮ್ಮೆ ಹ್ಯಾಕರ್ಸ್ ಅಥವಾ ಸೈಬರ್ ಕ್ರೈಮ್ ಪ್ರಕರಣಗಳಿಗೆ ಬಲಿಯಾಗಿ, ತೊಂದರೆಗೆ ಒಳಗಾಗಬಹುದು.
ಇದಕ್ಕಾಗಿ ಪ್ರತಿಯೊಬ್ಬರೂ ಸೈಬರ್ ಅಪರಾಧಗಳ ಕುರಿತು ಜಾಗೃತರಾಗಿರಬೇಕು.
ಈ ಹಿನ್ನೆಲೆಯಲ್ಲಿ ವಿಶ್ವ ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗುತ್ತಿದ್ದು, `ಜೊತೆಯಾಗಿ ಉತ್ತಮ ಇಂಟರ್ನೆಟ್ ಕಡೆಗೆ’ ಎಂಬ ಈ ವರ್ಷದ ಘೋಷ ವಾಕ್ಯದೊಂದಿಗೆ ಅರಿವು ಮೂಡಿಸಲಾಗುತ್ತಿದೆ. ಎಲ್ಲರೂ ಸುರಕ್ಷತೆಯಿಂದ ಇಂಟರ್ನೆಟ್ ಬಳಕೆ ಮಾಡಬೇಕೆಂದರು.
ಸೈಬರ್ ಸೆಲ್‌ನ ಸಿಪಿಐ ಮಹಾಂತೇಶ ಸಜ್ಜನ ಅವರು ಮಾತನಾಡಿ, ಸೈಬರ್ ಕ್ರೈಮ್‌ಗೆ ಯಾರಾದರೂ ಒಳಗಾಗಬಹುದು. ಮನುಷ್ಯನಿಗೆ ಅತಿ ಆಸೆ ಮತ್ತು ಭಯದಿಂದ ಸೈಬರ್ ಕ್ರೈಮ್ ಪ್ರಾರಂಭವಾಗುತ್ತದೆ. ಉದಾಹರಣೆಗೆ ನಿವು ಲಕ್ಕಿಡ್ರಾನಲ್ಲಿ ಹಣ ಗೆದ್ದಿದ್ದೀರಿ, ನಿಮ್ಮ ಮೊಬೈಲ್ ಸಂಖ್ಯೆಗೆ ಆಫರ್ ಬಂದಿದೆ ಎಂದು ಹೀಗೆ ವಿವಿಧ ಆಸೆಗಳನ್ನು ತೊರಿಸಿ ಮತ್ತು ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಕ್ತಾಯಗೊಂಡಿದೆ, ಬ್ಲಾಕ್ ಆಗಿದೆ, ಹೀಗೆ ವಿವಿಧ ಬಗೆಗಳಲ್ಲಿ ಭಯ ಹುಟ್ಟಿಸಿ, ವಂಚಿಸಬಹುದು.
ಹಿಂದೆ ಕಿಪ್ಯಾಡ್ ಮೊಬೈಲ್ ಬಳಕೆ ಇತ್ತು. ಆಗ ಇಂತಹ ವಂಚನೆ ಪ್ರಕರಣಗಳು ಆಗುತ್ತಿರಲಿಲ್ಲ. ಈಗ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಿದ್ದು, ಇಂಟರ್ನೆಟ್ ಮೂಲಕ ನಮ್ಮ ಮೊಬೈಲ್ ಡಾಟಾ ಇತರರಿಗೆ ಸುಲಭವಾಗಿ ಸಿಗುತ್ತದೆ. ಆದ್ದರಿಂದ ಇಂಟರ್ನೆಟ್ ಬಳಕೆದಾರರು ಅತ್ಯಂತ ಜಾಗೃತೆಯಿಂದಿರಬೇಕು. ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ ಎಂಬಂತೆ ಮುಂದೊಂದು ದಿನ `ಮೊಬೈಲ್ ಕಡಿಮೆ ಬಳಕೆ ಮಾಡುವವನಿಗೆ ಯಾವುದೇ ಕ್ರೈಮ್ ಸಮಸ್ಯೆಯಿಲ್ಲ’ ಎಂಬ ಮಾತು ಬರಬಹುದು ಎಂದರು.
ಮೊಬೈಲ್ ಕರೆಗಳ ಮೂಲಕ ಸೂಕ್ಷ್ಮವಿವರಗಳಾದ ಓಟಿಪಿ, ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ರುಜುವಾತುಗಳನ್ನು ಎಂದಿಗೂ ಬಹಿರಂಗಪಡಿಸಬಾರದು. ಅನಧಿಕೃತ ಆಧಾರ್ ಪಾವತಿ ಅಧಿಸೂಚನೆಗಳ ಬಗ್ಗೆ ಜಾಗರೂಕರಾಗಿರಿ. ಪ್ಯಾನ್, ಆಧಾರ್ ಅಥವಾ ಬ್ಯಾಂಕ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಕೇಳುವ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಹಾಗೂ ವಿಶೇಷವಾಗಿ ಕೆವೈಸಿ ನವೀಕರಣಗಳ ನೆಪದಲ್ಲಿ ಬರುವ ಲಿಂಕ್‌ಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ.
ವೈಯಕ್ತಿಕ ಮಾಹಿತಿ ಅಥವಾ ಹಣಕ್ಕಾಗಿ ವಿನಂತಿಸುವ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಬರುವ ಕರೆಗಳಿಗೆ ಎಂದಿಗೂ ಪ್ರತಿಕ್ರಿಯಿಸಬಾರದು. ಸೈಬರ್ ಅಪರಾಧಕ್ಕೆ ಒಳಗಾಗಿದ್ದರೆ, ತಕ್ಷಣ 24*7 ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬಹುದು ಎಂದು ವಿವರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದ(ಎನ್.ಐ.ಸಿ) ಡಿ.ಐ.ಓ ಬಸವರಾಜ ವಾಳದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ದಿನನಿತ್ಯದ ಜೀವನದಲ್ಲಿ ಅಂತರ್ಜಾಲ ಬಳಕೆ, ಅಂತರ್ಜಾಲ ಸುರಕ್ಷಿತ ಬಳಕೆ (ಅಂತರ್ಜಾಲ ಸುರಕ್ಷತೆ), ಸಾಮಾನ್ಯ ಸೈಬರ್ ಬೆದರಿಕೆಗಳು, ಸೈಬರ್ ನೈರ್ಮಲ್ಯ ಅಭ್ಯಾಸಗಳು, ಸೈಬರ್ ಅಪರಾಧಗಳನ್ನು ವರದಿ ಮಾಡುವ ಕಾರ್ಯವಿಧಾನ (1930), ಆನಲೈನ್ನಲ್ಲಿ ಸುರಕ್ಷಿತವಾಗಿರಲು ಜಾಗೃತಿ ಸಂಪನ್ಮೂಲಗಳ ಕುರಿತು ಮಾಹಿತಿ ನೀಡಲಾಯಿತು.