Ambigar Choudaiya’s words are a beacon; District Collector Nitish K.

ರಾಯಚೂರು ಜ.21,(ಕರ್ನಾಟಕ ವಾರ್ತೆ): ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ನಮಗೆ ದಾರಿದೀಪವಾಗಿದ್ದು, ಅವರ
ಆದರ್ಶಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆಯೋಣ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನವರಿ 21ರ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ನೇರ ನಿಷ್ಠುರವಾಗಿ ಮಾತನಾಡಿ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಶೋಷಣೆ, ಮೂಢನಂಬಿಕೆ, ಹೋಗಲಾಡಿಸಲು ಶ್ರಮಿಸಿದರು.
ಅವರು ರಚಿಸಿದ ವಚನಗಳು ಉತ್ತಮ ಬದುಕಿಗೆ ಹಿತನುಡಿಗಳಂತಾಗಿವೆ ಎಂದರು.
ನಮ್ಮ ಸಮಾಜದ ಜನರಲ್ಲಿ ಮೂಢನಂಬಿಕೆಗಳು ಬೇರೂರಿದ್ದು, ಇದನ್ನು ತೊಲಗಿಸಲು ಜ್ಞಾನ ಮತ್ತು ಶಿಕ್ಷಣವೇ ನಮಗೆ
ರಾಮಬಾಣ ಎಂದರು.
ಈ ದಿಶೆಯಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗದಾಗ ಮಾತ್ರ ಮೌಡ್ಯತೆ, ನಿರ್ಮೂಲನೆ ಸಾಧ್ಯ ಎಂದು ತಿಳಿಸಿದರು.
ಮಕ್ಕಳಿಗೆ ಆರಂಭದಿಂದಲೇ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಬೇಕು. ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಮಾಜದಲ್ಲಿ ಸರ್ವ ಸಮುದಾಯದ ಜನರ
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ನಗರದಲ್ಲಿ ಕೆರೆಗಳು ಉತ್ತಮವಾಗಿ ನಿರ್ಮಾಣವಾಗಿ
ಮೀನುಗಾರಿಕೆಗೆ ಅನಕೂಲವಾಗಬೇಕಿದೆ. ಈ ದಿಶೆಯಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯ ಆರಂಭವಾಗಿದೆ ಎಂದರು. ಕೃಷ್ಣ ಮತ್ತು ತುಂಗಭದ್ರಾ ನದಿಯಲ್ಲಿ ಸಹ ಮೀನುಗಾರಿಕೆ ಮಾಡಲು ಉತ್ತೇಜನ ನೀಡಲಾಗುವುದು ಎಂದರು.
ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಉಪಾಧ್ಯಕ್ಷರಾದ ಕೆ.ಶಾಂತಪ್ಪ ಅವರು ಉಪನ್ಯಾಸ ನೀಡಿ, ಶರಣರ ತತ್ವಸಿದ್ದಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಅಂಬಿಗರ ಚೌಡಯ್ಯನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದವರು. ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ:
ದೋಣಿ ನಡೆಸುವ ಹಾಗೂ ಮೀನು ಹಿಡಿಯುವ ಅಂಬಿಗರ ಕಾಯಕದಲ್ಲಿ ಮೇಲುಕೀಳು ಎಂಬುದಿಲ್ಲ. ಮನುಷ್ಯ ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಾಯಕ ಆಧರಿಸಿ ಮೇಲು ಕೀಳು ಎಂದು ತಾರತಮ್ಯ ಮಾಡಿದ್ದರ ವಿರುದ್ಧ ಬಸವಾದಿ ಶರಣರು ಹೋರಾಟ ಮಾಡಿದರು. ಈ ಸಾಲಿನಲ್ಲಿ ಅಂಬಿಗರ ಚೌಡಯ್ಯ ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ. ಅದಕ್ಕೆ ಬಸವಣ್ಣನವರು ಇವರಿಗೆ ನಿಜಶರಣ ಎಂದು ಕರೆದರು ಎಂದು ವಿವರಿಸಿದರು.
ನೇರ, ನಿಷ್ಠುರವಾದಿ:
ಹನ್ನೆರಡನೇ ಶತಮಾನದ ಶರಣರಲ್ಲಿ ಪ್ರಮುಖರಾಗಿರುವ ಅಂಬಿಗರ ಚೌಡಯ್ಯನವರು ನೇರ, ನಿಷ್ಠುರಿಯಾಗಿದ್ದರು. ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿ. ನಾಡಿನ ಚರಿತ್ರೆಯಲ್ಲಿ ಹನ್ನೆರಡನೇ ಶತಮಾನಕ್ಕೆ ವಿಶೇಷ ಮಹತ್ವ ಇದೆ. ಆ ಕಾಲಘಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಚೌಡಯ್ಯನವರು ಭಾಗಿಯಾಗಿದ್ದರು. ನೇರ, ನಿಷ್ಠುರ ಮಾತುಗಳು, ಖಂಡಿಸುವ ಗುಣದಿಂದಲೇ ನಿಜಶರಣ ಎಂಬ ಬಿರುದು ಹೊಂದಿದ್ದರು. ವಚನಗಳ ಮೂಲಕ ತಮ್ಮ ಕಾಯಕವನ್ನು ಎತ್ತಿ ಹಿಡಿದಿದ್ದರು. ಜೊತೆಗೆ ಸ್ತ್ರೀ ಸಮಾನತೆಗೂ ಮಹತ್ವ ಕೊಟ್ಟಿದ್ದರು ಎಂದು ಉಪನ್ಯಾಸನದಲ್ಲಿ ವಿವರಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ರಾಯಚೂರು ಗ್ರೇಡ್-2 ತಹಶೀಲ್ದಾರ್ ಭೀಮರಾಯ, ನೇತಾಜಿ ನಗರ ಪೊಲೀಸ ಠಾಣೆಯ ಪಿಎಸ್‌ಐ ಲಕ್ಷ್ಮಿ, ಸಮಾಜದ ಮುಖಂಡರಾದ ಶರಣಪ್ಪ ಕಡಗೋಳ, ಶಿವರಾಂ, ಕಡಗೋಳ, ಆಂಜೀನೆಯ, ಶರಣಪ್ಪ, ರಾಜೇಶ್ವರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.