Steps taken to build regional science center, well-equipped planetarium in Raichur: Minister N.S. Bosaraju

ರಾಯಚೂರ ಜನವರಿ 17 (ಕ.ವಾ.): ರಾಯಚೂರು ನಗರದಲ್ಲಿ ಆಧುನಿಕ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜೊತೆಗೆ ಸುಸಜ್ಜಿತ ತಾರಾಲಯ ನಿರ್ಮಾಣಕ್ಕೆ ಅಗತ್ಯ ಪ್ರಸ್ತಾವನೆ ಸಿದ್ದಪಡಿಸಲು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಜನವರಿ 16ರಂದು ಬೆಂಗಳೂರು ನಗರದ ಬಹುಮಹಡಿ ಕಟ್ಟಡದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಮ್ಮೇಳನ ಸಭಾಂಗಣದಲ್ಲಿ ರಾಯಚೂರು ಜಿಲ್ಲಾಧಿಕಾರಿಗಳು ಮತ್ತಿತರರೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ವಿಜ್ಞಾನ ಕೇಂದ್ರಗಳನ್ನು ನಿರ್ಮಿಸಲು ಆದ್ಯತೆ ನೀಡಿದ್ದು, ರಾಯಚೂರು ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣದ ಕಾರ್ಯವನ್ನು ತಕ್ಷಣವೇ ಚುರುಕುಗೊಳಿಸುವಂತೆ ಸೂಚಿಸಿದರು.
ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ 90 ದಿನಗಳಲ್ಲಿ ವಿನ್ಯಾಸ ನೀಡುವಂತೆ ವಾಸ್ತುಶಿಲ್ಪಿ ತಂಡಕ್ಕೆ ಸೂಚನೆ ನೀಡಿ ಡಿಪಿಆರ್ ಸಿದ್ಧಪಡಿಸಿ ಕಾಮಗಾರಿಗೆ ಚಾಲನೆ ನೀಡುವಂತೆ ಸಚಿವರು ನಿರ್ದೇಶನ ನೀಡಿದರು. ಜೊತೆಗೆ ರಾಯಚೂರು ವಿಜ್ಞಾನ ಕೇಂದ್ರದಲ್ಲಿ ಸುಸಜ್ಜಿತ ತಾರಾಲಯ ನಿರ್ಮಾಣ ಮಾಡಲು ಅಗತ್ಯ ಪ್ರಸ್ತಾವನೆ ಸಿದ್ದಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಬರುವ ಬಜೆಟ್ ನಲ್ಲಿ ಕೋಲಾರ, ಚಿತ್ರದುರ್ಗ, ರಾಮನಗರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡು ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಬಾಕಿಯಿರುವ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಬೆಳಗಾವಿ ವಿಜ್ಞಾನ ಕೇಂದ್ರಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು. ಗೌರಿ ಬಿದನೂರಿನಲ್ಲಿರುವ ಡಾ.ಎಚ್. ನರಸಿಂಹಯ್ಯ ವಿಜ್ಞಾನ ಕೇಂದ್ರವನ್ನು ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಿದ್ದು, ಇದಕ್ಕೆ ಅಗತ್ಯವಾಗಿರುವ ಭೂಮಿ ಲಭ್ಯವಿದ್ದು, ಇದನ್ನು ವಶಕ್ಕೆ ಪಡೆಯಲು ಸ್ಥಳೀಯರನ್ನೊಳಗೊಂಡ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳದ ಡಾ. ಏಕರೂಪ ಕೌರ್, ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು, ರಾಯಚೂರು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ವಿಐಟಿಎಂನ ಅಧಿಕಾರಿಗಳು ಉಪಸ್ಥಿತರಿದ್ದರು.