Pay tax compulsorily EO Lakshmidevi notice
ಗಂಗಾವತಿ : ವಾರ್ಷಿಕವಾಗಿ ಗ್ರಾಮ ಪಂಚಾಯತ್ ಗೆ ಪಾವತಿಸಬೇಕಾದ ತೆರಿಗೆಯನ್ನು ಬಾಕಿ ಉಳಿಸಿಕೊಳ್ಳದೇ ಕಡ್ಡಾಯವಾಗಿ ಸಂಪೂರ್ಣವಾಗಿ ಪಾವತಿಸಿ ಗ್ರಾಮಾಭಿವೃದ್ಧಿಗೆ ಸಹಕರಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಹೇಳಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕರವಸೂಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ, ಮನೆ, ವಾಣಿಜ್ಯ ಮಳಿಗೆ, ಉದ್ಯಮ, ಖಾಸಗಿ ಶಾಲಾ-ಕಾಲೇಜುಗಳು, ರೈಸ್ ಮಿಲ್ ಗಳು ಮತ್ತು ರೆಸ್ಟೋರೆಂಟ್ ಗಳ ಮಾಲೀಕರು 2024-25 ನೇ ಸಾಲಿನ ತೆರಿಗೆ ಪರಿಷ್ಕರಣೆಯ ಪೂರಕವಾಗಿ ಸಂಪೂರ್ಣ ತೆರಿಗೆಯನ್ನು ಪಾವತಿಸಬೇಕು ಎಂದರು.
ಗ್ರಾಪಂ ಪಿಡಿಓ ಸುರೇಶ ಛಲವಾದಿ ಅವರು ಮಾತನಾಡಿ, ಗ್ರಾಮ ಪಂಚಾಯತ್ ವ್ಯಾಪ್ತಿಯ ವಡ್ಡರಹಟ್ಟಿ ಮತ್ತು ಆರ್ಹಾಳ ಗ್ರಾಮಗಳ ಆಸ್ತಿ ತೆರಿಗೆಯನ್ನು ನಿಗದಿತ ಕಾಲಾವಧಿಯಲ್ಲಿ ಪಾವತಿಸಬೇಕು. ವಾಣಿಜ್ಯ ಸಂಕೀರ್ಣಗಳು ಉದ್ಯಮ ಮತ್ತು ಹೋಟೆಲ್ ರೆಸ್ಟೊರೆಂಟ್ ಗಳ ತೆರಿಗೆ ಪಾವತಿ ಹಾಗೂ ಸನ್ನದ್ದುಗಳ ನವೀಕರಣವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಬಾಕಿದಾರರಿಗೆ ಈಗಾಗಲೇ ನೋಟಿಸ್ ಗಳನ್ನು ಜಾರಿಗೊಳಿಸಿದ್ದು, ಕೂಡಲೇ ಪಾವತಿಸಲು ಸೂಚಿಸಿದರು.
ಸನ್ನದ್ದುಗಳ (ಲೈಸೆನ್ಸ್ ) ನವೀಕರಣ ಮಾಡಿಕೊಳ್ಳದಿದ್ದರೆ ಅವರ ವಹಿವಾಟಿನ ಮೇಲೆ ಕ್ರಮ ಜರುಗಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆ ಮೇರೆಗೆ ಗ್ರಾಪಂ ವತಿಯಿಂದ ವಡ್ಡರಹಟ್ಟಿ ಹಾಗೂ ಆರ್ಹಾಳ ಗ್ರಾಮಗಳಲ್ಲಿ ಶನಿವಾರ ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ಕರವಸೂಲಾತಿ ಆಂದೋಲನ ನಡೆಯಿತು.
ಕರವಸೂಲಾತಿ ಆಂದೋಲನದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಗೌಸ್ ಸಾಬ್ ತಾಳಕೇರಿ, ಗ್ರಾಪಂ ಸದಸ್ಯರಾದ ಪೀರ್ ಮಹ್ಮದ್, ಭರತ್ ಕುಮಾರ್, ಶಾಂತಮ್ಮ, ಹೊನ್ನುರಬೀ, ಮೇರಾಜ್ , ಹುಸೇನಪ್ಪ ಬಂಡಿ, ನಿರ್ಮಲಾ, ಸಂಗಪ್ಪ ಸೇರಿ ಇತರೆ ಸದಸ್ಯರು, ಕಾರ್ಯದರ್ಶಿಗಳಾದ ಈಶಪ್ಪ, ಕರವಸೂಲಿಗಾರರಾದ ಆಂಜನೇಯ, ರುದ್ರಸ್ವಾಮಿ, ಗ್ರಾಪಂ ಸಿಬ್ಬಂದಿಗಳು, ಸೇರಿ ಗ್ರಾಮಸ್ಥರು ಇದ್ದರು.