Gangavati, Karatagi taluk progress review meeting

ಅರ್ಹ ಫಲಾನುಭವಿಗಳಿಗೆ ಯೋಜನೆಗಳ ತಲುಪಿಸಿ
ಜಿಪಂ ಯೋಜನಾ ನಿರ್ದೇಶಕರಾದ ಪ್ರಕಾಶ ವಿ. ಸೂಚನೆ
ಗಂಗಾವತಿ : 2025-26ನೇ ಸಾಲಿನ ನರೇಗಾ ಕ್ರಿಯಾ ಯೋಜನೆಯಲ್ಲಿವೈಯಕ್ತಿಕ ಕಾಮಗಾರಿಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಂತೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಪ್ರಕಾಶ ವಿ. ಅವರು ಗ್ರಾಪಂ ಪಿಡಿಓಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿಗಂಗಾವತಿ ಹಾಗೂ ಕಾರಟಗಿ ತಾಲೂಕಿನ ಗ್ರಾಪಂ ಪಿಡಿಓ ಹಾಗೂ ನರೇಗಾ ಸಿಬ್ಬಂದಿಗಳಿಗೆ ಗುರುವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಎಲ್ಲ ಗ್ರಾಮ ಪಂಚಾಯತ್ ಅವರು ಉದ್ಯೋಗ ಖಾತರಿ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ಕಡ್ಡಾಯವಾಗಿ 100 ಮಾನವ ದಿನಗಳ ಕೆಲಸ ನೀಡಬೇಕು. ಗ್ರಾಮದ ವಿಧವೆಯರು, ನಿರ್ಗತಿಕರು, ವಿಕಲಚೇತನರನ್ನು ಗುರುತಿಸಿ ಅವರಿಗೆ ನರೇಗಾ ಯೋಜನೆ ಸೌಲಭ್ಯಗಳನ್ನು ನೀಡಬೇಕು. ಸ್ಥಳೀಯವಾಗಿ ನಾಲಾ ಹೂಳೆತ್ತುವುದು, ಗೋಕಟ್ಟೆ ನಿರ್ಮಾಣ, ಹಳ್ಳದ ಹೂಳೆತ್ತುವ ಕೆಲಸಗಳನ್ನು ಇಟ್ಟುಕೊಳ್ಳುವಂತೆ ಸೂಚಿಸಿದರು.
ನರೇಗಾ ಸಿವಿಲ್ ಕಾಮಗಾರಿಗಳಾದ ಶಾಲಾ ಕಾಮಗಾರಿಗಳು, ಸಿಸಿ ರಸ್ತೆ, ಚರಂಡಿ, ನಮ್ಮ ಹೊಲ, ನಮ್ಮ ರಸ್ತೆ ಕಾಮಗಾರಿಗಳನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಇಂಜಿನಿಯರ್ ಗಳು ಮೇಲುಸ್ತುವಾರಿ ವಹಿಸಿ ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನೀಡಿರುವ ಕಸ ವಿಲೇವಾರಿ ವಾಹನಗಳಿಂದ ಕಸ ಸಂಗ್ರಹ ಕಾರ್ಯ ನಿತ್ಯ ಜರುಗಬೇಕು. ಗ್ರಾಮದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಗ್ರಾಪಂ ಪಿಡಿಓಗಳಿಗೆ ಸೂಚನೆ ನೀಡಿದರು.
ಗ್ರಾಪಂ ಒಟ್ಟಾರೆ ಅನುದಾನದಲ್ಲಿ ಶೇ.5ರಷ್ಟು ಅನುದಾನವನ್ನು ವಿಕಲಚೇತನರ ಕಲ್ಯಾಣಕ್ಕೆ ಸರಿಯಾಗಿ ಬಳಕೆ ಮಾಡಬೇಕು. ವಿವಿಧ ಯೋಜನೆಯಲ್ಲಿ ವಿಕಲಚೇತನರು ಬದುಕು ಕಟ್ಟಿಕೊಳ್ಳಲು ಅವರಿಗೆ ಮಾಹಿತಿ ನೀಡಿ, ಸ್ವಾವಲಂಬಿಗಳನ್ನಾಗಿ ಮಾಡಬೇಕು. ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಪ್ರಗತಿ ಕುಂಠಿತವಾಗಿದ್ದು, ಶೇ.100 ಗುರಿ ಸಾಧಿಸಲು ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು.
((ಬಾಕ್ಸ್ ))
ಸಭೆಯ ನಂತರ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಅನುಷ್ಠಾನಗೊಂಡ ಚರಂಡಿ, ಜಾನುವಾರು ಶೆಡ್ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಪ್ರಕಾಶ ವಿ. ಅವರು ವೀಕ್ಷಣೆ ಮಾಡಿ, ಕಡತಗಳ ಪರಿಶೀಲನೆ ನಡೆಸಿದರು. ನಂತರ ವಸತಿ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಮಂಜೂರಾದ ಮನೆಗಳನ್ನು ಕಟ್ಟಿಸಿಕೊಳ್ಳುವಂತೆ ತಿಳಿಸಿದರು.
ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ಗಂಗಾವತಿ, ಕಾರಟಗಿ ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ವೈ.ವನಜಾ, ಜಿಲ್ಲಾ ಪಂಚಾಯತ್ ಎಡಿಪಿಸಿ ಮಹಾಂತಸ್ವಾಮಿ, ವಿಷಯ ನಿರ್ವಾಹಕರಾದ ರವೀಂದ್ರ ಕುಲಕರ್ಣಿ, ತಾಲೂಕು ಪಂಚಾಯತ್ ಸಿಬ್ಬಂದಿಗಳು, ಗಂಗಾವತಿ, ಕಾರಟಗಿ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿಗಳು, ಎನ್ ಆರ್ ಎಲ್ ಎಂ ಸಿಬ್ಬಂದಿಗಳು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಸಿಬ್ಬಂದಿ ಇದ್ದರು.