High Court order to register house dwellers association along with deed of declaration
ಬೆಂಗಳೂರು;ಡೀಡ್ ಆಫ್ ಡಿಕ್ಲರೇಷನ್ ಜತೆಗೆ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ 1972ರಡಿ ಗೃಹ ನಿವಾಸಿಗಳ ಸಂಘವನ್ನು ನೋಂದಣಿ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.
ಇದರೊಂದಿಗೆ ಸಂಘದ ನೋಂದಣಿ ಕುರಿತಂತೆ ಇದ್ದ ಗೊಂದಲ ನಿವಾರಣೆಯಾಗಿದೆ.
ಬೆಂಗಳೂರಿನ ಬಿ.ಚನ್ನಸಂದ್ರದ ಸಾಯಿ ಫ್ಲೋರಾ ರೆಸಿಡೆನ್ಸಿಯ ಅನ್ನಪ್ರಗದ ಮುರಳೀಕೃಷ್ಣ ಮತ್ತು ಎಚ್.ಕೆ.ಯೋಗೀಶ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯಪೀಠ ಈ ಅದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ನಂತರ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ, ಬೈಲಾ ಸಮೇತ ಡೀಡ್ ಆಫ್ ಡಿಕ್ಲರೇಷನ್ ನೊಂದಿಗೆ ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‌ಶಿಪ್ ಕಾಯಿದೆಯಡಿ ಸಂಘವನ್ನು ನೋಂದಣಿ ಮಾಡಲಾಗದು ಎಂದು ಸಬ್ ರಿಜಿಸ್ಟಾರ್ 2024ರ ಫೆ.14ರಂದು ನೀಡಿದ್ದ ಹಿಂಬರಹವನ್ನು ರದ್ದುಗೊಳಿಸಿದೆ.
ಅಲ್ಲದೆ, ಸಬ್ ರಿಜಿಸ್ಟ್ರಾರ್ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ 1972ರಡಿ ಡೀಡ್ ಆಫ್ ಡಿಕ್ಲರೇಷನ್ ಸಹಿತ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅನ್ನು ಮೂರು ತಿಂಗಳಲ್ಲಿನೋಂದಣಿ ಮಾಡಿಕೊಳ್ಳಬೇಕು ಎಂದು ಆದೇಶ ನೀಡಿದೆ.
ಸಾಯಿ ಫ್ಲೋರಾ ರೆಸಿಡೆನ್ಸಿಯ ನಿವಾಸಿಗಳೆಲ್ಲಾಸೇರಿ ತಮ್ಮದೇ ಆದ ಸಂಘವನ್ನು ರಚಿಸಲು ನಿರ್ಧರಿಸಿದ್ದರು. ಅದರಂತೆ ಅರ್ಜಿದಾರರು ಬೈಲಾದ ಜತೆ ಡೀಡ್ ಆಫ್ ಡಿಕ್ಲರೇಷನ್ ಸಹಿತ ತಮ್ಮ ಸಂಘವನ್ನು ನೋಂದಾಯಿಸಲು ಕಾವೇರಿ ಆನ್‌ಲೈಟ್ ಪೋರ್ಟ್‌ಲ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ಸಬ್ ರಿಜಿಸ್ಟ್ರಾರ್ ಅವರ ಮನವಿಯನ್ನು ತಿರಸ್ಕರಿಸಿ, ಬೈಲಾದ ಜತೆ ಡೀಡ್ ಆಫ್ ಡಿಕ್ಲರೇಷನ್ ಸಹಿತ ಸಂಘವನ್ನು ನೋಂದಣಿ ಮಾಡಿಕೊಳ್ಳುವುದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂಘವನ್ನು ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ ಸೊಸೈಟಿಯಡಿ ನೋಂದಾಯಿಸಿಕೊಳ್ಳುವಂತೆ ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.