Breaking News

ಕಲಿತವರ ಕಲ್ಪವೃಕ್ಷ ನಮ್ಮ ಪಂಪ : ವಿದ್ವಾಂಸ ಶಿವಣ್ಣ ಇಂದ್ವಾಡಿ ಅಭಿಮತ

Kalitavara Kalpavriksha Nampa Pampa: Scholar Shivanna Indwadi Abhimata

ಜಾಹೀರಾತು

ಕೊಳ್ಳೇಗಾಲ, ನ.೮:ಕಲಿತವರ ಕಲ್ಪವೃಕ್ಷ ನಮ್ಮ ಪಂಪ : ವಿದ್ವಾಂಸ ಶಿವಣ್ಣ ಇಂದ್ವಾಡಿ ಅಭಿಮತ
ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆದರ್ಶ ಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಸಮಾರಂಭವನ್ನು ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಉದ್ಘಾಟಿಸಿ ಮಾತನಾಡಿದ ಅವರು, ಪಂಪ ಹತ್ತನೆಯ ಶತಮಾನದಲ್ಲಿದ್ದ ಕವಿ. ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯ ಎಂಬ ಎರಡು ಶ್ರೇಷ್ಠ ಕೃತಿಗಳ ಕರ್ತೃ. ಪ್ರಾಚೀನ ಕನ್ನಡ ಕವಿಗಳಲ್ಲಿ ಅಗ್ರಗಣ್ಯರು. ಈಗ ಪಂಪನವೆಂದು ನಮಗೆ ದೊರೆತಿರುವ ಕೃತಿಗಳೆಂದರೆ ಆದಿಪುರಾಣ ಮತ್ತು ಪಂಪಭಾರತ ಎಂದು ಪ್ರಸಿದ್ಧವಾಗಿರುವ ವಿಕ್ರಮಾರ್ಜುನ ವಿಜಯ. ವಿಕ್ರಮಾರ್ಜುನ ವಿಜಯದಲ್ಲಿ ಪಂಪ ತನ್ನ ಕೃತಿಗಳೆಂದು ಹೆಸರಿಸಿರುವುದು ಈ ಎರಡು ಕೃತಿಗಳೇ. ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆಟ್ಟಿದುವು ಸಮಸ್ತ ಭಾರತಮುಂ ಆದಿಪುರಾಣ ಮಹಾಪ್ರಂಧಮುಂ ಎಂಬ ಪಂಪನ ಹೇಳಿಕೆಗೆ, ಈ ಎರಡು ಕೃತಿಗಳು ಪಂಪ ಪೂರ್ವ ಗಣ್ಯಕೃತಿಗಳೆಲ್ಲವನ್ನೂ ಮೀರಿಸಿದುವು ಎಂದು ಸಾಮಾನ್ಯವಾಗಿ ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಆದಿಪುರಾಣ, ಪಂಪಭಾರತ : ಆದಿಪುರಾಣ ವಿಕ್ರಮಾರ್ಜುನ ವಿಜಯಗಳೆರಡೂ ಕನ್ನಡದ ಅಗ್ರಮಾನ್ಯ ಆದಿಮಹಾಕಾವ್ಯಗಳು. ಚಂಪೂ ಕಾವ್ಯಪ್ರಕಾರದ ಶ್ರೇಷ್ಠತಮ ಮಾದರಿಗಳು. ಆದಿಪುರಾಣ ಧಾರ್ಮಿಕಗ್ರಂಥ, ಪವಿತ್ರ ಗ್ರಂಥ. ಈ ಕಾವ್ಯ ರಚನೆಯಿಂದ ಪಂಪ ಪಂಡಿತ ಪ್ರಶಂಸೆಯನ್ನೂ ಗಳಿಸಿ ಪುರಾಣಕವಿಯೆಂದು ಪ್ರಸಿದ್ಧನಾದ. ಆದಿಪುರಾಣದಲ್ಲಿ ಕಾವ್ಯಧರ್ಮ-ಧರ್ಮಗಳ ಸಮನ್ವಯವನ್ನು ಬಹುಮಟ್ಟಿಗೆ ಸಾಧಿಸಿ, ಭಾರತದಲ್ಲಿ ಲೌಕಿಕವನ್ನು ಎಂದರೆ ಲೋಕಧರ್ಮವನ್ನು ಉಜ್ಜ್ವಲವಾಗಿ ಬೆಳಗಿಸಿದೆ. ಎರಡು ಮಹಾಕಥಾಸಾಗರಗಳನ್ನೂ ಬಲ್ಮೆಯಿಂದ ಈಸಿ ಪಂಪ ಪಾರಂಗತನಾಗಿದ್ದಾನೆ.
ಈ ಎರಡು ಕೃತಿಗಳೂ ಪಂಪನ ಪ್ರತಿಭೆಯನ್ನು ಶಾಶ್ವತವಾಗಿ ವಿಶ್ವವ್ಯಾಪಿಯಾಗಿ ಬೆಳಗುವ ಕೃತಿಗಳೆಂಬುದರಲ್ಲಿ ಸಂದೇಹವೇ ಇಲ್ಲ. ಆಧುನಿಕ ವಿಮರ್ಶೆಯ ಪುನರ್ಮೌಲ್ಯ ಮಾಪನದ ಅಗ್ನಿಪರೀಕ್ಷೆಯಲ್ಲಿ ಎಂದೂ ತೇರ್ಗಡೆಯಾಗಬಲ್ಲ ಸತ್ತ್ವವನ್ನು ಹೊಂದಿರುವ ಕೃತಿಗಳಿವು.
ಪಂಪನ ದೃಷ್ಟಿಯಲ್ಲಿ ಭಾರತ ಕೇವಲ ವಿಕ್ರಮಾರ್ಜುನ ವಿಜಯವಲ್ಲ; ಅನೇಕ ಮಹಪುರುಷರ ಕಥೆ, ಅವರ ನಡವಳಿಕೆಗಳ ಮೂಲಕ ಲೌಕಿಕವನ್ನು ಎಂದರೆ ಲೋಕಧರ್ಮವನ್ನು ಅವನು ಬೆಳಗಿದ್ದಾನೆ. ಅವರ ಆಶಯಗಳಾದ ಮಾನವ ಜಾತಿ ತನೊಂದೇ ವಲಂ ಮತ್ತು ಚಲದೊಳ್ ದುಯೋಧನಂ, ನನ್ನಿಯೊಲ್ ಇನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೇಶಂ, ಅತ್ಯುನ್ನತಿಯೊಳ್ ಅಮರಸಿಂಧೂದ್ಭವಂ, ಚಾಪ ವಿದ್ಯಾ ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿರ್ಮಲಚಿತ್ತಂ ಧರ್ಮಪುತ್ರಂ ಮಿಗಿಲ್ ಇವರ್ಗಳಿನೀ ಭಾರತಂ ಲೋಕಪೂಜ್ಯಂ ಎಂಬ ಪಂಪನ ಉಪಸಂಹಾರ ವಾಕ್ಯದಲ್ಲಿ ಸುವ್ಯಕ್ತವಾಗಿದೆ ಎಂದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ, ಸಹ ಶಿಕ್ಷಕರಾದ ಸವಿತಾ, ಮಹದೇವಯ್ಯ, ಗಿರೀಶ, ಮೇಘಾ, ದೀಪ, ಸುಶ್ಮ, ಪಲ್ಲವಿ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.‌

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.