Jagadagala, mugilagala Kannada spread-Teacher Shivakumar
ಕೊಳ್ಳೇಗಾಲ, ನ.೭:ಜಗದಗಲ, ಮುಗಿಲಗಲ ಕನ್ನಡ ವ್ಯಾಪಿಸಿದೆ : ನಿಸರ್ಗ ಶಾಲೆ ಕನ್ನಡ ಶಿಕ್ಷಕ ಶಿವಕುಮಾರ
ಅವರು ಕೊಳ್ಳೇಗಾಲ ಪಟ್ಟಣದ ಮುಡಿಗುಂಡದ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಸಮಾರಂಭವನ್ನು ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಎಂದಾಕ್ಷಣ ನಮಗೆ ನೆನಪಿಗೆ ಬರೋದು ಹಚ್ಚ ಹಸುರಿನಿಂದ ಕೂಡಿರುವ ಸುಂದರ ಬೆಟ್ಟ ಗುಡ್ಡಗಳು, ಸೊಗಸಾಗಿ ಹರಿಯುವ ನದಿಗಳು, ಬಸವಾದಿ ಶರಣರು – ಸಾಧು ಸಂತರು – ದಾಸರು – ಕವಿಗಳಿಂದ ಕಂಗೊಳಿಸುತ್ತಿರುವ ಶ್ರೀಗಂಧದ ನಾಡು ಕರ್ನಾಟಕ. ಈ ಹೆಸರಿಗೆ ಒಂದು ಅದ್ಭುತ ಶಕ್ತಿ ಇದೆ.
ಕನ್ನಡ ರಾಜ್ಯೋತ್ಸವದ – ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಭಾಷೆ, ಪರಂಪರೆ ಮತ್ತು ವೈವಿಧ್ಯತೆಯನ್ನು ಗೌರವಿಸಲು ಒಂದು ರೋಮಾಂಚಕ ಆಚರಣೆಯಾಗಿದೆ. ಇಂದು ಹಲವಾರು ಪರ ಭಾಷೆಗಳ ನಡುವೆ ಕನ್ನಡವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾದಂತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕನ್ನಡ ಶಾಲೆಯಲ್ಲಿ ಓದುವವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ. ಇಂಗ್ಲೀಷ್ ಶಿಕ್ಷಣ ಇಂದು ದೊಡ್ಡ ಮಟ್ಟದಲ್ಲಿ ಎಲ್ಲರ ಮನಸ್ಸಿನಲ್ಲಿ ಹಿಡಿತ ಸಾಧಿಸಿದೆ ಎಂದರೆ ಬಹುಶಃ ತಪ್ಪಾಗುವುದಿಲ್ಲ. ಕನ್ನಡವನ್ನು ಇಂದು ಹೆಚ್ಚಾಗಿ ಆರ್ಥಿಕವಾಗಿ ಸದೃಢರಲ್ಲದವರು, ಕೂಲಿಕಾರರು, ಬಡವರು, ಕಾರ್ಮಿಕರು ಕಲಿಯುತ್ತಿದ್ದಾರೆ. ಒಂದು ರೀತಿಯಲ್ಲಿ ಇವರೇ ನೋಡಿ ನಿಜವಾಗಿಯೂ ಕನ್ನಡವನ್ನು ರಕ್ಷಿಸಲು ಹೆಚ್ಚು ಜವಾಬ್ದಾರಿಯನ್ನು ಹೊತ್ತವರು. ಆದರೆ ಕನ್ನಡ ಶಾಲೆಯಲ್ಲಿ ಓದಿದವರನ್ನು ಎಲ್ಲೋ ಒಂದು ಕಡೆ ಕೀಳಾಗಿ ಕಾಣುವ ಜನರು ಕೂಡ ನಮ್ಮ ಸುತ್ತಮುತ್ತ ಇದ್ದಾರೆ ಎಂಬುದು ವಿಪರ್ಯಾಸ. ಪ್ರತಿ ಹಳ್ಳಿಗಳಲ್ಲಿಯೂ ಇಂಗ್ಲೀಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿವೆ ಜೊತೆಗೆ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಯಲ್ಲಿ ಓದಿಸಿದರೆ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ಮಾನಸಿಕ ಭಾವನೆಯನ್ನು ಹೊಂದಿರುವಂಥದ್ದು ನಿಜಕ್ಕೂ ಬೇಸರದ ಸಂಗತಿ. ಹೆಚ್ಚಿನ ಇಂಗ್ಲೀಷ್ ಶಾಲೆಗಳ ಶಾಲಾ ಶುಲ್ಕವನ್ನ ಕೇಳಿದರೆ ಭಯ ಆಗುತ್ತೆ. ಇದೇ ಸ್ಥಿತಿ ಮುಂದಿನ ದಿನಗಳಲ್ಲಿ ಮುಂದುವರೆದರೆ ಕ್ರಮೇಣ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿ ಬಂದರೂ ಕೂಡ ಯಾವುದೇ ರೀತಿಯಾದಂತಹ ಆಶ್ಚರ್ಯವಿಲ್ಲ. ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಾಲ, ಸಂಗೀತ, ಯಕ್ಷಗಾನ ಕಟ್ಟಡದ ವ್ಯವಸ್ಥೆ ಸೇರಿದಂತೆ ವಿವಿಧ ಸೌಲತ್ತುಗಳನ್ನು ಒದಗಿಸಿಕೊಡಬೇಕು. ಕನ್ನಡ ಮಾಧ್ಯಮದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ಮಾಡಬೇಕು ಮತ್ತು ಅಲ್ಲಿಯೇ ಇಂಗ್ಲೀಷ್ ಕಲಿಸುವಂತಹ ಏರ್ಪಾಡು ಮಾಡುವುದರಿಂದ ಶಿಕ್ಷಣವು ಸುಲಭವಾಗುತ್ತದೆ. ವಿದ್ಯಾರ್ಥಿಗಳು ಪೋಷಕರು ಇಂಗ್ಲೀಷ್ ಶಾಲೆಯನ್ನು ಹುಡುಕಿಕೊಂಡು ಹೋಗುವ ಅನಿವಾರ್ಯತೆಯು ತಪ್ಪುತ್ತದೆ ಮತ್ತು ಕನ್ನಡ ಶಾಲೆಗಳನ್ನು ಮುಚ್ಚುವ ಅವಶ್ಯಕತೆಗಳು ಬರುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ ಮಾತನಾಡಿ, ಕನ್ನಡ ಶಾಲೆಯಲ್ಲಿ ಓದಿದ ಅನೇಕರು ಇಂದು ಬಹಳಷ್ಟು ಸಾಧನೆ ಮಾಡಿದ್ದಾರೆ. ಕನ್ನಡ ಶಾಲೆಯಲ್ಲಿ ಓದಿದವರಿಗೆ ಆತ್ಮ ಸ್ಥೈರ್ಯ, ಛಲ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ, ನಾಗರಾಜು, ಸಿದ್ದರಾಜು, ಶಂಕರ ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.