Kannada Month Festival organized by JSB FoundationatKamagereshreemahadeshwar High School, Kollegala Taluk.
ಕೊಳ್ಳೇಗಾಲ, ನ.೪: ಕನ್ನಡ ಅಸ್ಮಿತೆಯ ಬೀಜ ಬಿತ್ತಿದ್ದ ಕದಂಬ ದೊರೆ ಮಯೂರ ವರ್ಮ : ಉಪನ್ಯಾಸಕ ಮಯೂರ
ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಶ್ರೀ ಮಹದೇಶ್ವರ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಸಮಾರಂಭವನ್ನು ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡವನ್ನು ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದ ಕರ್ನಾಟಕದ ಮೊದಲ ರಾಜ ಮಯೂರ ವರ್ಮ ಮತ್ತು ಬನವಾಸಿ ಕದಂಬರು ಕರ್ನಾಟಕದ ಮೊದಲ ರಾಜ ಮನೆತನವಾಗಿದೆ. ಈ ರಾಜ ಮನೆತನದ ಮೊದಲ ರಾಜ ಮಯೂರ ವರ್ಮ ಕನ್ನಡವನ್ನು ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಕನ್ನಡ ಅಸ್ಮಿತೆಯ ಬೀಜವನ್ನು ಬಿತ್ತಿದ್ದರು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದದಲ್ಲಿ ಜನಿಸಿದ ಮಯೂರ ಶರ್ಮ, ಅಲ್ಲೇ ವಿದ್ಯಾಭ್ಯಾಸ ನಡೆಸಿ ಬಳಿಕ ಹೆಚ್ಚಿನ ಶಿಕ್ಷಣ ಪಡೆಯುವ ಹಂಬಲದಿಂದ ತನ್ನ ತಾತನ ಜೊತೆ ತಮಿಳುನಾಡಿನ ಕಂಚಿಗೆ ತೆರಳಿದ್ದರು. ಕೆಲ ವರ್ಷಗಳ ಬಳಿ ಮಯೂರ ಶರ್ಮ ವಿದ್ಯಾಪಾರಂಗತರಾಗುತ್ತಾರೆ. ಸಂದರ್ಭವೊಂದರಲ್ಲಿ ಪಲ್ಲವ ಕ್ಷತ್ರಿಯರು ಮಯೂರ ಶರ್ಮನನ್ನು ಕಟುವಾದ ಮಾತುಗಳಿಂದ ನಿಂದಿಸುತ್ತಾರೆ. ಈ ಅವಮಾನದಿಂದ ಆಕ್ರೋಶಗೊಂಡ ಮಯೂರ ಶರ್ಮನಲ್ಲಿ ಪಲ್ಲವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ದೃಢಸಂಕಲ್ಪ ತೀವ್ರಗೊಂಡಿತು. ತಾನೂ ಕ್ಷತ್ರಿಯನಾಗಿ ಸೈನ್ಯವನ್ನು ಕಟ್ಟಿ, ಪಲ್ಲವರನ್ನು ಸೋಲಿಸಬೇಕೆಂದು ನಿಶ್ಚಯಿಸಿ, ಕೈಯಲ್ಲಿ ಖಡ್ಗವನ್ನು ಹಿಡಿಯುತ್ತಾರೆ. ಈ ಮೂಲಕ ಮಯೂರ ಕ್ಷತ್ರಿಯರಾಗುತ್ತಾರೆ. ಬನವಾಸಿಗೆ ಹೋಗಿ ‘ಕದಂಬ ವಂಶ’ ಸ್ಥಾಪಿಸಿ ‘ಮಯೂರ ಶರ್ಮ’ ಎಂದಿದ್ದ ಹೆಸರು ‘ಮಯೂರ ವರ್ಮ’ ಎಂದಾಗುತ್ತದೆ ಎಂದು ಇತಿಹಾಸ ಹೇಳುತ್ತದೆ ಎಂದು ತಿಳಿಸಿದರು.
ತಾಳಗುಂದ ಶಾಸನ ಹಲ್ಮಿಡಿಗಿಂತಲೂ ಪ್ರಾಚೀನ ಶಾಸನ: ತಾಳಗುಂದ ಒಂದು ಕಾಲದಲ್ಲಿ ಕದಂಬರ ಪ್ರಮುಖ ಕೇಂದ್ರವಾಗಿತ್ತು. ತಾಳಗುಂದದ ಸ್ತಂಭ ಶಾಸನ ಕನ್ನಡ ನಾಡನ್ನು ಆಳಿದ ಪ್ರಥಮ ಕನ್ನಡಿಗ ಅರಸನ ಬಗ್ಗೆ ಮಾಹಿತಿ ನೀಡುತ್ತದೆ. ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದಲ್ಲಿ ಭಾರತೀಯ ಪುರತಾತ್ವ ಇಲಾಖೆ 2012ರಲ್ಲಿ ಉತ್ಖನನದಿಂದ ಪತ್ತೆಯಾದ ಶಾಸನ, ಕ್ರಿಶ 450 ರಲ್ಲಿ ರಚನೆಯಾದ ಹಲ್ಮಿಡಿ ಶಾಸನಕ್ಕಿಂತಲೂ ಕನ್ನಡದ ಅತ್ಯಂತ ಪ್ರಾಚೀನ ಶಾಸನ ಎಂದು ತಿಳಿದಿ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್, ಕನ್ನಡ ನಮ್ಮ ಅಸ್ಮಿತೆ. ನಮ್ಮ ಅಸ್ತಿತ್ವ. ಈ ನಮ್ಮ ಅಸ್ತಿತ್ವಕ್ಕೆ ದಕ್ಕೆ ಬರುತ್ತಿದೆ. ಇದನ್ನು ತಡೆದು ನಿಲ್ಲಿಸಬೇಕು. ಕನ್ನಡಿಗರು ತಮ್ಮ ಸ್ವಂತಿಕೆಯನ್ನು ಹೆಚ್ಚಾಗಿ ಬಳಸಬೇಕು ಎಂದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾಂಬ, ಸಹ ಶಿಕ್ಷಕರಾದ ಉಮೇಶ, ಶಶಿಕಲಾ, ಮಮತ ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.