Call for nominations for the Cobra Media Award

ಕೊಪ್ಪಳ: ಇಲ್ಲಿನ ಕೋಬ್ರಾ (ಕೊಪ್ಪಳ, ರಾಯಚೂರು ಮತ್ತು ಅವಿಭಜಿತ ಬಳ್ಳಾರಿ) ಮೀಡಿಯಾ ಗ್ರೂಪ್ ಮೂಲಕ ಮೊದಲ ಬಾರಿಗೆ ಮಾಧ್ಯಮ ಕ್ಷೇತ್ರದ ಹಿರಿಯ ಸಾಧಕರನ್ನು ಗುರುತಿಸುವ ಕೋಬ್ರಾ ಮೀಡಿಯಾ ಅವಾರ್ಡ್ ಪ್ರಶಸ್ತಿಗೆ ನಾಮನಿರ್ದೇಶನ ಆಹ್ವಾನಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ವಿಭಿನ್ನ ರೀತಿಯ ಪ್ರಶಸ್ತಿ ಪುರಸ್ಕಾರಗಳನ್ನು ಒಂದಲ್ಲಾ ಒಂದು ಸಂಸ್ಥೆಗಳು ನೀಡುತ್ತಿದ್ದರೂ ಸಹ ಮನುಷ್ಯನ ಸಾಧನೆ ಕೆಲಸ ಮತ್ತು ಆಯುಷ್ಯವನ್ನು ಗಮನಿಸಿದರೆ ಇನ್ನಷ್ಟು ಅಂತಹ ಉತ್ತಮವಾದ ಗುರುತಿಸುವಿಕೆ ಅಗತ್ಯವಿದೆ ಎಂಬುದನ್ನು ಮನಗಂಡು ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪ್ರತಿ ತಾಲೂಕಿನ ಇಬ್ಬರು ಮಾಧ್ಯಮ ಕ್ಷೇತ್ರದ ಹಿರಿಯ ಸಾಧಕರನ್ನು (೧೫ ವರ್ಷ ಸೇವೆ ಮಾಡಿದ) ಗುರುತಿಸಿ “ಕೋಬ್ರಾ ಮೀಡಿಯಾ ಅವಾರ್ಡ್-೨೪” ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಇದಕ್ಕೆ ಪ್ರತಿ ತಾಲೂಕಿನ (ಒಟ್ಟು ೨೩ ತಾಲೂಕಿನಿಂದ ೪೬ ಜನರನ್ನು) ಇಬ್ಬರನ್ನು ಆಯ್ಕೆ ಮಾಡಬೇಕಾಗಿದ್ದು, ಅಲ್ಲಿನ ಪತ್ರಿಕಾ ಸಂಸ್ಥೆಗಳು ಹೆಸರುಗಳನ್ನು ನೀಡಬೇಕು ಎಂದು ಕಾರ್ಯಕ್ರಮ ಸಂಘಟಕ ಕೋಬ್ರಾ ಮೀಡಿಯಾ ಗ್ರೂಪ್ ಮುಖ್ಯಸ್ಥ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆಯಲ್ಲಿ ಕೋರಿದ್ದಾರೆ.
ಇದರ ಜೊತೆಗೆ ಜಿಲ್ಲೆಗೆ ಒಬ್ಬ ಪತ್ರಿಕಾ ಛಾಯಾಗ್ರಾಹಕ, ಒಬ್ಬ ಮಹಿಳಾ ಜರ್ನಲಿಷ್ಟ್‌ಗೂ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ೨ ಸಾವಿರ ನಗದು, ಆಗರ್ಷಕ ಸ್ಮರಣಿಕೆ, ರಾಜ್ಯಮಟ್ಟದ ಗೌರವ ಜೊತೆಗೆ ಪ್ರಶಸ್ತಿ ಪುರಸ್ಕೃತರ ಪರಿಚಯ ಕೃತಿಯನ್ನು ತರಲು ನಿರ್ಧರಿಸಲಾಗಿದೆ. ಪ್ರಶಸ್ತಿ ಸಮಾರಂಭದ ಜೊತೆಗೆ ಮೀಡಿಯಾ ಜಾತ್ರೆ (ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ, ಪತ್ರಿಕೆ, ಕ್ಯಾಮರಾ, ಲೈವ್ ಯೂನಿಟ್ಸ್ ಪ್ರದರ್ಶನ ಮತ್ತು ಮಾರಾಟ) ನಡೆಸಲು ಚಿಂತಿಸಲಾಗಿದ್ದು ಇದನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಕಾರ್ಯಕ್ರಮಕ್ಕೆ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಕರ್ನಾಟಕ ಮಾಧ್ಯಮ ಅಕಾಡಮಿ ಸೇರಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಲಾಗಿದೆ. ತಮ್ಮ ತಾಲೂಕಿನ ಹೆಸರನ್ನು ನವೆಂಬರ ೧೫ರೊಳಗೆ ಮಂಜುನಾಥ ಜಿ. ಗೊಂಡಬಾಳ ನಂ. ೧೨, ತಾಲೂಕ ಪಂಚಾಯತಿ ಕಾಂಪ್ಲೆಕ್ಸ್, ಕೊಪ್ಪಳ. ಮೊ: ೯೪೪೩೦೦೦೭೦ ಇವರಿಗೆ ಕಳುಹಿಸಿಕೊಡಲು ಕೋರಿದ್ದಾರೆ.