
You have to cross the ditch to go to school – build a bridge and create a road


ಕಾನ ಹೊಸಹಳ್ಳಿ: ಪ್ರತಿ ವರ್ಷ ಮಳೆಗಾಲದಲ್ಲಿ ಹರಿಯುವ ಹಳ್ಳವನ್ನು ನೂರಾರು ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡುತ್ತಿದೆ. ಮಕ್ಕಳು ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಶಾಲೆಗೆ ಹೋಗಬೇಕಾಗಿದೆ. ತಾಲೂಕಿನ ಹೂಡೇಂ ಗ್ರಾ.ಪಂ ವ್ಯಾಪ್ತಿಯ ತಾಯಕನಹಳ್ಳಿ ಗಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯು ಚಿನ್ನಹಗರಿ ನದಿಯ ದಡದಲ್ಲಿ ಇರುವುದರಿಂದ ವಿದ್ಯಾರ್ಥಿಗಳು ಪ್ರತಿವರ್ಷ ಮಳೆಗಾಲದಲ್ಲಿ ಹರಿಯುವ ಹಳ್ಳದಿಂದ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತದೆ. ಈ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಲಿಯಲು ಬರುತ್ತಿದ್ದು, ಮಕ್ಕಳು ಅಪಾಯ ಸ್ಥಿತಿಯಲ್ಲೇ ಹಳ್ಳ ದಾಟಿ ಬರಬೇಕು. ಮತ್ತೊಂದು ರಸ್ತೆ ಬಳಸಿದರೆ ಅಕ್ಕ ಪಕ್ಕದ ಜಮೀನಿನಲ್ಲಿ ಸುತ್ತಿ ಬರಬೇಕು. ಹೊಲದ ಮಾಲೀಕರು ಬೆಳೆ ಹಾಳಾಗುತ್ತೆ ಇಲ್ಲಿ ಬರಬೇಡಿ ಎಂದು ಬಯ್ಯುತ್ತಾರೆ. ಹಳ್ಳದ ನೀರು ಕಡಿಮೆ ಇದ್ದಾಗ ಹೇಗೋ ದಾಟಿಕೊಂಡು ಮಕ್ಕಳು ಶಾಲೆಗೆ ಬರುತ್ತಾರೆ. ಈ ನದಿಯು ಮೂಲತಃ ದಾವಣಗೆರೆ, ಚಿತ್ರದುರ್ಗದ ಪಶ್ಚಿಮ ಬೆಟ್ಟಗಳಲ್ಲಿ ಹುಟ್ಟಿ ಹರಿದು ಬರುತ್ತೆ, ಕಳೆದ 1 ತಿಂಗಳಿಂದ ಅತಿ ಹೆಚ್ಚು ಮಳೆಯಾದ ಕಾರಣ ನದಿಯು ಹರಿವು ಹೆಚ್ಚಾಗಿದೆ. ದಸರಾ ರಜೆ ಮುಗಿದು ಇಂದು ಸೋಮವಾರ ಶಾಲೆಗಳು ಆರಂಭಗೊಂಡಿದ್ದು ನೀರು ಹೆಚ್ಚು ಅರಿಯುತ್ತಿದ್ದು ಲೆಕ್ಕಿಸದೇ ವಿದ್ಯಾರ್ಥಿಗಳು ಅದರಲ್ಲೇ ಶಾಲೆಗೆ ಬಂದರು. ಅವರಿಗೆ ಶಿಕ್ಷಕರು ನೆರವಾದರು. ಕೆಲವರು ಹೊಲ ಗದ್ದೆಗಳ ಮೂಲಕ ಸುತ್ತು ಬಳಸಿಕೊಂಡು ತೆರಳಿದರು. ಸಂಜೆ ಕೂಡ ನೀರಿನ ಹರಿವು ಯಥಾಸ್ಥಿತಿ ಇತ್ತು. ಪುನಃ ವಿದ್ಯಾರ್ಥಿಗಳು ಅದರಲ್ಲೇ ವಾಪಸ್ ಬಂದರು. ಗ್ರಾಮಸ್ಥರು ಈಗಾಗಲೇ ಸಾಕಷ್ಟು ಬಾರಿ ಹಳ್ಳಕ್ಕೆ ಸೇತುವೆಯನ್ನು ಕಟ್ಟಲು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಿಲ್ಲ ಹಾಗಾಗಿ ಶೀಘ್ರದಲ್ಲಿ ಸೇತುವೆಯನ್ನು ನಿರ್ಮಿಸಲು ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಈಡೇರದ ಸೇತುವೆ ಬೇಡಿಕೆ: 2007ರಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಯಿತು. ಅಂದಿನಿಂದಲೂ ಇಲ್ಲಿಯವರೆಗೂ ಸೇತುವೆ ನಿರ್ಮಿಸಿಲ್ಲ. ಹಲವು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಿಲ್ಲ. ಸೇತುವೆ ಮಂಜೂರಾಗಿದೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳುತ್ತಿದ್ದಾರೆಯೇ ಹೊರತು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.
ಕೆಸರು ಗದ್ದೆಯಾದ ರಸ್ತೆ: ಶಾಲಾ ಸ್ಥಾಪನೆಯಾಗಿ 18 ವರ್ಷವಾದರೂ ಸಿಸಿ ರಸ್ತೆ ಭಾಗ್ಯ ಕಾಣದ ಶಾಲೆಯ ರಸ್ತೆ, ಭತ್ತದ ನಾಟಿ ಮಾಡುವ ಗದ್ದೆಯಂತೆ ಕಾಣುತ್ತಿರುವ ರಸ್ತೆ, ರಸ್ತೆಯುದ್ದಕ್ಕೂ ಬಳ್ಳಾರಿ ಜಾಲಿ ಗಿಡಗಳು ಆವರಿಸಿವೆ. ಅಲ್ಲಲ್ಲಿ ಬಿದ್ದ ಗುಂಡಿಗಳಲ್ಲಿ ಮಳೆ ನೀರು ನಿಂತು ನಿರ್ಮಾಣಗೊಂಡ ಬೃಹತ್ ಹೊಂಡಗಳು. ಇದು ಶಾಲೆಗೆ ಸಂಪರ್ಕಿಸುವ ರಸ್ತೆಯ ಪರಿಸ್ಥಿತಿ.
ಪ್ರತಿ ವರ್ಷ ಮಳೆಗಾಲದಲ್ಲಿ ಹರಿಯುವ ಚಿನ್ನ ಹಗರಿ ಹಳ್ಳದಲ್ಲಿ ನೂರಾರು ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡುತ್ತಿದೆ. ಇದರಿಂದಾಗಿ ಮಕ್ಕಳಿಗೆ, ರೈತರಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ತಕ್ಷಣವೇ ಸೇತುವೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು.
•ಕುಮಾರ್ ರೆಡ್ಡಿ ತಾಯಕನಹಳ್ಳಿ, ಗ್ರಾ.ಪಂ ಸದಸ್ಯ ಹೂಡೇಂ
ಕಳೆದ ಒಂದು ತಿಂಗಳಿಂದ ಬಿಡುವಿಲ್ಲದೆ ಹಳ್ಳ ಹರಿಯುತ್ತಿದೆ, ಇಂದು ಬೆಳಗ್ಗೆ ಹೆಚ್ಚು ನೀರು ಬಂದಿದ್ದು ಅದರಲ್ಲೇ ವಿದ್ಯಾರ್ಥಿಗಳು ತೆರಳಿದರು. ಶಿಕ್ಷಕರು ದಡ ಸೇರಿಸಲು ನೆರವಾದರು. ಹಳ್ಳಕ್ಕೆ ಸೇತುವೆ ನಿರ್ಮಿಸಿದರೆ ವಿದ್ಯಾರ್ಥಿಗಳು, ರೈತರಿಗೆ, ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ.
•ರಂಗಪ್ಪ, ಪ್ರೌಢ ಶಾಲೆಯ ಮುಖ್ಯಶಿಕ್ಷಕ


