Martyrs’ Day celebration in Halasagarhatti village

ಗುಡೇಕೋಟೆ: ದೇಶದ ಭದ್ರತೆ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡಿ ವೀರ ಮರಣವನ್ನಪ್ಪಿದ ಪೊಲೀಸರಿಗೆ ಗೌರವ ನಮನ ಸಲ್ಲಿಸುವ ಸಲುವಾಗಿ ನಡೆದ ಪೊಲೀಸ್ ಹುತಾತ್ಮರ ದಿನ ಆಚರಣೆ ಕಾರ್ಯಕ್ರಮ ಹಾಲಸಾಗರಹಟ್ಟಿ ಗ್ರಾಮದ ಹುತಾತ್ಮ ಯೋಧ ಜಿ.ಕುಮಾರಸ್ವಾಮಿ ಸ್ಮಾರಕದ ಬಳಿ ಸೋಮವಾರ ಬಹಳ ಅರ್ಥಪೂರ್ಣವಾಗಿ ನಡೆಯಿತು.
ಪೊಲೀಸ್ ಹುತಾತ್ಮರ ದಿನದ ಸ್ಮರಣೆ ಅಂಗವಾಗಿ ಕೂಡ್ಲಿಗಿ ತಾಲೂಕಿನ ಹಾಲಸಾಗರಹಟ್ಟಿ ಗ್ರಾಮದಲ್ಲಿ ಗುಡೇಕೋಟೆ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಜಯಣ್ಣ,
ಮೊದಲಿಗೆ ಗ್ರಾಮಸ್ಥರು,ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಗಣ್ಯರು ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಚ ಸಮರ್ಪಣೆ ಮಾಡಿದರು.
ಬಳಿಕ ಗುಡೇಕೋಟೆ ಪೋಲೀಸ್ ಠಾಣೆಯ ಎಎಸ್ಐ ಬಾಬಾ ಫಕೃದ್ವೀನ್ ಮಾತನಾಡಿ, ಕಾನೂನು ಸುವ್ಯವಸ್ಥೆಗಾಗಿ ಕರ್ತವ್ಯ ದಲ್ಲಿದ್ದ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರನ್ನು ಮತ್ತು ಯೋಧರನ್ನು ಇಂದು ಸ್ಮರಣೆ ಮಾಡಲಾಗುತ್ತಿದೆ.
ರಾಜ್ಯದ 15 ಮಂದಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 414 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಅವರುಗಳನ್ನು ಸ್ಮರಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗ್ರಾಮದ ಮಾಜಿ ಸೈನಿಕ ಜಿ. ವೆಂಕಟೇಶ್ ಮಾತನಾಡಿ, ನಾಡಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ನಾವೆಲ್ಲರು ಯಾವುದೇ ಭಯ-ಭೀತಿ ಇಲ್ಲದೆ ನೆಮ್ಮದಿ ಜೀವನ ನಡೆಸಲು ಪೊಲೀಸರು ಸಹ ಕಾರಣರಾಗಿದ್ದಾರೆ. ಹುತಾತ್ಮರಾದ ಪೊಲೀಸ್ ಕುಟುಂಬಕ್ಕೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಜಯಣ್ಣ, ಗುಡೇಕೋಟೆ ಪೋಲೀಸ್ ಠಾಣೆಯ ಎಎಸ್ಐ ಬಾಬಾ ಫಕೃದ್ವೀನ್,ಮಾಜಿ ಸೈನಿಕರಾದ ಜಿ.ವೆಂಕಟೇಶ್, ಗ್ರಾಮದ ಹಿರಿಯರಾದ ಜಿ.ಮಹಾದೇವಪ್ಪ, ಸಂಜೀವಪ್ಪ,ಜೆ.ಶಿವಕುಮಾರ್,ಜಿ.ಅಂಜಿನಪ್ಪ, ಸೇರಿದಂತೆ ಅನೇಕ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.