Women take advantage of dairy training – EO Amaresh
ರಾಯಚೂರು.ಅ.15- ಸ್ವ ಸಹಾಯ ಗುಂಪಿನ ಮಹಿಳೆಯರು ಹೈನುಗಾರಿಕೆ ತರಬೇತಿ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಮಸ್ಕಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ರವರು ಹೇಳಿದರು.
ಇಂದು ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿರುವ ಜೀವನ ಜ್ಯೋತಿ ಗ್ರಾಮ ಪಂಚಾಯತಿ ಮಟ್ಟದ ಕಚೇರಿಯಲ್ಲಿ ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ತಾಲ್ಲೂಕು ಪಂಚಾಯತಿ ಮಸ್ಕಿ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ರಾಯಚೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉನ್ನತಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಇಂದು ಕುಟುಂಬ ನಿರ್ವಹಣೆಗೆ ಸೀಮಿತವಾಗಿಲ್ಲ. ಸರ್ಕಾರ ಜಾರಿಗೊಳಿಸಿದ ಅನೇಕ ಯೋಜನೆಗಳಿಂದ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಹಣ ಉಳಿತಾಯ ಮಾಡಿ, ಕುಟುಂಬದ ಕಷ್ಟ ಕಾಲದಲ್ಲಿ ನೆರವಾಗುತ್ತಿದ್ದಾಳೆ. ಹೈನುಗಾರಿಕೆ ಉದ್ಯಮ ಮಹಿಳೆಯರನ್ನು ಅವಲಂಬಿಸಿದೆ. ಪಶು ವೈದ್ಯರು, ಪಶು ಸಖಿಯರ ಮಾರ್ಗದರ್ಶನದಲ್ಲಿ ಹೈನುಗಾರಿಕೆ ಕೈಗೊಂಡರೆ, ಲಾಭ ಕಂಡುಕೊಳ್ಳಬಹುದು ಎಂದರು.
ತರಬೇತಿಯಲ್ಲಿ ಭಾಗವಹಿಸುವ ಮಹಿಳೆಯರು ಸಮಯಪಾಲನೆ ಮಾಡಬೇಕು. ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಪ್ರತಿ ದಿನ ವಿಷಯ ತಜ್ಞರು ಮಾಹಿತಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಾಂತಪ್ಪ, ಆರ್.ಸೆ.ಟಿ ನಿರ್ದೇಶಕರಾದ ವಿಜಯಕುಮಾರ್, ತರಬೇತಿದಾರರಾದ ಶೈಲಜಾ, ಎನ್.ಆರ್.ಎಲ್.ಎಮ್ ಬ್ಲಾಕ್ ಮ್ಯಾನೇಜರ್ ಮೌನೇಶ, ವಲಯ ಮೇಲ್ವಿಚಾರಕಾರದ ಪ್ರಕಾಶ, ಮುಖ್ಯ ಪುಸ್ತಕ ಬರಹಗಾರರಾದ ವೀರಮ್ಮ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಸಿದ್ದಮ್ಮ, ಪಾರ್ವತಮ್ಮ , ಕೃಷಿ ಸಖಿ ದೇವಮ್ಮ ಸ್ವ ಸಹಾಯ ಗುಂಪಿನ ಮಹಿಳೆಯರು ಭಾಗಿಯಾಗಿದ್ದರು.