Quarterly meeting is helpful for comprehensive development of villages
ಗುಡೇಕೋಟೆ: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್ ಕೃಷ್ಣ ಹೇಳಿದರು.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ಅಭಿವೃದ್ದಿ, ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕರ್ನಾಟಕ ಅಭಿವೃದ್ಧಿ ಕಾರ‍್ಯಕ್ರಮಗಳ ಸಂಯುಕ್ತ ಆಶ್ರಯದಲ್ಲಿನಡೆದ ತ್ರೈಮಾಸಿಕ 20 ಅಂಶಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಮಾತನಾಡಿದರು.
”ಹಿಂದೆ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಮಾತ್ರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿತ್ತು. ಈಗ ಸರಕಾರ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಬೇಕು ಎಂದು ಆದೇಶ ನೀಡಿರುವ ಹಿನ್ನೆಲೆಯಲ್ಲಿಈ ಕಾರ‍್ಯಕ್ರಮವನ್ನು ಆಯೋಜನೆ ಮಾಡಲಾಗಿದೆ,” ಎಂದರು.
”ಇತಂಹ ಕಾರ‍್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ವಿಸ್ತರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿಯಾಗಲು ಬೇಕಾದ ಕಾಮಗಾರಿಗಳನ್ನು ಅಧಿಕಾರಿಗಳಿಂದ ಮಾಹಿತಿ ಹಾಗೂ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸೂಕ್ತ ಪರಿಹಾರ ದೊರಕಲು ಅನುಕೂಲವಾಗುತ್ತದೆ,”ಎಂದು ಹೇಳಿದರು.
”ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಗುಡೇಕೋಟೆ,ಸಿಡೇಗಲ್ಲು,ಕಸಾಪುರ,ಶ್ರೀಕಂಠಾಪುರ,ಶ್ರೀಕಂಠಾಪುರತಾಂಡ,ಯರ್ರೋಬಯ್ಯನಹಟ್ಟಿ,ಲಿಂಗನಹಳ್ಳಿತಾಂಡ, ಸೇರಿದಂತೆ 7 ಗ್ರಾಮಗಳಲ್ಲಿಪ್ರತಿ ತಿಂಗಳಿಗೊಮ್ಮೆ ಒಂದೊಂದು ಗ್ರಾಮಗಳಲ್ಲಿ ತ್ರೈಮಾಸಿಕ ಸಭೆ ಆಯೋಜನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸರಕಾರದಿಂದ ದೊರಕುವ ಸೌಲಭ್ಯ ಕುರಿತು ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗುತ್ತದೆ,” ಎಂದು ತಿಳಿಸಿದರು.
ಗ್ರಾ.ಪಂ.ಉಪಾದ್ಯಕ್ಷೆ ರತ್ನಮ್ಮ, ಗ್ರಾ.ಪಂ.ಎಲ್ಲಾ ಸದಸ್ಯರು, ಅಭಿವೃದ್ದಿ ಅಧಿಕಾರಿ ಬಸಮ್ಮ, ಕಾರ್ಯದರ್ಶಿ ರಾಮಚಂದ್ರಪ್ಪ, ಸೇರಿದಂತೆ ಶಿಕ್ಷಣ, ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜೆಸ್ಕಾಂ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಹಾಜರಿದ್ದರು.