Nagarhunase: Bore well in Katralli Thippeswamy field
ನಾಗರಹುಣಸೆ:ಕಾಟ್ರಳ್ಳಿ ತಿಪ್ಪೇಸ್ವಾಮಿ ಹೊಲದಲ್ಲಿ ಉಕ್ಕಿದ ಕೊಳವೆಬಾವಿ
ಗುಡೇಕೋಟೆ: ಕಳೆದ ಇಪ್ಪತ್ತು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಕೂಡ್ಲಿಗಿ ತಾಲೂಕಿನ ನಾಗರಹುಣಸೆ ಗ್ರಾಮದ ಕಾಟ್ರಳ್ಳಿ ಗೌಡ್ರು ತಿಪ್ಪೇಸ್ವಾಮಿ ಅವರ ಕೊಳವೆ ಬಾವಿಯಲ್ಲಿ ಏಕಾಏಕಿ ನೀರು ಉಕ್ಕಲು ಆರಂಭಿಸಿ ಗ್ರಾಮದ ಜನರಲ್ಲಿ ವಿಸ್ಮಯ ಮೂಡಿಸಿದೆ.
ಕಾಟ್ರಹಳ್ಯಾರು ತಿಪ್ಪೇಸ್ವಾಮಿ ಅವರು 4 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ 180 ಅಡಿಯಷ್ಟು ಕೊಳವೆ ಬಾವಿ ಕೊರೆಯಿಸಿದ್ದರು. ಅದರಲ್ಲಿ 2 ಇಂಚಿನಷ್ಟು ನೀರು ದೊರೆತಿತ್ತು. ಅದರಲ್ಲೇ ಅವರು ಬೇಸಾಯ ಮಾಡಿಕೊಂಡಿದ್ದರು.
ಶನಿವಾರ ಬೆಳಿಗ್ಗೆ ಅವರು ಜಮೀನಿಗೆ ಹೋದ ವೇಳೆ ಮೋಟರ್ ಆನ್ ಮಾಡದಿದ್ದರೂ ಬೋರವೆಲ್‌ನಲ್ಲಿ ನೀರು ಉಕ್ಕುತ್ತಿರುವುದು ಕಂಡು ಆಶ್ಚರ್ಯಗೊಂಡಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದ ಜನರು ತಿಪ್ಪೇಸ್ವಾಮಿ ಅವರ ಜಮೀನಿಗೆ ಬಂದು ಕೊಳವೆ ಬಾವಿಯಲ್ಲಿ ನೀರು ಉಕ್ಕುವುದನ್ನು ಪವಾಡದಂತೆ ಕುತೂಹಲದಿಂದ ವೀಕ್ಷಿಸಿದರು.
‘ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಇನ್ನು ಎರಡು ವರ್ಷಗಳ ಕಾಲ ನಮಗೆ ಬೇಸಾಯಕ್ಕೆ ಮತ್ತು ಕುಡಿಯುವ ನೀರಿಗೆ ಚಿಂತೆ ಇಲ್ಲ’ ಎಂದು ನಾಗರಹುಣಸೆ ನಿವಾಸಿ ಕೆ.ಟಿ.ಜಗದೀಶ್ ತಿಳಿಸಿದರು.